ಪ್ರಧಾನಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ 
ದೇಶ

ನಮ್ಮ ವಿದೇಶಾಂಗ ನೀತಿ ಮೋದಿಯವರ ವೈಯಕ್ತಿಕ ನೀತಿಯಾಗಿದೆ; ಇದೊಂದು ಜೋಕ್ ಎಂದು ರಾಹುಲ್ ಗಾಂಧಿ ವಾಗ್ದಾಳಿ | Rahul Gandhi

ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಭಾರತ ಸರ್ಕಾರದ ವಿದೇಶಾಂಗ ನೀತಿ ಮತ್ತು ಪ್ರಧಾನಿ ಮೋದಿ ನಿಲುವಿನ ಬಗ್ಗೆ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi), ನಮ್ಮ ವಿದೇಶಾಂಗ ನೀತಿ, ಮೋದಿಯವರ ವೈಯಕ್ತಿಕ ನೀತಿಯಾಗಿದೆ. ಅದೊಂದು ಜೋಕ್ ಎಂದು ಕರೆದಿದ್ದಾರೆ.
ಸಂಸತ್​​ ಆವರಣದಲ್ಲಿ ಮಂಗಳವಾರ(ಮಾ. 24) ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಮ್ಮ ವಿದೇಶಾಂಗ ನೀತಿ ಪ್ರಧಾನಿ ಮೋದಿಯವರ ವೈಯಕ್ತಿಕ ವಿದೇಶಾಂಗ ನೀತಿಯಾಗಿದೆ. ಅದನ್ನು ಎಲ್ಲರೂ ಸಾರ್ವಜನಿಕ ತಮಾಷೆ ಎಂದು ಪರಿಗಣಿಸುತ್ತಾರೆ. ಮೋದಿ ಏನು ಮಾಡಬೇಕು ಮತ್ತು ಮಾಡಬಾರದು ಎಂಬುದನ್ನು ಡೊನಾಲ್ಡ್ ಟ್ರಂಪ್ ನಿರ್ಧರಿಸುತ್ತಾರೆ. ಪ್ರಧಾನಿ ರಾಜಿಯಾದ್ರೆ, ನಮ್ಮ ವಿದೇಶಾಂಗ ನೀತಿಯೂ ರಾಜಿಯಾಗುತ್ತದೆ ಎಂದು ಕಿಡಿಕಾರಿದ್ದಾರೆ.
ನಿನ್ನೆ ಪ್ರಧಾನಿ ಸಂಸತ್​ನಲ್ಲಿ ಅಪ್ರಸ್ತುತ ಭಾಷಣ ಮಾಡಿದರು. ಅವರು ಭಾರತದ ಪ್ರಧಾನಿಯಾಗಿ ತಮ್ಮ ನಿಲುವನ್ನು ತೋರಬೇಕು. ಇದರಿಂದ ಜನರು ತೊಂದರೆ ಅನುಭವಿಸಬೇಕಾಗುತ್ತದೆ. ಎಲ್‌ಪಿಜಿ ಮತ್ತು ಪೆಟ್ರೋಲ್ ಬೆಲೆಗಳು ಏರಿಕೆಯಾಗಿರುವುದು ಕೇವಲ ಆರಂಭ. ಪರಿಸ್ಥಿತಿ ಕೋವಿಡ್‌ನಂತಾಗುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ ಕೋವಿಡ್ ಸಮಯದಲ್ಲಿ ಎಷ್ಟು ಜನರು ಸತ್ತರು ಮತ್ತು ನಡೆದ ದುರಂತಗಳ ಪ್ರಮಾಣವನ್ನು ಅವರು ಮರೆತಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ನಾಳೆ ಕೇಂದ್ರ ಸರ್ಕಾರ ಕರೆದಿರುವ ಸರ್ವಪಕ್ಷ ಸಭೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೇರಳದಲ್ಲಿ ನನಗೆ ಕಾರ್ಯಕ್ರಮವಿರುವುದರಿಂದ ನಾನು ಹಾಜರಾಗಲು ಸಾಧ್ಯವಾಗುವುದಿಲ್ಲ. ಸರ್ವಪಕ್ಷ ಸಭೆ ನಡೆಯಬೇಕು. ಆದರೆ ಸರ್ಕಾರದ ರಚನಾತ್ಮಕತೆಯಲ್ಲೇ ಪ್ರಮಾದವಾಗಿದೆ. ಮತ್ತು ಇದನ್ನು ಸರಿಪಡಿಸಲು ಸಾಧ್ಯವಿಲ್ಲ, ವಿಶೇಷವಾಗಿ ಪ್ರಧಾನಿಗೆ ಸಾಧ್ಯವಿಲ್ಲ. ಅವರು ಅಮೆರಿಕ ಏನು ಹೇಳುತ್ತಾರೋ ಅದನ್ನು ಮಾಡುತ್ತಾರೆ. ರೈತರು ಮತ್ತು ದೇಶದ ಹಿತಾಸಕ್ತಿಗಾಗಿ ಕೆಲಸ ಮಾಡುವುದಿಲ್ಲ. ಅವರು ಅಮೆರಿಕ ಮತ್ತು ಇಸ್ರೇಲ್ ಏನು ಹೇಳುತ್ತಾರೋ ಅದನ್ನು ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ (ಏಜೆನ್ಸೀಸ್).