ನವದೆಹಲಿ: ದೇಶದಲ್ಲಿ ಈ ಬಾರಿ ಮುಂಗಾರು ಅಕ್ಟೋಬರ್ಗೆ ಅಂತ್ಯಗೊಂಡಿದ್ದು, ಭತ್ತದ ಇಳುವರಿ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ. ಮತ್ತೊಂದೆಡೆ, ಬೇಳೆಕಾಳು, ಹತ್ತಿ ಮತ್ತು ಎಣ್ಣೆ ಕಾಳುಗಳ ಇಳುವರಿ ಇಳಿಮುಖವಾಗುವ ಸಾಧ್ಯತೆ ಹೆಚ್ಚು ಎಂದು ಕೇಂದ್ರ ಕೃಷಿ ಸಚಿವಾಲಯ ಬುಧವಾರ ತಿಳಿಸಿದೆ.
ಭತ್ತದ ಇಳುವರಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 1.4ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಮುಂಗಾರಿನ ಬೆಳೆಯಲ್ಲಿ 169.5 ದಶಲಕ್ಷ ಟನ್ನಷ್ಟು ಭತ್ತವನ್ನು ದೇಶದಲ್ಲಿ ಬೆಳೆಯಲಾಗಿತ್ತು. ಈ ಬಾರಿ ಇದು 173.3 ದಶಲಕ್ಷ ಟನ್ಗೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಕಬ್ಬಿನ ಇಳುವರಿಯೂ ಈ ವರ್ಷ ಹೆಚ್ಚಳವಾಗುವ ನಿರೀಕ್ಷೆ ಇದೆ. ಕಳೆದ ಸಾಲಿನಲ್ಲಿ 45.46 ಕೋಟಿ ಟನ್ ಇಳುವರಿ ದೊರಕಿತ್ತು. ಈ ಬಾರಿ 47.56 ಕೋಟಿ ಟನ್ಗೆ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ.
ಮೆಕ್ಕೆಜೋಳದ ಇಳುವರಿ 2.83 ಕೋಟಿ ಟನ್ (ಕಳೆದ ವರ್ಷ 2.48 ಕೋಟಿ ಟನ್), ಬೇಳೆಕಾಳುಗಳು 74 ಲಕ್ಷ ಟನ್ (ಕಳೆದ ವರ್ಷ 77 ಲಕ್ಷ ಟನ್), ತೊಗರಿ ಬೇಳೆ 35.9 ಲಕ್ಷ ಟನ್ (ಕಳೆದ ಸಾಲಿನಲ್ಲಿ 36.2 ಲಕ್ಷ ಟನ್), ಉದ್ದು 12 ಲಕ್ಷ ಟನ್ (ಕಳೆದ ವರ್ಷ 13.4 ಲಕ್ಷ ಟನ್) ಇಳುವರಿಯನ್ನು ನಿರೀಸಲಾಗುತ್ತಿದೆ. ಅದರಂತೆ ಎಣ್ಣೆಕಾಳುಗಳ ಇಳುವರಿಯು 2.7 ಕೋಟಿ ಟನ್ ಎಂದು ನಿರೀಸಲಾಗಿದೆ. ಕಳೆದ ವರ್ಷ 2.8 ಕೋಟಿ ಟನ್ ಇತ್ತು.
ದೇಶದ ಹಲವೆಡೆ ಮಳೆ ಹೆಚ್ಚಳವಾಗಿರುವುದೂ ಬೆಳೆಗಳ ಇಳುವರಿಯ ಮೇಲೆ ಪರಿಣಾಮ ಬೀರಿದೆ. ಈ ಬಾರಿಯ ಮುಂಗಾರು ದೇಶದ ಹಲವೆಡೆ ಸಕಾರಾತ್ಮಕ ಪರಿಣಾಮಗಳನ್ನು ಬೀರಿದೆ. ಅದರಿಂದಾಗಿ ಬೆಳೆಯೂ ಉತ್ತಮವಾಗಿದೆ.