e-rickshaw 
ದೇಶ

ಶೋರೂಂ ಮುಂದೆ ಇ-ರಿಕ್ಷಾಕ್ಕೆ ಬೆಂಕಿ ಹಚ್ಚಿದ ಮಾಲೀಕ! ಅಸಲಿಗೆ ಕಾರಣವೇನು..?

ಜೋಧಪುರ: ಇ-ರಿಕ್ಷಾ ಚಾಲಕರೊಬ್ಬರು ತಮ್ಮ ಸ್ವಂತ ವಾಹನಕ್ಕೆ ಶೋರೂಂ ಮುಂದೆ ಬೆಂಕಿ ಹಚ್ಚಿದ ರಾಜಸ್ಥಾನದ ಜೋಧಪುರ ನಗರದಲ್ಲಿ ಮಂಗಳವಾರ ಘಟನೆ ವರದಿಯಾಗಿದೆ. ಪದೇ ಪದೇ ಬರುತ್ತಿದ್ದ ತಾಂತ್ರಿಕ ದೋಷ ಹಾಗೂ ಶೋರೂಂ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಈ ಆಕ್ರೋಶಕ್ಕೆ ಕಾರಣವಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಏನಿದು ಘಟನೆ?

ವರದಿಗಳ ಪ್ರಕಾರ, ವ್ಯಕ್ತಿಯು ಕೆಲ ಸಮಯದ ಹಿಂದೆ ಇ-ರಿಕ್ಷಾವನ್ನು ಖರೀದಿಸಿದ್ದರು. ಆದರೆ ಚಾಲನೆ ಆರಂಭಿಸಿದ ಕೆಲವೇ ದಿನಗಳಲ್ಲಿ ವಾಹನದಲ್ಲಿ ಬ್ಯಾಟರಿ ಮತ್ತು ಇತರ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಇದರಿಂದ ಬೇಸತ್ತ ಮಾಲೀಕ ಹಲವು ಬಾರಿ ಶೋರೂಂಗೆ ಭೇಟಿ ನೀಡಿ ವಾಹನವನ್ನು ಸರಿಪಡಿಸಿಕೊಡುವಂತೆ ಅಥವಾ ಬದಲಿಸಿಕೊಡುವಂತೆ (Replace) ಮನವಿ ಮಾಡಿದ್ದರು.
ಆದರೆ, ಶೋರೂಂನವರು ವಾಹನ ಬದಲಿಸಲು ನಿರಾಕರಿಸಿದ್ದಲ್ಲದೆ, ಸರಿಯಾದ ಸ್ಪಂದನೆ ನೀಡಿರಲಿಲ್ಲ ಎನ್ನಲಾಗಿದೆ. ಇದರಿಂದ ತೀವ್ರ ಆಕ್ರೋಶಗೊಂಡ ಚಾಲಕ, ನಗರದ ಐದನೇ ರಸ್ತೆಯಲ್ಲಿರುವ ಶೋರೂಂನ ಹೊರಗಡೆ ತನ್ನ ಇ-ರಿಕ್ಷಾವನ್ನು ನಿಲ್ಲಿಸಿ, ಅದರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ವಿಡಿಯೋ ವೈರಲ್..
ವಾಹನಕ್ಕೆ ಬೆಂಕಿ ಹಚ್ಚುವ ಸಮಯದಲ್ಲಿ ಆತ ಅತ್ಯಂತ ಆಕ್ರೋಶದಿಂದ ಕಿರುಚುತ್ತಿದ್ದುದು ವಿಡಿಯೋದಲ್ಲಿ ಕಂಡುಬಂದಿದೆ. ಬೆಂಕಿ ಹತ್ತಿ ಉರಿಯುತ್ತಿದ್ದರೂ ಆತ ಸ್ಥಳದಲ್ಲೇ ನಿಂತು ತನ್ನ ಅಳಲನ್ನು ತೋಡಿಕೊಂಡಿದ್ದಾನೆ. "ಸಾವಿರಾರು ರೂಪಾಯಿ ಸಾಲ ಮಾಡಿ ಜೀವನೋಪಾಯಕ್ಕಾಗಿ ವಾಹನ ತಂದಿದ್ದೆ, ಆದರೆ ಅದು ಓಡುತ್ತಿಲ್ಲ, ಶೋರೂಂನವರು ಕೇಳ್ತಿಲ್ಲ" ಎಂದು ಕಿಡಿಕಾರಿದ್ದಾರೆ.
ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಕಂಡ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಆದರೆ ಅಷ್ಟರಲ್ಲೇ ವಾಹನ ಬಹುತೇಕ ಸುಟ್ಟು ಕರಕಲಾಗಿತ್ತು. ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದು, ಇ-ರಿಕ್ಷಾ ಮಾಲೀಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ,(ಏಜೆನ್ಸೀಸ್​).