India Canada Reset | ಪ್ರಧಾನಿ ನರೇಂದ್ರ ಮೋದಿ ಮತ್ತು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ (ಪಿಟಿಐ)
ಒಟಾವಾ/ನವದೆಹಲಿ: ಕಳೆದ ಎರಡು ವರ್ಷಗಳಿಂದ ಭಾರತ ಮತ್ತು ಕೆನಡಾ (India Canada Reset) ನಡುವಿನ ಮುಸಕಿನ ಗುದ್ದಾಟ ಸುಖಾಂತ್ಯ ಕಾಣುವ ಲಕ್ಷಣಗಳು ಕಾಣಿಸುತ್ತಿದ್ದು, ಕೆನಡಾದಲ್ಲಿ ನಡೆದ ಹಿಂಸಾತ್ಮಕ ಅಪರಾಧಗಳು ಮತ್ತು ಹತ್ಯೆಗಳಲ್ಲಿ ಭಾರತ ಸರ್ಕಾರದ ಏಜೆಂಟರ ಪಾತ್ರವಿಲ್ಲ ಎಂದು ಕೆನಡಾದ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ನೀಡಿದ ಈ ಹೇಳಿಕೆಗಳನ್ನು ಟೊರೊಂಟೊ ಸ್ಟಾರ್ ಬುಧವಾರ ವರದಿ ಮಾಡಿದೆ.
ಭಾರತವು ಕೆನಡಾದ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಭಾವಿಸಿದರೆ, ಪ್ರಧಾನಿ ಕಾರ್ನಿ ಭಾರತಕ್ಕೆ ಪ್ರಯಾಣಿಸುತ್ತಿರಲಿಲ್ಲ ಎಂದಿರುವುದಾಗಿ ವರದಿಯಾಗಿದೆ.
ಈ ಮೂಲಕ ಭಾರತದ ಮೇಲಿದ್ದ ಗಂಭೀರ ಆರೋಪಗಳನ್ನು ಕೆನಡಾ ಕೈಬಿಟ್ಟಂತಾಗಿದ್ದು, ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ನವದೆಹಲಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಕೆನಡಾದಲ್ಲಿ ಭಾರತ ಸರ್ಕಾರದೊಂದಿಗೆ ಸಂಪರ್ಕ ಹೊಂದಿರುವ ಏಜೆಂಟರಿಂದ ಸಕ್ರಿಯ ವಿದೇಶಿ ಹಸ್ತಕ್ಷೇಪದ ಬಗ್ಗೆ ಹಿಂದಿನ ಕಳವಳಗಳು ಇನ್ನು ಮುಂದುವರೆಯುವುದಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಬದಲಾಯ್ತು ಕೆನಡಾ ಧೋರಣೆ
ಜಸ್ಟಟಿನ್ ಟ್ರುಡೊ ನಿರ್ಗಮನದ ಬಳಿಕ ಕೆನಡಾದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ಮಾರ್ಕ್ ಕಾರ್ನೆ ಭಾರತದೊಂದಿಗೆ ಸಂಬಂಧ ಸುಧಾರಿಸಲು ವಿಶೇಷ ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದ್ದು, ಇಂದಿನಿಂದ (ಫೆಬ್ರವರಿ 26)ಆರಂಭವಾಗಲಿರುವ ಭಾರತ ಭೇಟಿಯ ಮುನ್ನವೇ ಕೆನಡಾದ ಹಿರಿಯ ಅಧಿಕಾರಿಗಳು ಈ ಸ್ಪಷ್ಟನೆ ನೀಡಿದ್ದಾರೆ.
ನಮ್ಮ ತನಿಖಾ ಸಂಸ್ಥೆಗಳು ನಡೆಸಿದ ಸುದೀರ್ಘ ಪರಿಶೀಲನೆಯ ಬಳಿಕ ಅಂತಹ ಹಿಂಸಾತ್ಮಕ ಚಟುವಟಿಕೆಗಳು ಮುಂದುವರಿಯುತ್ತಿಲ್ಲ ಎಂಬ ವಿಶ್ವಾಸ ನಮಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆನಡಾದ ಈ ರಾಜತಾಂತ್ರಿಕ ಮರುಹೊಂದಾಣಿಕೆಯ ಹಿಂದೆ ಭಾರತದ ಎನ್‌ಎಸ್‌ಎ (NSA) ಅಜಿತ್ ದೋವಲ್ ಮತ್ತು ಕೆನಡಾದ ಭದ್ರತಾ ಅಧಿಕಾರಿಗಳ ನಡುವೆ ನಡೆದ ಸರಣಿ ಮಾತುಕತೆಗಳ ಪ್ರಮುಖ ಪಾತ್ರವಿದೆ ಎನ್ನಲಾಗಿದ್ದು, ಉಭಯ ದೇಶಗಳು ಸಂಘಟಿತ ಅಪರಾಧ, ಸೈಬರ್ ಕ್ರೈಮ್ ಮತ್ತು ಭಯೋತ್ಪಾದನೆ ವಿರುದ್ಧ ಒಟ್ಟಾಗಿ ಹೋರಾಡಲು ಒಪ್ಪಿಕೊಂಡಿವೆ ಎಂದು ತಿಳಿದುಬಂದಿದೆ. ಈ ಹಿಂದೆ ಆರೋಪಿಸಲಾಗಿದ್ದ ಗಡಿಯಾಚೆಗಿನ ದಮನಕಾರಿ ನೀತಿ ಆರೋಪಗಳ ಬಗ್ಗೆ ಕೆನಡಾ ಈಗ ಮೃದು ಧೋರಣೆ ತಳೆದಿದೆ.
ಕೆನಡಾ ಆರೋಪಗಳೇನು..?
ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರು ಭಾಗಿಯಾಗಿದ್ದಾರೆ ಎಂದು ಟ್ರೂಡೊ 2023 ರಲ್ಲಿ ಮಾಡಿದ ಆರೋಪಗಳನ್ನು ಭಾರತವು ಅಸಂಬದ್ಧ ಎಂದು ಕರೆದಿದ್ದವು. ಕೆನಡಾದಲ್ಲಿ ಆಶ್ರಯ ಪಡೆದಿರುವ ಮತ್ತು ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಬೆದರಿಕೆ ಹಾಕುತ್ತಿರುವ ಖಲಿಸ್ತಾನಿ ಭಯೋತ್ಪಾದಕರು ಮತ್ತು ಉಗ್ರಗಾಮಿಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹವರು ಪ್ರಯತ್ನಿಸುತ್ತಿದ್ದಾರೆ ಎಂದು ಭಾರತವು ಟ್ರೂಡೊಗೆ ತಿರುಗೇಟು ನೀಡಿತು(ಏಜೆನ್ಸೀಸ್).