ಪಿಚ್ಚರ್ ಅಭಿ ಬಾಕಿ ಹೈ ಎಂದು ಗುಟುರು ಹಾಕಿದ ಆಪ್ ಸಂಸದ
- ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾ ಔಟ್
- ಸಂಸತ್ತಿನಲ್ಲಿ ಕ್ಷುಲ್ಲಕ ಪ್ರಶ್ನೆ ಕೇಳುತ್ತಾರೆಂಬ ಕಾರಣಕ್ಕೆ ಕೊಕ್
- ಪಂಜಾಬ್ ಗೆ ಇವನ ಕೊಡುಗೆ ಏನು? ಕೇಳಿದ್ದ ಪಕ್ಷದ ಮುಖಂಡರು
- ಪಂಜಾಬ್ಗೆ ತಾನು ಏನು ಮಾಡಿದ್ದೆನೆಂದು ವಿಡಿಯೋ ಹಂಚಿಕೊಂಡ ಚಡ್ಡಾ
- ಪಿಚ್ಚರ್ ಅಭಿ ಬಾಕಿ ಹೈ ಎಂದು ಗುಟುರು ಹಾಕಿದ ಆಪ್ ಸಂಸದ
ಪಂಜಾಬ್: ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ(Raghav Chadha) ರನ್ನು ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ಕೆಳಗಿಳಿಸಿದ ದಿನದಿಂದ ಎಎಪಿ ಮತ್ತು ಚಡ್ಡಾ ನಡುವೆ ಮುಸುಕಿನ ಗುದ್ದಾಟ ಹೆಚ್ಚಾಗುತ್ತಿದೆ. ರಾಘವ್ ಚಡ್ಡಾ ತೀರಾ ಕ್ಷುಲಕ ವಿಷಯದ ಬಗ್ಗೆ ಚರ್ಚೆ ಮಾಡುತ್ತಾರೆ ಮತ್ತು ಪ್ರಶ್ನೆ ಎತ್ತುತ್ತಾರೆ ಎಂಬ ಕಾರಣವನ್ನು ನೀಡಿ ಆಮ್ ಆದ್ಮಿ ಪಕ್ಷ ರಾಘವ್ ಅವರಿಗೆ ನೀಡಿದ್ದ ಸ್ಥಾನವನ್ನು ಹಿಂತೆಗೆದುಕೊಂಡಿತು.
ಪಿಚ್ಚರ್ ಅಭಿ ಬಾಕಿ ಹೈ ಎಂದ ಚಡ್ಡಾ!
ಪಂಜಾಬ್ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ರಾಘವ್ ಚಡ್ಡಾ, ಪಂಜಾಬ್ ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಅವರದೆ ಪಕ್ಷದ ಕೆಲ ನಾಯಕರು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ಉತ್ತರವೆಂಬಂತೆ ಚಡ್ಡಾ, ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ರಾಘವ್ ಚಡ್ಡಾ ಸಂಸತ್ತಿನಲ್ಲಿ ಪಂಜಾಬ್ ಬಗ್ಗೆ ಪ್ರಶ್ನೆ ಎತ್ತುವಲ್ಲಿ ಸೋತಿದ್ದಾರೆ ಎನ್ನುವವರಿಗೆ ಈ ವಿಡಿಯೋ ಅರ್ಪಣೆ. ಇದು ಕೇವಲ ಟ್ರೇರಲ್ ಮಾತ್ರ ಪಿಚ್ಚರ್ ಅಭಿ ಬಾಕಿ ಹೈ ಎಂದು ಅವರು ಬರೆದುಕೊಂಡಿದ್ದಾರೆ.
ವಿಡಿಯೋನಲ್ಲಿ ಏನಿದೆ?
ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಹಂಚಿಕೊಂಡಿರುವ ಚಿಕ್ಕ ವಿಡಿಯೋನಲ್ಲಿ ಅವರು ಪಂಜಾಬ್ ರಾಜ್ಯಕ್ಕೆ ಸಂಬಂಧಿಸಿದಂತೆ ಸಂಸರ್ ಅಧಿವೇಶನದಲ್ಲಿ ಮಾತನಾಡಿದ ಕ್ಲಿಪ್ಗಳನ್ನು ಸೇರಿಸಿ ತಯಾರಿಸಿದ ವಿಡಿಯೋ ಇದಾಗಿದೆ.
ಇದರಲ್ಲಿ ಚಡ್ಡಾ, ಪಂಜಾಬ್ ನ ರೈತರಿಗೆ ಎಂಸ್ಪಿ ನೀಡುವುದು, ಪಂಜಾಬ್ಗೆ ನೂತನ ರೈಲುಗಳನ್ನು ಪೂರೈಸುವುದು, ಪಾಕಿಸ್ತಾನದಲ್ಲಿರುವ ಗುರುದ್ವಾರಾಗಳಿಗೆ ಸಿಖ್ಖರು ತೆರೆಳಲು ಸೂಕ್ತ ವ್ಯವಸ್ಥೆ ಮಾಡುವುದು, ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ಅವರಿಗೆ ಭಾರತ ರತ್ನ ನೀಡುವುದು ಮೊದಲಾದ ವಿಷಯಗಳ ಕುರಿತು ತಾವು ಮಾತನಾಡಿರುವ ವಿಡಿಯೋಗಳ ತುಣುಕನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
ಮೋದಿ ವಿರುದ್ಧದ ಪೋಸ್ಟ್ ಡಿಲೀಟ್ ಮಾಡಿರುವ ಆಪ್ ಸಂಸದ
ರಾಜ್ಯಸಭಾ ಉಪನಾಯಕ ಸ್ಥಾನದಿಂದ ಕೆಳಗಿಳಿದ ಕೆಲವೇ ದಿನದಲ್ಲಿ ರಾಘವ್ ಚಡ್ಡಾ ಪ್ರಧಾನಿ ಮೋದಿ ವಿರುದ್ಧ ಮಾಡಿದ್ದ ಟೀಕೆಗಳನ್ನು ತಮ್ಮ ಟ್ವಿಟರ್ ನಿಂದ ತೆಗೆದು ಹಾಕಿದ್ದಾರೆ ಎಂದು ಎಎಪಿ ಪಕ್ಷದ ಮಾಜಿ ಸಚಿವ ಸೌರಭ್ ಭಾರದ್ವಾಜ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ರಾಘವ್ ಚಡ್ಡಾ ಪಕ್ಷದ ಸಿದ್ಧಾಂತವನ್ನು ಮರೆತಿದ್ದಾರೆ, ಪ್ರಧಾನಿ ಮೋದಿ ಅವರಿಗೆ ಮಾಡಿದ್ದ ಕಠಿಣ ಪ್ರಶ್ನೆಗಳನ್ನು ತೆಗೆದು ಹಾಕಿರುವ ಚಡ್ಡಾ, ಕೇವಲ ಮೋದಿಯನ್ನು ಹೊಗಳುವ ಎರಡು ಟ್ವಿಟ್ಗಳನ್ನು ಉಳಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ, (ಏಜನ್ಸೀಸ್).