ಒರಾಕಲ್​ ಸಂಸ್ಥೆಯಿಂದ ವಜಾ ಪ್ರಕ್ರಿಯೆ 
ದೇಶ

ಇವತ್ತೇ ನಿಮ್ಮ ಕೊನೆಯ... ಫಸ್ಟ್​ ರೌಂಡ್​ ಬೆನ್ನಲ್ಲೇ 2ನೇ ರೌಂಡ್​ ಲೇಆಫ್​ಗೆ ಒರಾಕಲ್​ ಸಜ್ಜು! ರಾಜ್ಯದ ಟೆಕ್ಕಿಗಳಲ್ಲಿ ಆತಂಕ​

ಪ್ರಮುಖ ಮುಖ್ಯಾಂಶಗಳು

  • ಅಂದಾಜು 12,000 ಟೆಕ್ಕಿಗಳನ್ನು ಈಗಾಗಲೇ ಹೊರನೂಕಿರುವ ಕಂಪನಿ
  • ಬೆಳಗ್ಗೆ 6 ಗಂಟೆಗೆ ಭಾರತದಲ್ಲಿ ಕೆಲಸ ಮಾಡುತ್ತಿರುವ ತನ್ನ ಟೆಕ್ಕಿಗಳಿಗೆ ಲೇಆಫ್​ ಸಂದೇಶ
  • ಎರಡನೇ ವಜಾಗೊಳಿಸುವಿಕೆ​ ಪ್ರಕ್ರಿಯೆಗೆ ಒರಾಕಲ್​ ಸಜ್ಜು
  • ಲೇಆಫ್​ ಪ್ರಕ್ರಿಯೆ ಬೆನ್ನಲ್ಲೇ ಬೆಂಗಳೂರಿನ ಟೆಕ್ಕಿಗಳಿಗೆ ಆತಂಕ
ಬೆಂಗಳೂರು: ನಿನ್ನೆಯಷ್ಟೇ (ಮಾ.31) ಒರಾಕಲ್​ ಟೆಕ್​ ಸಂಸ್ಥೆ ಭಾರತದಲ್ಲಿನ ತನ್ನ ಉದ್ಯೋಗಿಗಳನ್ನು ವಜಾಗೊಳಿಸಿತು. ಅಂದಾಜು 12,000 ಟೆಕ್ಕಿಗಳನ್ನು ಈಗಾಗಲೇ ಹೊರನೂಕಿರುವ ಕಂಪನಿ, ಉದ್ಯೋಗಿಗಳ ಬದಲಿಗೆ ಕೃತಕ ಬುದ್ಧಿಮತ್ತೆ (ಎಐ) ಮೇಲೆ ಹೆಚ್ಚು ಬಂಡವಾಳ ಹೂಡಲು ನಿರ್ಧರಿಸಿರುವುದೇ ಲೇಆಫ್​ ಪ್ರಕ್ರಿಯೆಗೆ ಮುಖ್ಯ ಕಾರಣ.    
ಮಂಗಳವಾರ (ಮಾ.30) ಬೆಳಗ್ಗೆ 6 ಗಂಟೆಗೆ ಭಾರತದಲ್ಲಿ ಕೆಲಸ ಮಾಡುತ್ತಿರುವ ತನ್ನ ಟೆಕ್ಕಿಗಳಿಗೆ ಲೇಆಫ್​ ಸಂದೇಶಗಳನ್ನು ಕಳಿಸುವ ಮೂಲಕ ಸಂಸ್ಥೆ ಬಿಗ್ ಶಾಕ್ ನೀಡಿದೆ. ಹಲವಾರು ಮಂದಿಗೆ ಇ-ಮೇಲ್​ ಬಂದಿದ್ದು, ಕೆಲವರಿ ಮಾತ್ರ ಕಂಪನಿಯ ಲಾಗಿನ್​, ಸಿಸ್ಟಮ್​ ಲಾಕ್​ ಆಗಿದೆ. ಕೆಲಸದಿಂದ ಕಿತ್ತುಬಿಸಾಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅಸಮಾಧಾನ ಹೊರಹಾಕಿರುವ ಉದ್ಯೋಗಿಗಳು, ಯಾವುದೇ ಮಾತುಕತೆ ಅಥವಾ ಮುಂಚಿತವಾಗಿ ಅಲರ್ಟ್​ ಮಾಡದೆಯೇ ವಜಾಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ. 
ಸಂಸ್ಥೆಯ ವ್ಯವಸ್ಥಾಪಕರಾಗಲಿ ಅಥವಾ ಎಚ್​ಆರ್​ ಆಗಲಿ, ನಮ್ಮ ಜೊತೆ ನೇರವಾಗಿ ಲೇಆಫ್​ ಬಗ್ಗೆ ಚರ್ಚಿಸಿಲ್ಲ ಎಂದಿದ್ದಾರೆ. ವಜಾಗೊಳಿಸುವಿಕೆಯ ಕುರಿತಾಗಿ ಕಂಪನಿಯಿಂದ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಹೊರಬೀಳದೆ ಹೋದರೂ ಭಾರತದ ಅನೇಕ ಉದ್ಯೋಗಿಗಳು ತಮ್ಮ ಪರಿಸ್ಥಿತಿಯನ್ನು ಸೋಷಿಯಲ್​ ಮೀಡಿಯಾದಲ್ಲಿ ಹೇಳಿಕೊಳ್ಳುವ ಮೂಲಕ ಹಲವರ ಗಮನಕ್ಕೆ ತಂದಿದ್ದಾರೆ.

2ನೇ ರೌಂಡ್​ಗೆ ರೆಡಿ

ಈಗಾಗಲೇ ಭಾರತದ ಅನೇಕ ಉದ್ಯೋಗಿಗಳಿಗೆ ಗೇಟ್​ಪಾಸ್​ ನೀಡಿರುವ ಸಂಸ್ಥೆ, ಇನ್ನೆರೆಡು ವಾರಗಳಲ್ಲಿ ಎರಡನೇ ರೌಂಡ್​ ವಜಾ ಪ್ರಕ್ರಿಯೆಗೆ ಪಟ್ಟಿ ಸಿದ್ಧಪಡಿಸುತ್ತಿದೆ ಎಂದು ವರದಿಯಾಗಿದೆ.  ಈ ನಿಟ್ಟಿನಲ್ಲಿ, ಬೆಂಗಳೂರಿನ ಒರಾಕಲ್​ ಟೆಕ್ಕಿಗಳಲ್ಲಿ ಕೆಲಸ ಕಳೆದುಕೊಳ್ಳುವ ಭೀತಿ ಸೃಷ್ಟಿಯಾಗಿದೆ.