ಒರಾಕಲ್ ಸಂಸ್ಥೆಯಿಂದ ವಜಾ ಪ್ರಕ್ರಿಯೆ
- ಅಂದಾಜು 12,000 ಟೆಕ್ಕಿಗಳನ್ನು ಈಗಾಗಲೇ ಹೊರನೂಕಿರುವ ಕಂಪನಿ
- ಬೆಳಗ್ಗೆ 6 ಗಂಟೆಗೆ ಭಾರತದಲ್ಲಿ ಕೆಲಸ ಮಾಡುತ್ತಿರುವ ತನ್ನ ಟೆಕ್ಕಿಗಳಿಗೆ ಲೇಆಫ್ ಸಂದೇಶ
- ಎರಡನೇ ವಜಾಗೊಳಿಸುವಿಕೆ ಪ್ರಕ್ರಿಯೆಗೆ ಒರಾಕಲ್ ಸಜ್ಜು
- ಲೇಆಫ್ ಪ್ರಕ್ರಿಯೆ ಬೆನ್ನಲ್ಲೇ ಬೆಂಗಳೂರಿನ ಟೆಕ್ಕಿಗಳಿಗೆ ಆತಂಕ
ಬೆಂಗಳೂರು: ನಿನ್ನೆಯಷ್ಟೇ (ಮಾ.31) ಒರಾಕಲ್ ಟೆಕ್ ಸಂಸ್ಥೆ ಭಾರತದಲ್ಲಿನ ತನ್ನ ಉದ್ಯೋಗಿಗಳನ್ನು ವಜಾಗೊಳಿಸಿತು. ಅಂದಾಜು 12,000 ಟೆಕ್ಕಿಗಳನ್ನು ಈಗಾಗಲೇ ಹೊರನೂಕಿರುವ ಕಂಪನಿ, ಉದ್ಯೋಗಿಗಳ ಬದಲಿಗೆ ಕೃತಕ ಬುದ್ಧಿಮತ್ತೆ (ಎಐ) ಮೇಲೆ ಹೆಚ್ಚು ಬಂಡವಾಳ ಹೂಡಲು ನಿರ್ಧರಿಸಿರುವುದೇ ಲೇಆಫ್ ಪ್ರಕ್ರಿಯೆಗೆ ಮುಖ್ಯ ಕಾರಣ.
ಮಂಗಳವಾರ (ಮಾ.30) ಬೆಳಗ್ಗೆ 6 ಗಂಟೆಗೆ ಭಾರತದಲ್ಲಿ ಕೆಲಸ ಮಾಡುತ್ತಿರುವ ತನ್ನ ಟೆಕ್ಕಿಗಳಿಗೆ ಲೇಆಫ್ ಸಂದೇಶಗಳನ್ನು ಕಳಿಸುವ ಮೂಲಕ ಸಂಸ್ಥೆ ಬಿಗ್ ಶಾಕ್ ನೀಡಿದೆ. ಹಲವಾರು ಮಂದಿಗೆ ಇ-ಮೇಲ್ ಬಂದಿದ್ದು, ಕೆಲವರಿ ಮಾತ್ರ ಕಂಪನಿಯ ಲಾಗಿನ್, ಸಿಸ್ಟಮ್ ಲಾಕ್ ಆಗಿದೆ. ಕೆಲಸದಿಂದ ಕಿತ್ತುಬಿಸಾಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅಸಮಾಧಾನ ಹೊರಹಾಕಿರುವ ಉದ್ಯೋಗಿಗಳು, ಯಾವುದೇ ಮಾತುಕತೆ ಅಥವಾ ಮುಂಚಿತವಾಗಿ ಅಲರ್ಟ್ ಮಾಡದೆಯೇ ವಜಾಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಸಂಸ್ಥೆಯ ವ್ಯವಸ್ಥಾಪಕರಾಗಲಿ ಅಥವಾ ಎಚ್ಆರ್ ಆಗಲಿ, ನಮ್ಮ ಜೊತೆ ನೇರವಾಗಿ ಲೇಆಫ್ ಬಗ್ಗೆ ಚರ್ಚಿಸಿಲ್ಲ ಎಂದಿದ್ದಾರೆ. ವಜಾಗೊಳಿಸುವಿಕೆಯ ಕುರಿತಾಗಿ ಕಂಪನಿಯಿಂದ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಹೊರಬೀಳದೆ ಹೋದರೂ ಭಾರತದ ಅನೇಕ ಉದ್ಯೋಗಿಗಳು ತಮ್ಮ ಪರಿಸ್ಥಿತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಳ್ಳುವ ಮೂಲಕ ಹಲವರ ಗಮನಕ್ಕೆ ತಂದಿದ್ದಾರೆ.
2ನೇ ರೌಂಡ್ಗೆ ರೆಡಿ
ಈಗಾಗಲೇ ಭಾರತದ ಅನೇಕ ಉದ್ಯೋಗಿಗಳಿಗೆ ಗೇಟ್ಪಾಸ್ ನೀಡಿರುವ ಸಂಸ್ಥೆ, ಇನ್ನೆರೆಡು ವಾರಗಳಲ್ಲಿ ಎರಡನೇ ರೌಂಡ್ ವಜಾ ಪ್ರಕ್ರಿಯೆಗೆ ಪಟ್ಟಿ ಸಿದ್ಧಪಡಿಸುತ್ತಿದೆ ಎಂದು ವರದಿಯಾಗಿದೆ. ಈ ನಿಟ್ಟಿನಲ್ಲಿ, ಬೆಂಗಳೂರಿನ ಒರಾಕಲ್ ಟೆಕ್ಕಿಗಳಲ್ಲಿ ಕೆಲಸ ಕಳೆದುಕೊಳ್ಳುವ ಭೀತಿ ಸೃಷ್ಟಿಯಾಗಿದೆ.