Pizza Delivery ಸಾಂದರ್ಭಿಕ ಚಿತ್ರ 
ದೇಶ

7 ಇಂಚಿನ ಪಿಜ್ಜಾ ನೀಡಿ ಫಜೀತಿಗೆ ಸಿಲುಕಿದ ಫುಡ್ ಆ್ಯಪ್: ಗ್ರಾಹಕನಿಗೆ 10,520 ರೂ. ಜಾಕ್​ಪಾಟ್! Pizza Delivery

Pizza Delivery: ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ ಆಹಾರದ ಗಾತ್ರಕ್ಕೂ, ಗ್ರಾಹಕರಿಗೆ ತಲುಪಿದ ಆಹಾರಕ್ಕೂ ವ್ಯತ್ಯಾಸವಿದ್ದರೆ ಅದನ್ನು ಸೇವೆಯಲ್ಲಿನ ನ್ಯೂನತೆ ಎಂದು ಪರಿಗಣಿಸಿ ಉತ್ತರಾಖಂಡದ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ತೀರ್ಪು ನೀಡಿದೆ. 10 ಇಂಚಿನ ಪಿಜ್ಜಾ ಬದಲಿಗೆ 7 ಇಂಚಿನ ಪಿಜ್ಜಾ ತಲುಪಿಸಿದ್ದಕ್ಕಾಗಿ ಫುಡ್​ ಡೆಲಿವರಿ ಸಂಸ್ಥೆ ಮತ್ತು ಸಂಬಂಧಿತ ಹೋಟೆಲ್​ಗೆ ಜಂಟಿಯಾಗಿ 10, 520 ದಂಡ ವಿಧಿಸಲಾಗಿದೆ.

ಏನಿದು ಪ್ರಕರಣ?

ಗ್ರಾಹಕರೊಬ್ಬರು ಆನ್​ಲೈನ್​ ಫುಡ್​ ಆ್ಯಪ್​ ಮೂಲಕ 505 ರೂ. ನೀಡಿ 10 ಇಂಚಿನ ಪಿಜ್ಜಾ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಪೂರೈಕೆಯಾಗಿದ್ದು ಕೇವಲ 7 ಇಂಚಿನ ಪಿಜ್ಜಾ. ಈ ಕುರಿತು ಆ್ಯಪ್​ನ ಕಸ್ಟಮರ್​ ಕೇರ್​ಗೆ ದೂರು ನೀಡಿ ಹಣ ಹಿಂತಿರುಗಿಸುವಂತೆ ಕೋರಿದರು. ಆದರೆ ಸಂಸ್ಥೆ ಇದನ್ನು ನಿರಾಕರಿಸಿತು. ತದನಂತರ ಗ್ರಾಹಕರು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH), CPGRAMS ಪೋರ್ಟಲ್‌ ಹಾಗೂ ಕಾನೂನು ನೋಟಿಸ್‌ ನೀಡಿದರೂ ಸೂಕ್ತ ಸ್ಪಂದನೆ ಸಿಗದಿದ್ದಾಗ ಗ್ರಾಹಕರು ಗ್ರಾಹಕ ವೇದಿಕೆಯ ಮೆಟ್ಟಿಲೇರಿದ್ದರು.

ಆ್ಯಪ್ ಸಂಸ್ಥೆಯ ವಾದವೇನಿತ್ತು?

ವಿಚಾರಣೆ ವೇಳೆ ಫುಡ್‌ ಡೆಲಿವರಿ ಸಂಸ್ಥೆಯು, ತಾವು ಕೇವಲ ಗ್ರಾಹಕರು ಹಾಗೂ ಹೋಟೆಲ್‌ಗಳ ನಡುವೆ ಸಂಪರ್ಕ ಕಲ್ಪಿಸುವ ಮಧ್ಯವರ್ತಿ (Platform) ಮಾತ್ರವಾಗಿದ್ದು, ಆಹಾರ ತಯಾರಿಕೆ, ಪ್ಯಾಕಿಂಗ್‌ ಅಥವಾ ಮಾರಾಟದಲ್ಲಿ ತಮ್ಮ ಯಾವುದೇ ನೇರ ಪಾತ್ರವಿಲ್ಲ ಎಂದು ವಾದಿಸಿ ಜವಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸಿತು.

ಆಯೋಗದ ತೀರ್ಪು ಮತ್ತು ದಂಡದ ಮೊತ್ತ

ಅಧ್ಯಕ್ಷ ಗಗನ್ ಕುಮಾರ್ ಗುಪ್ತಾ ಹಾಗೂ ಸದಸ್ಯರಾದ ಡಾ. ಅಮರೇಶ್ ರಾವತ್ ಮತ್ತು ರಂಜನಾ ಗೋಯಲ್ ಅವರಿದ್ದ ಪೀಠವು, ಆರ್ಡರ್‌ ಮಾಡಿದಕ್ಕಿಂತ 3 ಇಂಚು ಸಣ್ಣ ಗಾತ್ರದ ಪಿಜ್ಜಾ ನೀಡಿರುವುದನ್ನು ಸೇವೆಯಲ್ಲಿನ ನ್ಯೂನತೆ ಎಂದು ಖಂಡಿಸಿತು.

45 ದಿನಗಳ ಗಡುವು

ಆಯೋಗವು ವಿಧಿಸಿದ ದಂಡದ ಮೊತ್ತದಲ್ಲಿ, ಪಿಜ್ಜಾ ಬೆಲೆ ಹಾಗೂ ಡೆಲಿವರಿ ಶುಲ್ಕವಾದ 520 (505 + 15), ಗ್ರಾಹಕರಿಗಾದ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ನಷ್ಟಪರಿಹಾರವಾಗಿ 5,000 ಹಾಗೂ ಅವರ ಕಾನೂನು ಹೋರಾಟದ ವೆಚ್ಚವಾಗಿ 5,000 ಒಳಗೊಂಡಿದ್ದು, ಸಂಸ್ಥೆಗಳು ಒಟ್ಟಾರೆಯಾಗಿ 10,520 ಮೊತ್ತವನ್ನು ಪಾವತಿಸಬೇಕಾಗಿದೆ (ಏಜೆನ್ಸೀಸ್​).