ಸಂಜಯ್ ರಾವತ್ ಮತ್ತು ಭಗತ್ ಸಿಂಗ್ ಕೋಶ್ಯಾರಿ
ಮುಂಬೈ: ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಸೋಮವಾರ(ಜ. 26) ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವತ್ ವಾಗ್ದಾಳಿ ನಡೆಸಿದ್ದಾರೆ.
2019ರಿಂದ 2023ರವರೆಗೆ ಮಹಾರಾಷ್ಟ್ರ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಕೋಶ್ಯಾರಿ ಅವರಿಗೆ ಕೇಂದ್ರ ಸರ್ಕಾರ ಭಾನುವಾರ(ಜ. 25) ಪದ್ಮಭೂಷಣ ಪ್ರಶಸ್ತಿಯನ್ನು ಘೋಷಿಸಿದೆ.
ಈ ಕುರಿತು ಮುಂಬೈನಲ್ಲಿ ಮಾತನಾಡಿರುವ ಅವರು, ಮಹಾರಾಷ್ಟ್ರದಲ್ಲಿ ರಾಜ್ಯಪಾಲರಾಗಿದ್ದಾಗ ಉದ್ಧವ್ ಠಾಕ್ರೆ ನೇತೃತ್ವದ ಬಹುಮತವಿದ್ದ ಎಂವಿಎ ಸರ್ಕಾರವನ್ನು ಉರುಳಿಸುವ ಮೂಲಕ ಭಗತ್ ಸಿಂಗ್ ಕೊಶ್ಯಾರಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ, ಸಮಾಜ ಸುಧಾರಕರಾದ ಮಹಾತ್ಮ ಜ್ಯೋತಿಬಾ ಪುಲೆ, ಸಾವಿತ್ರಿ ಬಾಯಿ ಪುಲೆಯವರನ್ನು ಅವಮಾನಿಸಿದ ಕೋಶ್ಯಾರಿಗೆ ಪದ್ಮಭೂಷಣ ಪ್ರಶಸ್ತಿ ನೀಡುವುದನ್ನು ಮಹಾರಾಷ್ಟ್ರದ ಮಹಾಯುತಿ ಸರ್ಕಾರ ಖಂಡಿಸಬೇಕು. ಕೊಶ್ಯಾರಿ ರಾಜ್ಯಪಾಲರಾಗಿದ್ದ ಅವಧಿಯಲ್ಲಿ ಕಾನೂನುಬಾಹಿರವಾಗಿ ವರ್ತಿಸಿದ್ದಾರೆ ಎಂದು ಸುಪ್ರೀಂಕೋರ್ಟ್ ಕೂಡ ಹೇಳಿದೆ ಎಂದು ಕಿಡಿಕಾರಿದ್ದಾರೆ.
ಉದ್ದವ್ ಠಾಕ್ರೆ ಸಿಎಂ ಆಗಿದ್ದಾಗ ಸರ್ಕಾರದ ವಿರುದ್ಧ ಅತಿಯಾದ ಚಟುವಟಿಕೆಯಿಂದ ಇದ್ದ ಅವರು, ರಾಜ್ಯ ಸರ್ಕಾರ ಶಿಫಾರಸು ಮಾಡಿದ್ರೂ ವಿಧಾನಪರಿಷತ್ತಿನಲ್ಲಿ ಖಾಲಿ ಇದ್ದ 12 ಸ್ಥಾನಗಳನ್ನು ಭರ್ತಿ ಮಾಡಿರಲಿಲ್ಲ ಎಂದಿದ್ದಾರೆ.
ಸಂಜಯ್ ರಾವತ್ ಟೀಕೆ ಹೊರತಾಗಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ಕೋಶ್ಯಾರಿ ಅವರಿಗೆ ಪದ್ಮಭೂಷಣ ಘೋಷಣೆ ಆಗಿದ್ದಕ್ಕೆ ಅಭಿನಂದಿಸಿದ್ದಾರೆ. 2026 ರ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಮಹಾರಾಷ್ಟ್ರದ ಮಾಜಿ ರಾಜ್ಯಪಾಲರಾದ ಗೌರವಾನ್ವಿತ ಭಗತ್ ಸಿಂಗ್ ಕೋಶ್ಯಾರಿ ಜಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಸಾರ್ವಜನಿಕ ಜೀವನದಲ್ಲಿ ಅವರ ಅದ್ಭುತ ಪ್ರಯಾಣ ಮತ್ತು ಆಡಳಿತ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅವರ ಅಚಲ ಕೊಡುಗೆಗಳು ಪೀಳಿಗೆಗೆ ಸ್ಫೂರ್ತಿಯ ಮೂಲವಾಗಿದೆ ಎಂದು ಎಕ್ಸ್ನಲ್ಲಿ ಶುಭ ಹಾರೈಸಿದ್ದಾರೆ (ಏಜೆನ್ಸೀಸ್).