ಪದ್ಮ ಪ್ರಶಸ್ತಿ ಕಿಚ್ಚು: ಕೋಶ್ಯಾರಿಗೆ ಪದ್ಮಭೂಷಣ ನೀಡಿದ್ದಕ್ಕೆ ಸಂಜಯ್ ರಾವತ್ ಆಕ್ರೋಶ; ಇದು ಪ್ರಜಾಪ್ರಭುತ್ವದ ಕೊಲೆ ಎಂದು ವಾಗ್ದಾಳಿ | Sanjay Raut 
ದೇಶ

ಪದ್ಮ ಪ್ರಶಸ್ತಿ ಕಿಚ್ಚು: ಕೋಶ್ಯಾರಿಗೆ ಪದ್ಮಭೂಷಣ ನೀಡಿದ್ದಕ್ಕೆ ಸಂಜಯ್ ರಾವತ್ ಆಕ್ರೋಶ; ಇದು ಪ್ರಜಾಪ್ರಭುತ್ವದ ಕೊಲೆ ಎಂದು ವಾಗ್ದಾಳಿ | Sanjay Raut

ಪ್ರಮುಖ ಮುಖ್ಯಾಂಶಗಳು

  • ಮಹಾರಾಷ್ಟ್ರದಲ್ಲಿ ಪದ್ಮ ಸಂಘರ್ಷ: ಕೋಶ್ಯಾರಿ ಸಾಧನೆಗೆ ಫಡ್ನವೀಸ್ ಶ್ಲಾಘನೆ, ರಾವತ್ ತೀವ್ರ ಖಂಡನೆ
  • ಸಂವಿಧಾನ ಹಂತಕರಿಗೆ ಪ್ರಶಸ್ತಿಯೇ? ಮಾಜಿ ರಾಜ್ಯಪಾಲ ಕೋಶ್ಯಾರಿ ವಿರುದ್ಧ ಶಿವಸೇನೆ (ಯುಬಿಟಿ) ರಣಕಹಳೆ
  • ಪದ್ಮ ಪ್ರಶಸ್ತಿ ಕಿಚ್ಚು: ಉದ್ಧವ್ ಸರ್ಕಾರ ಉರುಳಿಸಿದವರಿಗೇ ಗೌರವವೇ? ಸಂಜಯ್ ರಾವತ್ ಕಟು ಪ್ರಶ್ನೆ.
ಮುಂಬೈ: ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ಕೇಂದ್ರ ಸರ್ಕಾರವು ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಘೋಷಿಸಿರುವುದು ತೀವ್ರ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ. ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್(Sanjay Raut) ಈ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದು, ಕೋಶ್ಯಾರಿ ಅವರು ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಹತೋಟಿಗೆ ತೆಗೆದುಕೊಂಡಿದ್ದರು ಎಂದು ಆರೋಪಿಸಿದ್ದಾರೆ.

ಸಂವಿಧಾನದ ಹತ್ಯೆ ಮಾಡಿದವರಿಗೆ ಪ್ರಶಸ್ತಿಯೇ..? - ರಾವುತ್ ಪ್ರಶ್ನೆ

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (MVA) ಸರ್ಕಾರವನ್ನು ಉರುಳಿಸುವಲ್ಲಿ ಕೋಶ್ಯಾರಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ದೂರಿದ್ದಾರೆ.
ಕೋಶ್ಯಾರಿ ಅವರು ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಕಗ್ಗೊಲೆ ಮಾಡಿದರು. ಬಿಜೆಪಿ ಅಧಿಕಾರಕ್ಕೆ ಬರಲಿ ಎಂಬ ಏಕೈಕ ಕಾರಣಕ್ಕೆ ಉದ್ಧವ್ ಠಾಕ್ರೆ ಸರ್ಕಾರವನ್ನು ಉರುಳಿಸಲು ಅವರು ಸಂಚು ರೂಪಿಸಿದರು. ಅಲ್ಲದೆ, ಇಂತಹ ವ್ಯಕ್ತಿಗೆ ಪದ್ಮ ಪ್ರಶಸ್ತಿ ನೀಡುವುದು ದೇಶದ ಉನ್ನತ ಗೌರವಕ್ಕೆ ಮಾಡುವ ಅವಮಾನ ಎಂದು ರಾವತ್ ಗುಡುಗಿದ್ದಾರೆ.
ಅಲ್ಲದೆ, ಛತ್ರಪತಿ ಶಿವಾಜಿ ಮಹಾರಾಜ್, ಮಹಾತ್ಮ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರಂತಹ ಮಹಾನ್ ಪುರುಷರಿಗೆ ಕೋಶ್ಯಾರಿ ಅವರು ತಮ್ಮ ಅವಧಿಯಲ್ಲಿ ಅವಮಾನ ಮಾಡಿದ್ದರು ಎಂದು ರಾವತ್ ನೆನಪಿಸಿದ್ದಾರೆ.

ಫಡ್ನವೀಸ್ ಅಭಿನಂದನೆ: ಇದು ಅರ್ಹ ಗೌರವ

ಮತ್ತೊಂದೆಡೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕೋಶ್ಯಾರಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಭಗತ್ ಸಿಂಗ್ ಕೋಶ್ಯಾರಿ ಅವರ ಸಾರ್ವಜನಿಕ ಜೀವನದ ಸುದೀರ್ಘ ಪಯಣ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅವರು ನೀಡಿದ ಕೊಡುಗೆ ಸ್ಮರಣೀಯವಾಗಿದೆ. 2026ರ ಪದ್ಮಭೂಷಣ ಪ್ರಶಸ್ತಿಯು ಅವರ ಆಡಳಿತ ಕೌಶಲಕ್ಕೆ ಸಂದ ಗೌರವ ಎಂದು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಯಾರು ಈ ಭಗತ್ ಸಿಂಗ್ ಕೋಶ್ಯಾರಿ? ವಿವಾದಗಳ ಹಿನ್ನೆಲೆ ಏನು?

ಭಗತ್ ಸಿಂಗ್ ಕೋಶ್ಯಾರಿ ಅವರು 2019 ರಿಂದ 2023 ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಅದಕ್ಕೂ ಮೊದಲು ಉತ್ತರಾಖಂಡದ ಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದ್ದರು. ಆದರೆ ಇವರ ರಾಜ್ಯಪಾಲರ ಅವಧಿಯು ಸಾಲು ಸಾಲು ವಿವಾದಗಳಿಂದ ಕೂಡಿತ್ತು.
ಸರ್ಕಾರದ ಪತನ: ಶಿವಸೇನೆಯಲ್ಲಿ ಬಂಡಾಯ ಎದ್ದಾಗ ಅವರು ವಹಿಸಿದ ಪಾತ್ರದ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಆಕ್ಷೇಪ ವ್ಯಕ್ತಪಡಿಸಿತ್ತು.
ವಿಧಾನ ಪರಿಷತ್ ನೇಮಕಾತಿ: ಉದ್ಧವ್ ಸರ್ಕಾರ ಶಿಫಾರಸು ಮಾಡಿದ 12 ಸದಸ್ಯರ ನೇಮಕಾತಿಯನ್ನು ದೀರ್ಘಕಾಲ ಬಾಕಿ ಉಳಿಸಿಕೊಂಡಿದ್ದರು.
ಶಿವಾಜಿ ಮಹಾರಾಜ್ ಕುರಿತ ಹೇಳಿಕೆ: ಛತ್ರಪತಿ ಶಿವಾಜಿ ಮಹಾರಾಜರು ಹಳೆಯ ಕಾಲದ ಐಕಾನ್ ಎಂದು ಹೇಳಿಕೆ ನೀಡುವ ಮೂಲಕ ಇಡೀ ಮಹಾರಾಷ್ಟ್ರದಾದ್ಯಂತ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿದ್ದರು.
ಈಗ ಅವರಿಗೆ ಪದ್ಮ ಪ್ರಶಸ್ತಿ ನೀಡಿರುವುದು ಮಹಾರಾಷ್ಟ್ರದ ರಾಜಕೀಯದಲ್ಲಿ ಮಹಾಯುತಿ (ಬಿಜೆಪಿ-ಶಿಂದೆ-ಅಜಿತ್ ಪವಾರ್) ಮತ್ತು ಮಹಾ ವಿಕಾಸ್ ಅಘಾಡಿ ನಡುವಿನ ಸಮರವನ್ನು ಮತ್ತಷ್ಟು ತೀವ್ರಗೊಳಿಸಿದೆ,(ಏಜೆನ್ಸೀಸ್).