ಮೃತ ಸುರೇಶ್ ಮತ್ತು ಆರೋಪಿ ನರೇಶ್  
ದೇಶ

ಮಹಿಳೆ ಜೊತೆ ಸಲುಗೆ; ತನ್ನ ಕಂಪನಿಯ ಸಹೋದ್ಯೋಗಿಯನ್ನು ಚಾಕುವಿನಿಂದ ಇರಿದು ಕೊಂದ ವ್ಯಕ್ತಿ | colleague Kills

ಲಖನೌ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ತನ್ನೊಂದಿಗೆ ಸಂಬಂಧ ಹೊಂದಿದ್ದ ಮಹಿಳೆಯ ಜೊತೆ ಸಲುಗೆ ಬೆಳೆಸಿದನೆಂದು ವ್ಯಕ್ತಿಯೊಬ್ಬ ತನ್ನದೇ ಕಂಪನಿಯ ಸಹೋದ್ಯೋಗಿಯನ್ನ ಚಾಕುವಿನಿಂದ(colleague Kills) ಇರಿದು ಕೊಂದಿದ್ದಾನೆ ಎಂದು ಶನಿವಾರ(ಜು. 25) ವರದಿಯಾಗಿದೆ.
ಗುರುವಾರ ತಡರಾತ್ರಿ ಗ್ರೇಟರ್ ನೋಯ್ಡಾದ ಸಿರ್ಸಾ ಸರ್ಕಲ್ ಬಳಿಯ ಸರ್ವಿಸ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾದ ವ್ಯಕ್ತಿಯನ್ನು ಬರೇಲಿ ಮೂಲದ ಸುರೇಶ್ ಎಂದು ಗುರುತಿಸಲಾಗಿದೆ. ಆರೋಪಿ ನರೇಶ್‌ ಚಿಕಿತ್ಸೆ ಪಡೆದ ಬಳಿಕ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಗ್ರೇಟರ್ ನೋಯ್ಡಾದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಸಂತೋಷ್ ಕುಮಾರ್, ನೋಯ್ಡಾದ ಸಿರ್ಸಾ ಸರ್ಕಲ್ ಬಳಿಯ ಸರ್ವಿಸ್ ರಸ್ತೆಯಲ್ಲಿ ಇಬ್ಬರು ಪುರುಷರ ನಡುವೆ ನಡೆದ ಜಗಳಕ್ಕೆ ಸಂಬಂಧಿಸಿದಂತೆ 112ಕ್ಕೆ ಕರೆ ಬಂದಿತ್ತು. ನಮ್ಮ ತಂಡ ಸ್ಥಳಕ್ಕೆ ತೆರಳಿದ್ದು, ಅಲ್ಲಿ ಇಬ್ಬರು ವ್ಯಕ್ತಿಗಳು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರು ಈಗಾಗಲೇ ಸುರೇಶ್ ಮೃತಪಟ್ಟಿದ್ದಾರೆ ಘೋಷಣೆ ಮಾಡಿದರು ಎಂದು ಹೇಳಿದ್ದಾರೆ.
ಪ್ರಾಥಮಿಕ ತನಿಖೆಯ ಸಮಯದಲ್ಲಿ ಸುರೇಶ್ ಮತ್ತು ನರೇಶ್ ಒಂದೇ ಖಾಸಗಿ ಕಂಪನಿಯ ಬೇರೆ-ಬೇರೆ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದರು. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬಾಬಿ ಎಂಬ ಮಹಿಳೆ ಕಳೆದ ಏಳು ವರ್ಷಗಳಿಂದ ನರೇಶ್ ಜೊತೆ ಸಂಬಂಧ ಹೊಂದಿದ್ದರು. ಬಾಬಿ ಇತ್ತೀಚೆಗೆ ಸುರೇಶ್ ಜೊತೆ ಮಾತನಾಡಲು ಶುರು ಮಾಡಿದ್ದಳು. ಇದು ನರೇಶನ ಕೋಪಕ್ಕೆ ಕಾರಣವಾಗಿತ್ತು ಎಂದು ತಿಳಿಸಿದ್ದಾರೆ.
ಗುರುವಾರ ರಾತ್ರಿ ಸುರೇಶ್ ಮತ್ತು ನರೇಶ್ ತಡರಾತ್ರಿ ಸಿರ್ಸಾ ಸರ್ಕಲ್ ಬಳಿ ಭೇಟಿಯಾಗಿ ಒಟ್ಟಿಗೆ ಬಿಯರ್ ಸೇವಿಸಿದ್ದಾರೆ. ನಂತರ ಈ ವಿಷಯದ ಬಗ್ಗೆ ವಾಗ್ವಾದ ನಡೆದು ಬಳಿಕ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಗಲಾಟೆ ನಡೆದಿದ್ದು, ನರೇಶ್ ಹರಿತವಾದ ಆಯುಧದಿಂದ ಸುರೇಶ್ ಮೇಲೆ ಹಲ್ಲೆ ನಡೆಸಿದ್ದು, ಮಾರಣಾಂತಿಕ ಗಾಯಗಳಾಗಿವೆ. ಘಟನೆಯಲ್ಲಿ ನರೇಶ್‌ಗೂ ಗಾಯಗಳಾಗಿವೆ. ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದಿದ್ದಾರೆ (ಏಜೆನ್ಸೀಸ್).