ನವದೆಹಲಿ: ತಂತ್ರಜ್ಞಾನ ಅಭಿವೃದ್ಧಿಗೊಂಡಂತೆಲ್ಲ ಆರ್ಥಿಕತೆಗೆ ಹೊಸ ಆಯಾಮಗಳು ಸೇರ್ಪಡೆಯಾಗುತ್ತಿವೆ. ಇದರ ನವ ಸ್ವರೂಪವೇ ಆರೆಂಜ್ ಆರ್ಥಿಕತೆ. ಸೃಜನಶೀಲ ಕಂಟೆಂಟ್ಗೆ ಬೇಡಿಕೆ ಹೆಚ್ಚುತ್ತಿರುವಾಗಲೇ ಕೇಂದ್ರ ಸರ್ಕಾರ ಇದಕ್ಕೆ ಉತ್ತೇಜನ ನೀಡಲು ಮುಂದಾಗಿರುವುದು, ಹಲವು ಕ್ಷೇತ್ರಗಳ ಬೆಳವಣಿಗೆ ಮತ್ತು ಉದ್ಯೋಗಸೃಷ್ಟಿಗೆ ಪೂರಕವಾಗಲಿದೆ. ಈ ಕುರಿತಾದ ವಿವರ ಇಲ್ಲಿದೆ.
ಮಾಹಿತಿ-ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (ಎ.ಐ), ಅನಿಮೇಷನ್, ಕಂಟೆಂಟ್ ರೂಪಿಸುವಿಕೆ ಕ್ಷೇತ್ರದಲ್ಲಿ ಭಾರತ ಮುಂದಡಿ ಇಡುತ್ತಿದ್ದು, ಈ ಸೃಜನಶೀಲತೆಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಮನ್ನಣೆ ದೊರೆಯಲಿದೆ. ರೀಲ್ಗಳನ್ನು ರೂಪಿಸುವುದು ಹೇಗೆ, ಕಂಟೆಂಟ್ ಸೃಜಿಸುವುದು ಹೇಗೆ ಎಂಬುದನ್ನು ವೃತ್ತಿಪರವಾಗಿ ಕಲಿಸಿಕೊಡಲು ಶಾಲೆ-ಕಾಲೇಜುಗಳಲ್ಲೇ ಲ್ಯಾಬ್ಗಳು ತಲೆ ಎತ್ತಲಿವೆ. 140 ಕೋಟಿ ಜನಸಂಖ್ಯೆಯ ಭಾರತ 100 ಕೋಟಿ ಇಂಟರ್ನೆಟ್ ಬಳಕೆದಾರರನ್ನು ಹೊಂದಿದ್ದು, 60 ಕೋಟಿ ಜನರು ಡಿಜಿಟಲ್ ಕಂಟೆಂಟ್ ವೀಕ್ಷಿಸುತ್ತಿದ್ದಾರೆ.
35 ಲಕ್ಷ ಜನರು ಕಂಟೆಂಟ್ ನಿರ್ವಿುಸುತ್ತಿದ್ದಾರೆ. 2030ರ ವೇಳೆಗೆ ಹೊಸದಾಗಿ 20 ಲಕ್ಷ ಜನರಿಗೆ ಈ ಕ್ಷೇತ್ರದಿಂದ ಉದ್ಯೋಗ ಸೃಷ್ಟಿಯಾಗಲಿದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತ ಯುವದೇಶವಾಗಿದ್ದು, ಕಿತ್ತಳೆ ಆರ್ಥಿಕತೆ ಬೆಳವಣಿಗೆಗೆ ಹಲವು ಅವಕಾಶಗಳಿವೆ.
ಈ ಬಾರಿಯ ಮುಂಗಡಪತ್ರದಲ್ಲಿ (2026-27) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬೆಳವಣಿಗೆಯ ಹೊಸ ಕ್ಷೇತ್ರಗಳನ್ನು ಗುರುತಿಸಿ, ಅದನ್ನು ‘ಕಿತ್ತಳೆ ಆರ್ಥಿಕತೆ’ ಅಂದರೆ ‘ಆರೆಂಜ್ ಎಕಾನಮಿ’ ಎಂದು ಕರೆದಿದ್ದಾರೆ. ಕೇಳಲು ಕೂಡ ಆಕರ್ಷಕವಾಗಿರುವ ಈ ಪದದ ಅರ್ಥವೇನು ಎಂಬ ಜಿಜ್ಞಾಸೆ ಬಜೆಟ್ ಮಂಡನೆಯಾದ ಫೆಬ್ರವರಿ 1ರಿಂದಲೇ ಆರಂಭವಾಗಿ, ಗೂಗಲ್ನಲ್ಲಿ ಜನಸಾಮಾನ್ಯರು ಇದರ ಬಗ್ಗೆ ಸಾಕಷ್ಟು ಸರ್ಚ್ ಮಾಡಿದ್ದಾರೆ. ಸೃಜನಶೀಲತೆ, ಸಂಸ್ಕೃತಿ ಮತ್ತು ಜ್ಞಾನ ಆಧಾರಿತ ಚಟುವಟಿಕೆಗಳಿಂದ ಉಂಟಾಗುವ ಆರ್ಥಿಕ ವ್ಯವಸ್ಥೆಯೇ ಆರೆಂಜ್ ಎಕಾನಮಿ.
ಕಲೆ, ಸಂಗೀತ, ಚಲನಚಿತ್ರ, ಸಾಹಿತ್ಯ, ವಿನ್ಯಾಸ, ಫ್ಯಾಷನ್, ಜಾಹೀರಾತು, ಡಿಜಿಟಲ್ ಕಂಟೆಂಟ್, ಗೇಮಿಂಗ್, ಅನಿಮೇಶನ್, ಆಪ್ ಅಭಿವೃದ್ಧಿ ಕ್ಷೇತ್ರಗಳು ಇದರ ಭಾಗವಾಗಿವೆ. ಬೇರೆ ಕೈಗಾರಿಕೆ ಅಥವಾ ಆರ್ಥಿಕತೆಗಳಲ್ಲಿ ಕಚ್ಚಾ ವಸ್ತುಗಳ ಲಭ್ಯತೆ ಮುಖ್ಯವಾಗುತ್ತದೆ. ಆದರೆ, ಆರೆಂಜ್ ಎಕಾನಮಿಯಲ್ಲಿ ಮಾನವನ ಸೃಜನಶೀಲತೆ, ಕಲ್ಪನೆ, ಬುದ್ಧಿವಂತಿಕೆ ಮತ್ತು ಬೌದ್ಧಿಕ ಸ್ವತ್ತು ಮುಖ್ಯ ಸಂಪನ್ಮೂಲಗಳು.
ಕೃತಕ ಬುದ್ಧಿಮತ್ತೆ (ಎಐ) ಉದ್ಯೋಗ ಕಸಿದುಕೊಳ್ಳುತ್ತದೆ ಎಂಬ ಆತಂಕ ಸೃಷ್ಟಿಯಾಗಿದ್ದು, ಸಾಫ್ಟ್ವೇರ್ ಕ್ಷೇತ್ರದಲ್ಲಂತೂ ತಲ್ಲಣ ಮೂಡಿಸಿದೆ. ಆದರೆ, ಆರೆಂಜ್ ಎಕಾನಮಿಯು ಯುವಕರಿಗೆ ಉದ್ಯೋಗ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಮುಖ್ಯವಾಗಿ ಇವು ಸೃಜನಶೀಲತೆ ಆಧಾರಿತ ಉದ್ಯೋಗಗಳಾಗಿರುವುದರಿಂದ ಉದ್ಯೋಗನಷ್ಟದ ಭೀತಿ ಅತ್ಯಂತ ಕಡಿಮೆ.
ಭಾರತದಲ್ಲಿ ಸಣ್ಣ ಬಜೆಟ್ನ ಸಿನಿಮಾಗಳು ಕೂಡ ವಿಶೇಷ ಕಥಾ ಹಂದರ, ವಿಶಿಷ್ಟ ನಟನೆಯ ಮೂಲಕ ನೂರಾರು ಕೋಟಿ ರೂಪಾಯಿ ಗಳಿಸುತ್ತಿವೆ. ಸಿನಿಮಾ ಅಲ್ಲದೆ, ವೆಬ್ ಸರಣಿಗಳ ನಿರ್ವಣದಲ್ಲಿ ಯುವಕ/ಯುವತಿಯರ ಸಹಭಾಗಿತ್ವ ಹೆಚ್ಚಿದ್ದು, ಇವು ಹೊಸ ವೀಕ್ಷಕರನ್ನೇ ಸೃಷ್ಟಿಸಿವೆ. ಹೀಗಾಗಿ, ಜಾಹೀರಾತು ಮಾರುಕಟ್ಟೆ ಕೂಡ ಓಟಿಟಿ ವೇದಿಕೆಗಳ ವೆಬ್ ಸರಣಿ ಮತ್ತು ಪಾಡ್ಕಾಸ್ಟ್ಗಳತ್ತ ಚಿತ್ತ ಹರಿಸಿದೆ. ಮುಂಬರುವ ದಿನಗಳಲ್ಲಿ ವೆಬ್ ಸರಣಿ, ಶಾರ್ಟ್ ಫಿಲ್ಮ್, ಡಾಕ್ಯುಮೆಂಟರಿ ನಿರ್ವಣದ ಚಟುವಟಿಕೆಗಳು ಇನ್ನಷ್ಟು ವೇಗ ಪಡೆಯಲಿದ್ದು, ಈ ಕ್ಷೇತ್ರದಲ್ಲಿ ವೃತ್ತಿಪರರಿಗೆ ಬೇಡಿಕೆ ಹೆಚ್ಚಲಿದೆ. ಆ ಮೂಲಕ ಆರ್ಥಿಕ ಚಟುವಟಿಕೆಯೂ ಏರಿಕೆ ಕಾಣಲಿದೆ.
ಅಮೆರಿಕದಲ್ಲಿ ಇಂಟರ್ನೆಟ್ ಬಳಕೆದಾರರಿಂದ ಪಡೆಯುವ ತಲಾ ಆದಾಯ ಉತ್ತಮ ಸ್ಥಿತಿಯಲ್ಲಿದೆ. ಭಾರತದಲ್ಲಿ ದೂರಸಂಪರ್ಕ ಕಂಪನಿಗಳು ಮತ್ತು ಇತರ ಕಂಪನಿಗಳು ಪ್ರತಿ ಇಂಟರ್ನೆಟ್ ಬಳಕೆದಾರನಿಂದ ವರ್ಷಕ್ಕೆ ಸರಾಸರಿ 762 ರೂ. ಗಳಿಸುತ್ತಿವೆ. ಅಮೆರಿಕ ಪ್ರತಿ ಬಳಕೆದಾರನಿಂದ ಇದರ 32 ಪಟ್ಟು ಹೆಚ್ಚು ಗಳಿಕೆ ಮಾಡುತ್ತದೆ.
ಯುವ ಭಾರತ: ಅಮೆರಿಕದಲ್ಲಿ ಸರಾಸರಿ ವಯಸ್ಸು 39.5 ವರ್ಷವಾಗಿದ್ದರೆ, ಚೀನಾದಲ್ಲಿ 40.8 ವರ್ಷ. ಜಪಾನ್ನಲ್ಲಂತೂ 50.4 ವರ್ಷ. ಭಾರತದಲ್ಲಿ ಸರಾಸರಿ ವಯಸ್ಸು 28.2. ಅಲ್ಲದೆ, ಭಾರತದ ಶೇಕಡ 65ರಷ್ಟು ಜನಸಂಖ್ಯೆ 35 ವರ್ಷದೊಳಗಿನವರು. ಹಾಗಾಗಿ, ಡಿಜಿಟಲ್ ಕಂಟೆಂಟ್ನ ಸೃಷ್ಟಿ ಮತ್ತು ಬಳಕೆಯಲ್ಲಿ ಮುಂಚೂಣಿಯಲ್ಲಿದೆ.
ಉನ್ನತ ತಂತ್ರಜ್ಞಾನ: ಭಾರತದಲ್ಲಿ 3 ಸಾವಿರಕ್ಕಿಂತ ಅಧಿಕ ಆಧುನಿಕ ಸ್ಟುಡಿಯೋಗಳಿದ್ದು, 1200 ವಿಎಫ್ಎಕ್ಸ್ ಲ್ಯಾಬ್ಗಳಿವೆ. 2030ರ ಹೊತ್ತಿಗೆ ಇವುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಲಿದೆ.
ಮಹಿಳೆಯರ ಪಾತ್ರ: ಮಹಿಳೆಯರು ಕಂಟೆಂಟ್ ಕ್ರಿಯೇಟರ್ ಆಗಿ ದೊಡ್ಡಪ್ರಮಾಣದಲ್ಲಿ ಹೊರಹೊಮ್ಮುತ್ತಿದ್ದಾರೆ. ಮಹಾನಗರಗಳಲ್ಲಂತೂ ಈ ಟ್ರೆಂಡ್ ಹೆಚ್ಚಿದೆ. ಇಂದೋರ್, ಲಖನೌಗಳಂಥ ನಗರಗಳಲ್ಲಿ ಮಹಿಳಾ ಕಂಟೆಂಟ್ ಕ್ರಿಯೇಟರ್ಗಳ ಸಂಖ್ಯೆ ಶೇಕಡ 60ರಷ್ಟು ಹೆಚ್ಚಿದೆ.
ಹೆಚ್ಚಿದ ಬೇಡಿಕೆ: ಭಾರತದಲ್ಲಿ ಹಿಂದಿಯೇತರ ಡಿಜಿಟಲ್ ಕಂಟೆಂಟ್ನ ಬೇಡಿಕೆ ಶೇಕಡ 40ರಷ್ಟು, ಹಿಂದಿ ಕಂಟೆಂಟ್ನ ಬೇಡಿಕೆ ಶೇ.12ರಷ್ಟು ಹೆಚ್ಚಿದೆ.
ಆರೆಂಜ್ ಎಕಾನಮಿಗೆ ಪೂರಕವಾದ ಕ್ಷೇತ್ರಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಮಹತ್ವದ ಕ್ರಮಗಳನ್ನು ಘೋಷಿಸಿದೆ. ದೇಶದ 15 ಸಾವಿರ ಶಾಲೆ ಹಾಗೂ 500 ಕಾಲೇಜುಗಳಲ್ಲಿ ‘ಎವಿಜಿಸಿ ಕಂಟೆಂಟ್ ಕ್ರಿಯೇಟರ್ ಲ್ಯಾಬ್’ ಸ್ಥಾಪನೆ ಆಗಲಿವೆ. ಮುಂಬೈನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ ಈ ಲ್ಯಾಬ್ಗಳನ್ನು ಸ್ಥಾಪಿಸಲಿದೆ. ಅಲ್ಲದೆ, ರೈತರು, ವಿದ್ಯಾರ್ಥಿಗಳು, ಆರೋಗ್ಯ ಸೇವೆಯಲ್ಲಿರುವ ಕಾರ್ಯಕರ್ತರು ಸೇರಿದಂತೆ ಎಲ್ಲ ಕ್ಷೇತ್ರದವರಿಗೂ ಕೃತಕ ಬುದ್ಧಿಮತ್ತೆಯ (ಎ.ಐ) ಪ್ರಯೋಜನ ಸಿಗುವಂತಾಗಲು ನಿಯಮಾವಳಿಗಳನ್ನು ರೂಪಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಪ್ರಕಟಿಸಿದ್ದಾರೆ.
ಹೆಚ್ಚಲಿದೆ ನೆರವು: ಕೃತಕ ಬುದ್ಧಿಮತ್ತೆ (ಎ.ಐ), ಮಷಿನ್ ಲರ್ನಿಂಗ್, ಕ್ವಾಂಟಮ್ ಕಂಪ್ಯೂಟರ್ ಕ್ಷೇತ್ರಕ್ಕೆ ಅನುಸಂಧಾನ ನ್ಯಾಷನಲ್ ರಿಸರ್ಚ್ ಫಂಡ್, ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆಂಡ್ ಡಿ) ಹಾಗೂ ಇತರ ನಿಧಿಗಳ ಮೂಲಕ ನೆರವು ಸಿಗಲಿದೆ. ಅಲ್ಲದೆ, ಎ.ಐ ಸೇರಿ ಆಧುನಿಕ ತಂತ್ರಜ್ಞಾನಗಳಿಂದ ಉದ್ಯೋಗ, ಕೌಶಲ ಮೇಲಿನ ಪರಿಣಾಮಗಳ ಮೌಲ್ಯಮಾಪನಕ್ಕಾಗಿ ‘ಶಿಕ್ಷಣದಿಂದ ಉದ್ಯೋಗ ಹಾಗೂ ಉದ್ಯಮಶೀಲತೆ’ ಕುರಿತು ಉನ್ನತಾಧಿಕಾರ ಸ್ಥಾಯಿ ಸಮಿತಿ ರಚಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ.
ಡಿಜಿಟಲ್ ಕಂಟೆಂಟ್ ರೂಪಿಸು ವಲ್ಲಿ ಅತಿ ಹೆಚ್ಚು ಜನರಿಗೆ ಉದ್ಯೋಗ ಒದಗಿಸಿದ ಹೆಗ್ಗಳಿಕೆ ಸದ್ಯದ ಮಟ್ಟಿಗೆ ಚೀನಾಗೆ ಸಲ್ಲುತ್ತದೆ. ಭಾರತದಲ್ಲಿ ಪ್ರಸ್ತುತ 35 ಲಕ್ಷ ಜನರು ಡಿಜಿಟಲ್ ಕಂಟೆಂಟ್ ಸೃಷ್ಟಿಸುತ್ತಿದ್ದಾರೆ. 2030ರ ಹೊತ್ತಿಗೆ ಈ ಕ್ಷೇತ್ರದಲ್ಲಿ 20 ಲಕ್ಷ ವೃತ್ತಿಪರರ ಅವಶ್ಯಕತೆ ಇದ್ದು, ಹೊಸದಾಗಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಈ ಮೂಲಕ ಆರ್ಥಿಕತೆಯ ಬೆಳವಣಿಗೆಗೆ ಕೂಡ ಪೂರಕವಾಗಿ ಪರಿಣಮಿಸಲಿದೆ.
ಅಮೆರಿಕ, ಚೀನಾ, ಬ್ರಿಟನ್ನಂಥ ರಾಷ್ಟ್ರಗಳಲ್ಲಿ ಶೇಕಡ 80ಕ್ಕೂ ಹೆಚ್ಚು ಇಂಟರ್ನೆಟ್ ಬಳಕೆದಾರರು ಡಿಜಿಟಲ್ ಕಂಟೆಂಟ್ ವೀಕ್ಷಿಸುತ್ತಿದ್ದಾರೆ. ಹಾಗಾಗಿ, ಈ ರಾಷ್ಟ್ರಗಳಲ್ಲಿ ಬೆಳವಣಿಗೆಗೆ ಈಗ ಸೀಮಿತ ಅವಕಾಶಗಳಿವೆ. ಆದರೆ, ಭಾರತದಲ್ಲಿ ಶೇ.60ರಷ್ಟು ಇಂಟರ್ನೆಟ್ ಬಳಕೆದಾರರು ಮಾತ್ರ ಡಿಜಿಟಲ್ ಕಂಟೆಂಟ್ ವೀಕ್ಷಿಸುತ್ತಿದ್ದು, ಕಂಟೆಂಟ್ ಸೃಷ್ಟಿ ಕ್ಷೇತ್ರದಲ್ಲಿ ಹೇರಳ ಅವಕಾಶಗಳಿವೆ.