Darshanam Mogilaiah (ಚಿತ್ರ X) 
ದೇಶ

ಪದ್ಮಶ್ರೀ ಸಿಕ್ಕರೂ ತಪ್ಪದ ಗೋಳು: ನ್ಯಾಯಾಲಯದ ಮೆಟ್ಟಿಲೇರಿದ ಕಲಾವಿದ ಮೊಗಲಯ್ಯನ ಭೂಮಿ ಹೋರಾಟ! Darshanam Mogilaiah

ಪ್ರಮುಖ ಮುಖ್ಯಾಂಶಗಳು

  • ಪದ್ಮಶ್ರೀ ಪುರಸ್ಕೃತ ಕಿನೇರಾ ಜಾನಪದ ಕಲಾವಿದ ದರ್ಶನಂ ಮೊಗಿಲಯ್ಯ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ
  • ಸರ್ಕಾರ ಮಂಜೂರು ಮಾಡಿದ್ದ 600 ಚದರ ಗಜಗಳ ವಸತಿ ನಿವೇಶನದ ಹಿನ್ನಲೆ ಕೋರ್ಟ್​ ಮೆಟ್ಟಿಲೇರಿದ ಮೊಗಿಲಯ್ಯ
  • ಇತ್ತೀಚೆಗೆ ರಂಗಾರೆಡ್ಡಿ ಜಿಲ್ಲಾ ಕಲೆಕ್ಟರ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಖುದ್ದಾಗಿ ಆಗಮಿಸಿದ ಕಲಾವಿದ
ಹೈದರಾಬಾದ್: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪುರಸ್ಕೃತ, ಖ್ಯಾತ ಕಿನೇರಾ ಜಾನಪದ ಕಲಾವಿದ ದರ್ಶನಂ ಮೊಗಿಲಯ್ಯ (Darshanam Mogilaiah) ಅವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಲೆ ಮತ್ತು ಸಂಸ್ಕೃತಿಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಸರ್ಕಾರ ತಮಗೆ ಮಂಜೂರು ಮಾಡಿದ್ದ 600 ಚದರ ಗಜಗಳ ವಸತಿ ನಿವೇಶನವು ನ್ಯಾಯಾಲಯದ ವಿವಾದದಲ್ಲಿ ಸಿಲುಕಿದ್ದು, ತಮಗೆ ಆ ಜಾಗ ಸಿಗದಂತೆ ಮಾಡಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಇತ್ತೀಚೆಗೆ ರಂಗಾರೆಡ್ಡಿ ಜಿಲ್ಲಾ ಕಲೆಕ್ಟರ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಖುದ್ದಾಗಿ ಆಗಮಿಸಿದ 73 ವರ್ಷದ ಹಿರಿಯ ಕಲಾವಿದ ಮೊಗಿಲಯ್ಯ, ಜಿಲ್ಲಾಧಿಕಾರಿ ಸಿ. ನಾರಾಯಣ ರೆಡ್ಡಿ ಅವರಿಗೆ ದೂರು ಸಲ್ಲಿಸಿ ತಕ್ಷಣದ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.
ಮೊಗಿಲಯ್ಯ ಅವರ ಪ್ರಕಾರ, ತೆಲಂಗಾಣದ ಅಬ್ದುಲ್ಲಾಪುರ್ಮೆಟ್ ಮಂಡಲದ ಕುಂಟ್ಲೂರ್ ಗ್ರಾಮದಲ್ಲಿರುವ ಜಮೀನನ್ನು ಹಿಂದಿನ ಬಿಆರ್‌ಎಸ್ ಸರ್ಕಾರದ ಅವಧಿಯಲ್ಲಿ ಹಂಚಿಕೆ ಮಾಡಲಾಗಿತ್ತು. ತದನಂತರ ಪ್ರಸ್ತುತ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಈ ಜಾಗದ ಅಧಿಕೃತ ಸರ್ಕಾರಿ ಆದೇಶದ ಪ್ರತಿಯನ್ನುಮೊಗಿಲಯ್ಯ ಅವರಿಗೆ ಹಸ್ತಾಂತರಿಸಿದ್ದರು. ಇದರಿಂದಾಗಿ ಅವರು ತಮ್ಮ ಕುಟುಂಬಕ್ಕೆ ಕಾಯಂ ಆಸ್ತಿ ಸಿಕ್ಕಿದೆ ಎಂಬ ಭರವಸೆಯಲ್ಲಿದ್ದರು.
ಮೂಲಗಳ ಪ್ರಕಾರ, ಆ ಭೂಮಿಯು ಪ್ರಸ್ತುತ ಕೋರ್ಟ್​ ವ್ಯಾಜ್ಯದಲ್ಲಿದೆ. ಇದರಿಂದಾಗಿ ಸ್ಪಷ್ಟವಾದ ಹಕ್ಕು ಪತ್ರ ಪಡೆಯಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. 
ಆದಾಗ್ಯೂ, ನನಗೆ ಈ ಭೂಮಿಯನ್ನು ಸರ್ಕಾರವು ನನ್ನ ಸಾಧನೆಗಾಗಿ ಗೌರವಪೂರ್ವಕವಾಗಿ ನೀಡಿತ್ತು. ಆದರೆ,  ಕಳೆದ ಎರಡು ವರ್ಷಗಳಿಂದ ನಾನು ಅದರ ಪ್ರಯೋಜನವನ್ನು ಅನುಭವಿಸುವ ಬದಲು ಸರ್ಕಾರಿ ಕಚೇರಿಗಳು ಮತ್ತು ನ್ಯಾಯಾಲಯಗಳ ಸುತ್ತಲೂ ಅಲೆದಾಡುತ್ತಿದ್ದೇನೆ ಎಂದು ಮೊಗಿಲಯ್ಯ ಅಧಿಕಾರಿಗಳಲ್ಲಿ ಅಳಲು ತೋಡಿಕೊಂಡಿದ್ದಾರೆ. 
ಕಾನೂನು ವೆಚ್ಚಕ್ಕಾಗಿ 9 ಲಕ್ಷ ಸಾಲ!
ಈ ನಿವೇಶನವನ್ನು ಪಡೆದುಕೊಳ್ಳುವ ಪ್ರಯತ್ನದಲ್ಲಿ ಕಾನೂನು ವೆಚ್ಚಗಳು ಮತ್ತು ವಕೀಲರ ಶುಲ್ಕವನ್ನು ಪೂರೈಸುವ ಸಲುವಾಗಿ ಸುಮಾರು 9 ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆದಿರುವುದಾಗಿ ತಿಳಿಸಿದ್ದಾರೆ. 
ಇಬ್ರಾಹಿಂಪಟ್ಟಣಂ ಆರ್‌ಡಿಒ ಮತ್ತು ಅಬ್ದುಲ್ಲಾಪುರ್ಮೆಟ್ ಕಂದಾಯ ಅಧಿಕಾರಿಗಳ ಕಚೇರಿಗಳಿಗೆ ನೂರಾರು ಬಾರಿ ಅಲೆದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಎರಡು ವರ್ಷಗಳಲ್ಲಿ ಜಿಲ್ಲಾಡಳಿತದಲ್ಲಿ ಹಲವು ಕಂದಾಯ ಅಧಿಕಾರಿಗಳು ಬದಲಾಗಿದ್ದರೂ ಕೂಡ ನನ್ನ ಸಮಸ್ಯೆಯನ್ನು ಯಾರೂ ಬಗೆಹರಿಸಿಕೊಡುತ್ತಿಲ್ಲ ಎಂದು ನಿರಾಶೆ ವ್ಯಕ್ತಪಡಿಸಿದ್ದಾರೆ.
ಆದಾಗ್ಯೂ, ಅಧಿಕಾರಿಗಳು ತಮ್ಮ ದೂರನ್ನು ಅರ್ಹವಾದ ಗಂಭೀರತೆಯಿಂದ ಪರಿಗಣಿಸುತ್ತಿಲ್ಲ. ರಾಷ್ಟ್ರೀಯ ಪುರಷ್ಕೃತರಾಗಿದ್ದರೂ ನಿರ್ಲಕ್ಷ್ಯವನ್ನು ಎದುರಿಸುತ್ತಿದ್ದೇನೆ ಎಂದು ಹೇಳಿದರು.
ಇತ್ತೀಚೆಗೆ, ಮೊಗಿಲಯ್ಯ ಅವರು ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಅವರನ್ನು ಭೇಟಿಯಾಗಿದ್ದು, ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ. 
ಒಂದು ವೇಳೆ ಸಮಸ್ಯೆ ಬೇಗ ಬಗೆಹರಿಯದಿದ್ದರೆ, ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಖುದ್ದಾಗಿ ಸಂಪರ್ಕಿಸಿ ನ್ಯಾಯ ಕೇಳುವುದಾಗಿ ಮೊಗಿಲಯ್ಯ ಈಗ ಎಚ್ಚರಿಸಿದ್ದಾರೆ (ಏಜೆನ್ಸೀಸ್​).