- ಮೈಕ್ರೋಸಾಫ್ಟ್, ಟಿಸಿಎಸ್ ಬಳಿಕ ಒರಾಕಲ್ ಸಂಸ್ಥೆ
- ಬೆಳಗ್ಗೆ 6 ಗಂಟೆಗೆ ಇ-ಮೇಲ್ ಮೂಲಕ ಕಿತ್ತುಬಿಸಾಡಿರುವ ಸಂದೇಶ
- ಭಾರತದ ಉದ್ಯೋಗಿಗಳನ್ನು ದಿಢೀರ್ ಹೊರನೂಕಿದ ಕಂಪನಿ, ಹಲವರ ಆಕ್ರೋಶ
ನವದೆಹಲಿ: ಕಳೆದ ವರ್ಷವಷ್ಟೇ ಟಿಸಿಎಸ್, ಮೈಕ್ರೋಸಾಫ್ಟ್, ಅಮೆಜಾನ್ನಂತಹ ದೈತ್ಯ ಟೆಕ್ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾಗೊಳಿಸುವ ಕಾರ್ಯಕ್ಕೆ ಮುಂದಾಯಿತು. ಏಕಕಾಲಕ್ಕೆ ಬರೋಬ್ಬರಿ 15 ಸಾವಿರಕ್ಕೂ ಹೆಚ್ಚು ಟೆಕ್ಕಿಗಳ ಕೆಲಸಗಳನ್ನು ಕಿತ್ತುಕೊಂಡಿರುವ ಸಂಸ್ಥೆಗಳು, ಬೃಹತ್ ಆಕಾರದಲ್ಲಿ ಬೆಳೆಯುತ್ತಿರುವ ಕೃತಕ ಬುದ್ಧಿಮತ್ತೆಯ ಹಿಂದೆ ಓಡುತ್ತಿವೆ.
ಈಗ ಒರಾಕಲ್ ಸಂಸ್ಥೆಯು ತನ್ನ ಉದ್ಯೋಗಿಗಳ ವಜಾ ಪ್ರಕ್ರಿಯೆಯನ್ನು ಶುರು ಮಾಡಿದ್ದು, ಇಂದು (ಮಾ.30) ಬೆಳಗ್ಗೆ 6 ಗಂಟೆಗೆ ಭಾರತದಲ್ಲಿ ಕೆಲಸ ಮಾಡುತ್ತಿರುವ ತನ್ನ ಟೆಕ್ಕಿಗಳಿಗೆ ಲೇಆಫ್ ಸಂದೇಶಗಳನ್ನು ಕಳಿಸುವ ಮೂಲಕ ಬಿಗ್ ಶಾಕ್ ನೀಡಿದೆ. ಹಲವಾರು ಮಂದಿಗೆ ಇ-ಮೇಲ್ ಬಂದಿದ್ದು, ಕೆಲವರಿ ಮಾತ್ರ ಕಂಪನಿಯ ಲಾಗಿನ್, ಸಿಸ್ಟಮ್ ಲಾಕ್ ಆಗಿದೆ. ಕೆಲಸದಿಂದ ಕಿತ್ತುಬಿಸಾಡಿರುವ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿರುವ ಉದ್ಯೋಗಿಗಳು, ಯಾವುದೇ ಮಾತುಕತೆ ಅಥವಾ ಮುಂಚಿತವಾಗಿ ಅಲರ್ಟ್ ಮಾಡದೆಯೇ ವಜಾಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಸಂಸ್ಥೆಯ ವ್ಯವಸ್ಥಾಪಕರಾಗಲಿ ಅಥವಾ ಎಚ್ಆರ್ ಆಗಲಿ, ನಮ್ಮ ಜೊತೆ ನೇರವಾಗಿ ಲೇಆಫ್ ಬಗ್ಗೆ ಚರ್ಚಿಸಿಲ್ಲ ಎಂದಿದ್ದಾರೆ. ವಜಾಗೊಳಿಸುವಿಕೆಯ ಕುರಿತಾಗಿ ಕಂಪನಿಯಿಂದ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಹೊರಬೀಳದೆ ಹೋದರೂ ಭಾರತದ ಅನೇಕ ಉದ್ಯೋಗಿಗಳು ತಮ್ಮ ಪರಿಸ್ಥಿತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಳ್ಳುವ ಮೂಲಕ ಹಲವರ ಗಮನಕ್ಕೆ ತಂದಿದ್ದಾರೆ.
ಎಐ ಮೇಲೆ ಹೂಡಿಕೆ
ಆಧುನಿಕ ಹಾಗೂ ಭವಿಷ್ಯದ ಸ್ಮಾರ್ಟ್ ಟೆಕ್ನಾಲಜಿ ಎಐ ಮೇಲೆ ಹೆಚ್ಚಿನ ಬಂಡವಾಳ ಹೂಡಲು ದಾಪುಗಾಲು ಇಟ್ಟಿರುವ ಸಂಸ್ಥೆ, ತಮ್ಮ ಹೂಡಿಕೆಗೆ ಹಣ ವಿನಿಯೋಗಿಸಲು ಬೃಹತ್ ಸಂಖ್ಯೆಯ ಉದ್ಯೋಗಿಗಳ ವಜಾಗೊಳಿಸುವಿಕೆಗೆ ಮುಂದಾಗಿರುವುದು ಸ್ಪಷ್ಟವಾಗಿದೆ. ಟಿಡಿ ಕೋವೆನ್ ಅಂದಾಜಿನ ಪ್ರಕಾರ, ಈ ಕಡಿತವು 20,000ದಿಂದ 30,000 ಉದ್ಯೋಗಿಗಳನ್ನು ತೆಗೆದುಹಾಕುವ ಗುರಿ ಹೊಂದಿದೆ ಎನ್ನಲಾಗಿದೆ,(ಏಜೆನ್ಸೀಸ್).