ಲಖನೌ: ಉತ್ತರ ಪ್ರದೇಶದಲ್ಲಿ ಚುನಾವಣೆ ಆಯೋಗ ನಡೆಸಿದ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ(SIR) ಅಕ್ರಮ ನಡೆದಿದೆ. ಅಕ್ರಮದ ಹಿಂದೆ ಬಿಜೆಪಿ ಅಡಗಿಕೊಂಡಿದೆ ಎಂದು ಶುಕ್ರವಾರ(ಏ. 10) ಎಸ್ಪಿ ಮುಖ್ಯಸ್ಥ ಮತ್ತು ಮಾಜಿ ಸಿಎಂ ಅಖಿಲೇಶ್ ಯಾದವ್(Akhilesh Yadav) ಆರೋಪಿಸಿದ್ದಾರೆ.
ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(SIR) ಪ್ರಕ್ರಿಯೆ ಪೂರ್ಣಗೊಂಡು ಶುಕ್ರವಾರ(ಏ. 10) ಆಯೋಗ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ 2 ಕೋಟಿಗೂ ಹೆಚ್ಚು ಹೆಸರುಗಳನ್ನು ಡಿಲಿಟ್ ಮಾಡಲಾಗಿದೆ ಎಂಬ ಮಾಹಿತಿ ಹೊರ ಬೀಳುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿ ಅಖಿಲೇಶ್ ಯಾದವ್ ಮಾತನಾಡಿದ್ದಾರೆ.
ಈಗ ಹೊರಬಂದಿರುವ ಮತದಾರರ ಪಟ್ಟಿಯನ್ನು ನೋಡಿದ್ರೆ, ಬಿಜೆಪಿ ತಾನು ಸೋಲುವ ವಿಷಯಗಳಲ್ಲಿ ಅದು ಸಂಸ್ಥೆಗಳ ಹಿಂದೆ ಅಡಗಿಕೊಂಡು ಚುನಾವಣೆಗಳನ್ನು ಎದುರಿಸುತ್ತದೆ ಎಂಬುದನ್ನು ಯಾರಾದರೂ ಊಹಿಸಬಹುದು. ಇಡಿ, ಸಿಬಿಐ, ಐಟಿ ಸಂಸ್ಥೆಗಳು ಈಗಾಗಲೇ ಬಹಿರಂಗಗೊಂಡಿವೆ. ಈಗ ಚುನಾವಣಾ ಆಯೋಗದ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ವ್ಯತ್ಯಾಸಗಳಿವೆ ಎಂದು ಆರೋಪಿಸಿರುವ ಅವರು, ವ್ಯಕ್ತಿಯೊಬ್ಬನ ಉದಾಹರಣೆ ನೀಡಿ ನಕಲಿ ದಾಖಲೆಗಳನ್ನು ಬಳಸಿಕೊಂಡು ಮತದಾರರ ಅಳಿಸುವಿಕೆಯನ್ನು ಮಾಡಲಾಗಿದೆ. ನಂದಲಾಲ್ ಎಂಬ ಮತದಾರನಿಗೆ ಬರೆಯಲು ಬರದಿದ್ರೂ, ನಕಲಿ ಸಹಿ ಬಳಸಿ ಆತನ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿದ್ದಾರೆ. ಇದರಲ್ಲಿ ಬಿಜೆಪಿ ಕಾರ್ಯಕರ್ತರು ಅವರ ಸಹಿಯನ್ನು ನಕಲಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇಂತಹದ್ದೆಲ್ಲಾ ನಡೆದರೂ ಚುನಾವಣೆ ಆಯೋಗ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಇದು ಬಿಜೆಪಿ ಮತ್ತು ಆಯೋಗದ ನಡುವಿನ ಅನೂನ್ಯತೆಯನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ (ಏಜೆನ್ಸೀಸ್).