ಗೃಹಸಚಿವ ಡಾ.ಜಿ.ಪರಮೇಶ್ವರ್ ಮತ್ತು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ
ಬೆಂಗಳೂರು: ಡ್ರಗ್ಸ್ ಮಾರಾಟಗಾರರ ಮನೆಗಳನ್ನು ನೆಲಸಮಗೊಳಿಸುವ ಬಗ್ಗೆ ಯೋಚಿಸಲಾಗುತ್ತಿದೆ ಎಂಬ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಹೇಳಿಕೆ, ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ(P. Chidambaram) ಅವರಿಂದ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ಡ್ರಗ್ಸ್ ಮುಕ್ತ ರಾಜ್ಯ ಮಾಡುವ ನಿಟ್ಟಿನಲ್ಲಿ ಮಾತನಾಡಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್,
ರಾಜ್ಯ ಸರ್ಕಾರವು ಮಾದಕವಸ್ತು ಮಾರಾಟಗಾರರ ವಿರುದ್ಧ ಪ್ರತಿದಿನ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಅಧಿಕಾರಿಗಳು ಅಪರಾಧಿಗಳನ್ನು ಪತ್ತೆಹಚ್ಚುತ್ತಿದ್ದಾರೆ. ಅವರಿಗೆ ಮನೆಗಳನ್ನು ಬಾಡಿಗೆಗೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ ಮಾತ್ರವಲ್ಲದೆ, ಅವರ ಮನೆಗಳನ್ನು ಕೆಡವಲು ಸಹ ಪರಿಗಣಿಸುತ್ತಿದ್ದಾರೆ ಎಂದು ಹೇಳಿದ್ದರು.
ಈ ಹೇಳಿಕೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಕಿಡಿಕಾರಿರುವ ಪಿ.ಚಿದಂಬರಂ, ಈ ಹೇಳಿಕೆಗಳಿಂದ ಗಾಬರಿಗೊಂಡಿದ್ದೇನೆ ಎಂದು ಹೇಳಿದ್ದು, ಆದ್ಯಾಗೂ ವರದಿ ತಪ್ಪಾಗಿದೆ ಎಂದು ಭಾವಿಸುತ್ತೇನೆ. ಈಗಾಗಲೇ ಸುಪ್ರೀಂಕೋರ್ಟ್ ಸರಿಯಾದ ಪ್ರಕ್ರಿಯೆಯಿಲ್ಲದೆ ಮನೆಗಳನ್ನು ಕೆಡವುವುದು ಕಾನೂನುಬಾಹಿರ ಮತ್ತು ಇತರ ಕುಟುಂಬ ಸದಸ್ಯರ ಆಶ್ರಯ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.
ಉತ್ತರ ಪ್ರದೇಶದಲ್ಲಿ ಮಾಡಿದಂತೆ ಬುಲ್ಡೋಜರ್ ನ್ಯಾಯವನ್ನು ಕಾಂಗ್ರೆಸ್ ಪಕ್ಷ ನಿರಂತರವಾಗಿ ವಿರೋಧಿಸುತ್ತಾ ಬಂದಿದೆ. ಕರ್ನಾಟಕದಂತಹ ಕಾಂಗ್ರೆಸ್ ಆಡಳಿತದ ರಾಜ್ಯವು ಉತ್ತರ ಪ್ರದೇಶದ ರೀತಿ ಅಕ್ರಮ ಹಾದಿಯಲ್ಲಿ ಸಾಗಬಾರದು ಎಂದು ಅವರು ಎಚ್ಚರಿಸಿದ್ದಾರೆ (ಏಜೆನ್ಸೀಸ್).