ಸಿಎಂ ಎಂ.ಕೆ.ಸ್ಟಾಲಿನ್ 
ದೇಶ

ನಮ್ಮದು ದ್ರಾವಿಡ ನೆಲ; ಬಿಜೆಪಿಯ ಕೋಮುವಾದಿ ತಂತ್ರ ತಮಿಳುನಾಡಿನಲ್ಲಿ ಕೆಲಸ ಮಾಡುವುದಿಲ್ಲ: ಸಿಎಂ ಎಂ.ಕೆ.ಸ್ಟಾಲಿನ್ | M K Stalin

ಚೆನ್ನೈ: ಮುಂಬರುವ ತಮಿಳುನಾಡು ಚುನಾವಣೆಯಲ್ಲಿ ರಾಜ್ಯದಲ್ಲಿ ಪ್ರಭಾವ ಬೀರಬೇಕು ಎಂದು ಬಯಸುತ್ತಿರುವ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್(M K Stalin), ನಮ್ಮದು ದ್ರಾವಿಡ ನೆಲ, ಬಿಜೆಪಿಯ ಕೋಮುವಾದಿ ತಂತ್ರ ಇಲ್ಲಿ ಕೆಲಸ ಮಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಲ್ಲಕುರಿಚಿಯಲ್ಲಿ ಕಲೆಕ್ಟರೇಟ್ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿಯ ಧಾರ್ಮಿಕ ರಾಜಕೀಯದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೇಸರಿ ಪಕ್ಷ ತರುವ ಕೋಮುಗಲಭೆಯನ್ನು ದ್ರಾವಿಡ ಮಾದರಿ ಸರ್ಕಾರ ವಿರೋಧಿಸುತ್ತದೆ. ಡಿಎಂಕೆ ಇರೋವರೆಗೂ ತಮಿಳುನಾಡಿನಲ್ಲಿ ಅಂತಹ ರಾಜಕೀಯಕ್ಕೆ ಅವಕಾಶ ಇಲ್ಲ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಧಾರ್ಮಿಕ ಉನ್ಮಾದವನ್ನು ಪ್ರಚೋದಿಸುವ ಮೂಲಕ ರಾಜ್ಯದಲ್ಲಿ ಸಾಮಾಜಿಕ ಸಮತೋಲನವನ್ನು ಹಾಳು ಮಾಡಲು ಬಯಸುತ್ತಿದೆ. ಆದರೆ ತಮಿಳುನಾಡಿನ ಜನರು ಒಗ್ಗಟ್ಟಾಗಿದ್ದಾರೆ ಅದರ ತಂತ್ರಗಳು ರಾಜ್ಯದಲ್ಲಿ ಎಂದಿಗೂ ಯಶಸ್ವಿಯಾಗುವುದಿಲ್ಲ.
ಹಿಂದೂಗಳು ದರ್ಗಾದಲ್ಲಿ ಪೂಜೆ ಸಲ್ಲಿಸುತ್ತಾರೆ ಮತ್ತು ಮುಸ್ಲಿಮರು ಚಿತ್ತಿರೈ ತಿರುವಿಳ ಆಚರಿಸುತ್ತಾರೆ. ಹಾಗೆಯೇ ಕ್ರಿಶ್ಚಿಯನ್ನರು ಚರ್ಚ್‌ಗಳಲ್ಲಿ ಪೊಂಗಲ್ ಅರ್ಪಿಸುತ್ತಾರೆ. ತಮಿಳುನಾಡಿನಲ್ಲಿನ ಈ ಸಾಮರಸ್ಯ ಮತ್ತು ಶಾಂತಿಯು ಸಾಮಾಜಿಕ ಸಮತೋಲನವನ್ನು ಹಾಳು ಮಾಡಲು ಬಿಜೆಪಿ ಬಯಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2011-2021ರ ಎಐಎಡಿಎಂಕೆ ಆಳ್ವಿಕೆಯಲ್ಲಿ ತಮಿಳುನಾಡು ನಾಶವಾಯಿತು. ಡಿಎಂಕೆ ಆಡಳಿತದಲ್ಲಿ ರಾಜ್ಯವು ಮತ್ತೆ ಚೇತರಿಸಿಕೊಂಡಿದೆ. 2026 ರ ಚುನಾವಣೆಯಲ್ಲಿ ಜನರು ಮತ್ತೆ ಡಿಎಂಕೆಯನ್ನೇ ಆಯ್ಕೆ ಮಾಡುತ್ತಾರೆ. ಕೇಂದ್ರ ಸರ್ಕಾರದ ನಿರ್ಲಕ್ಷ್ಯದ ಹೊರತಾಗಿಯೂ ಮತ್ತು ಅದರ ಬೆಂಬಲವಿಲ್ಲದೆ, ರಾಜ್ಯವು ಬೆಳೆಯದಂತೆ ತಡೆಯಲು ಇರಿಸಲಾದ ಪ್ರತಿಯೊಂದು ಅಡೆತಡೆಗಳನ್ನು ದಾಟಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).