ಒರಾಕಲ್ ಸಂಸ್ಥೆಯಿಂದ ವಜಾ ಪ್ರಕ್ರಿಯೆ
Oracle Layoffs: ಟೆಕ್ ದೈತ್ಯ ಕಂಪನಿಗಳಾದ ಟಿಸಿಎಸ್, ಅಮೆಜಾನ್, ಮೈಕ್ರೋಸಾಫ್ಟ್, ಇನ್ಫೋಸಿಸ್ ಹಲವು ತಿಂಗಳುಗಳ ಹಿಂದಷ್ಟೇ ತನ್ನ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಬಿಸಾಡಿದ ವಿಷಯ ಬಹುತೇಕರಿಗೆ ಗೊತ್ತೇ ಇದೆ. ಇದಕ್ಕೆ ಸಂಸ್ಥೆಗಳು ಕೊಟ್ಟ ಕಾರಣ ಹಲವು. ಆದರೆ, ಮುಖ್ಯ ಕಾರಣ ಮಾತ್ರವೇನು ಎಂದು ನೋಡುವುದಾದರೆ ಅದು ಕೃತಕ ಬುದ್ಧಿಮತ್ತೇ (ಎಐ) ಎಂಬುದೇ ತೀವ್ರ ಬೇಸರದ ಸಂಗತಿ. ಇದೀಗ ಈ ಸಾಲಿನಲ್ಲಿ ಒರಾಕಲ್ ಉಳಿದ ಸಂಸ್ಥೆಗಳಿಗಿಂತ ಒಂದು ಹೆಜ್ಜೆ ಮುಂದೋಗಿದೆ.
ಬಿಸಿನೆಸ್ ಇನ್ಸೈಡರ್ ವರದಿಯ ಪ್ರಕಾರ, ಟೆಕ್ ದೈತ್ಯ ಕಂಪನಿಯು ಈ ತಿಂಗಳು ಮತ್ತೊಂದು ಸುತ್ತಿನ ಉದ್ಯೋಗ ಕಡಿತಕ್ಕೆ ಸಿದ್ಧತೆ ನಡೆಸುತ್ತಿದೆ. ಅದೇ ಸಮಯದಲ್ಲಿ ಕೃತಕ ಬುದ್ಧಿಮತ್ತೆಯ ಮೇಲೆ ಹೆಚ್ಚಿನ ಬಂಡವಾಳ ಹೂಡುತ್ತಿದೆ. ಯೋಜಿತ ವಜಾಗೊಳಿಸುವಿಕೆಯಿಂದ ಪರಿಣಾಮ ಬೀರಬಹುದಾದ ಉದ್ಯೋಗಿಗಳನ್ನು ಗುರುತಿಸಲು ಒರಾಕಲ್ ವ್ಯವಸ್ಥಾಪಕರನ್ನು ಕೇಳಿಕೊಂಡಿದೆ ಎಂದು ವರದಿ ತಿಳಿಸಿದೆ. ಈ ವರ್ಷ ಮಾರ್ಚ್ನಲ್ಲಿ, 21,000 ನೌಕರರಿಗೆ ಗುಡ್ಬೈ ಹೇಳಿದ ಒರಾಕಲ್, ಈಗ ಎರಡನೇ ಬಾರಿ ಉದ್ಯೋಗಿಗಳನ್ನು ಹೊರ ನೂಕಲು ಮುಂದಾಗಿದೆ. ಕಳೆದ ಕಿಕ್ಔಟ್ ಪ್ರಕ್ರಿಯೆಯ ಬಳಿಕ ಶೇ.13ರಷ್ಟು ಅಂದರೆ, ಕಂಪನಿಯು ಸುಮಾರು 1,41,000 ಉದ್ಯೋಗಿಗಳನ್ನು ಮಾತ್ರ ಉಳಿಸಿಕೊಂಡಿದ್ದಾಗಿ ವರದಿಯಾಗಿದೆ.
ವೇಗವಾಗಿ ಬೆಳೆಯುತ್ತಿರುವ ಎಐ ಯುಗದಲ್ಲಿ, ಅತ್ಯಂತ ಸುಲಭವಾಗಿ ಮಾರುಕಟ್ಟೆಯನ್ನು ಪ್ರವೇಶಿಸಲು ಒರಾಕಲ್ ಉದ್ಯೋಗಿಗಳ ಬದಲಿಗೆ ಎಐ ಮೇಲೆ ಹೆಚ್ಚು ಬಂಡವಾಳ ಹಾಗೂ ಸಮಯವನ್ನು ಹೂಡುತ್ತಿದೆ. 2026ರ ಆರ್ಥಿಕ ವರ್ಷದಲ್ಲಿ ಕಂಪನಿಯು ಎಐ ಸಂಬಂಧಿತ ಮೂಲಸೌಕರ್ಯಕ್ಕಾಗಿ 55.7 ಬಿಲಿಯನ್ ಡಾಲರ್ ವ್ಯಯಿಸಿದರೆ, ಆ ಹೂಡಿಕೆಗಳಿಗಾಗಿ 43 ಬಿಲಿಯನ್ ಸಾಲ ಪಡೆದಿದೆ ಎಂದು ವರದಿಗಳು ಉಲ್ಲೇಖಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸಾಲ ಮತ್ತು ಷೇರುಗಳ ಮೂಲಕ ಹೆಚ್ಚುವರಿಯಾಗಿ 40 ಬಿಲಿಯನ್ ಡಾಲರ್ ಸಂಗ್ರಹಿಸಲು ಒರಾಕಲ್ ಹೊಸ ಪ್ಲ್ಯಾನ್ ಹಾಕಿಕೊಂಡಿದೆ.
ಭಾರಿ ಹೂಡಿಕೆಯ ಹೊರತಾಗಿಯೂ, ಒರಾಕಲ್‌ನ ಕ್ಲೌಡ್ ವ್ಯವಹಾರಕ್ಕೆ ಬೇಡಿಕೆ ಬಲವಾಗಿ ಉಳಿದಿದೆ. ಎಐ ಕಂಪ್ಯೂಟಿಂಗ್ ಸಾಮರ್ಥ್ಯಕ್ಕೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಕಂಪನಿಯ ಕ್ಲೌಡ್ ಸೇವೆಗಳ ಆದಾಯವು ಹಂತ ಹಂತವಾಗಿ ಬೆಳೆಯುತ್ತಿದೆ. ಸಪ್ಟೆಂಬರ್ನಿಂದ ಎರಡನೇ ತ್ರೈಮಾಸಿಕ ಅವಧಿ ಆರಂಭವಾಗುತ್ತಿದ್ದು, ಅದಕ್ಕೂ ಮುನ್ನವೇ ಎರಡನೇ ಸುತ್ತಿನಲ್ಲಿ ಮತ್ತಷ್ಟು ಸಾವಿರ ಉದ್ಯೋಗಿಗಳ ವೇತನ ವೆಚ್ಚವನ್ನು ಕಡಿತಗೊಳಿಸಲಿರುವ ಒರಾಕಲ್, ಉಳಿಸಿದ ಹಣವನ್ನು ಎಐಗೆ ಮುಡುಪಾಗಿಡಲು ನಿರ್ಧರಿಸಿದೆ.
ಈ ವರ್ಷ ಮಾರ್ಚ್ ಕೊನೆಯಲ್ಲಿ ಅಮೆರಿಕ, ಭಾರತ, ಕೆನಡಾ ಮತ್ತು ಮೆಕ್ಸಿಕೋದ ಉದ್ಯೋಗಿಗಳಿಗೆ ಯಾವುದೇ ಅಲರ್ಟ್ ಅಥವಾ ಮಾಹಿತಿ ನೀಡದ ಒರಾಕಲ್, ಹೆಚ್ಆರ್ನಿಂದ ಕಾಲ್ ಮಾಡಿಸದೆ, ಮುಂಜಾನೆ 6 ಗಂಟೆಗೆ 'ನೀವು ನಾಳೆಯಿಂದ ಕೆಲಸಕ್ಕೆ ಬರುವುದು ಬೇಡ' ಎಂಬ ಇಮೇಲ್ ಮೂಲಕ ನೌಕರರಿಗೆ ಗುಡ್ಬೈ ಹೇಳಿದ ರೀತಿ ನಿಜಕ್ಕೂ ಅನೇಕರಲ್ಲಿ ಭಾರಿ ದುಃಖ, ಸಂಕಷ್ಟ ತಂದೊಡ್ಡಿತು. ಇದೊಂದು ರೀತಿಯಾದರೆ, ಇನ್ನೂ ಕೆಲವರಿಗೆ ಯಾವುದೇ ಮೇಲ್ ಕಳುಹಿಸದೆ, ಅದೇ ದಿನ ಸಿಸ್ಟಮ್ ಆ್ಯಕ್ಸೆಸ್ ಬಂದ್ ಮಾಡಿದ ಘಟನೆಯೂ ಇದೆ. ಪ್ರಸ್ತುತ, ಎರಡನೇ ಸುತ್ತಿನ ವಜಾ ಪ್ರಕ್ರಿಯೆ ಬಗ್ಗೆ ಸಂಸ್ಥೆಯು ಎಲ್ಲಿಯೂ ಸದ್ಯದ ಮಟ್ಟಿಗೆ ಸ್ಪಷ್ಟನೆ ನೀಡದಿದ್ದರೂ ಹೊರಬಿದ್ದಿರುವ ವರದಿ ಸದ್ಯ ಉದ್ಯೋಗಿಗಳಲ್ಲಿ ಆತಂಕ ಸೃಷ್ಟಿಸಿದೆ ಎನ್ನಬಹುದು,(ಏಜೆನ್ಸೀಸ್).