ಒರಾಕಲ್​ ಸಂಸ್ಥೆಯಿಂದ ವಜಾ ಪ್ರಕ್ರಿಯೆ 
ದೇಶ

21,000 ಉದ್ಯೋಗಿಗಳ ವಜಾ ಸತ್ಯ! ಮುಂದಿನ ದಿನಗಳಲ್ಲಿ ಇನ್ನಷ್ಟು ಜಾಬ್ಸ್​ ಕಡಿತ ಗ್ಯಾರಂಟಿ: ಒರಾಕಲ್ ಮುನ್ನೆಚ್ಚರಿಕೆ

ಪ್ರಮುಖ ಮುಖ್ಯಾಂಶಗಳು

  • 21,000 ಉದ್ಯೋಗಗಳನ್ನು ಕಿತ್ತುಬಿಸಾಡಿದ ಒರಾಕಲ್​ ಸಂಸ್ಥೆ
  • ಮುಂದಿನ ದಿನಗಳಲ್ಲಿ ಇನ್ನಷ್ಟು ಕಟ್​ ಆಫ್​ ಆಗಲಿದೆ ಎಂದ ಒರಾಕಲ್​
Oracle Layoffs: ಟೆಕ್​ ದೈತ್ಯ ಕಂಪನಿಗಳಾದ ಟಿಸಿಎಸ್​, ಅಮೆಜಾನ್​, ಮೈಕ್ರೋಸಾಫ್ಟ್​, ಇನ್ಫೋಸಿಸ್ ತಿಂಗಳುಗಳ ಹಿಂದಷ್ಟೇ​ ತನ್ನ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಬಿಸಾಡಿದ (Lay Off) ವಿಷಯ ಬಹುತೇಕರಿಗೆ ಗೊತ್ತೇ ಇದೆ. ಇದಕ್ಕೆ ಸಂಸ್ಥೆಗಳು ಕೊಟ್ಟ ಕಾರಣ ಹಲವು. ಆದರೆ, ಮುಖ್ಯ ಕಾರಣ ಮಾತ್ರವೇನು ಎಂದು ನೋಡುವುದಾದರೆ ಅದು ಕೃತಕ ಬುದ್ಧಿಮತ್ತೇ (ಎಐ) ಎಂಬುದೇ ಸದ್ಯ ಬೇಸರದ ಸಂಗತಿ. ಇದೀಗ ಈ ಸಾಲಿನಲ್ಲಿ ಒರಾಕಲ್​ ಮುಂಚೂಣಿಯಲ್ಲಿದೆ.
ಡಿಜಿಟಲ್​ ಯುಗವನ್ನು ಸರ್ವಾಧಿಕಾರಿಯಾಗಿ ಆಳಲು ಪ್ರಾರಂಭಿಸಿರುವ ಎಐ ಟೆಕ್ನಾಲಜಿ, ಟೆಕ್​ ಕಂಪನಿಗಳನ್ನು ಪೆಡಂಭೂತದಂತೆ ಆವರಿಸಿಕೊಂಡಿದೆ. ಇದಕ್ಕೆ ಅನುಗುಣವಾಗಿ, ಕಂಪನಿಗಳು ಕೂಡ ಕೃತಕ ಬುದ್ಧಿಮತ್ತೇ ಮೊರೆ ಹೋಗಿದ್ದು, ಹೆಚ್ಚಿನ ಸಂಖ್ಯೆಯ ಹುದ್ದೆಗಳನ್ನು ಕಡಿತಗೊಳಿಸುತ್ತಲೇ ಬರುತ್ತಿದೆ. ಸಾಲು ಸಾಲಾಗಿ ಬಹುಮುಖ್ಯ ಹಾಗೂ ಅದರ ಕೆಳವರ್ಗದ ಹುದ್ದೆಗಳನ್ನು ಕಿತ್ತುಬಿಸಾಡುತ್ತಿರುವ ಒರಾಕಲ್​, ಈ ಬಾರಿ ಬರೋಬ್ಬರಿ 21 ಸಾವಿರ ಮಂದಿಯನ್ನು ಕೆಲಸದಿಂದ ವಜಾಗೊಳಿಸಿರುವ ಬಗ್ಗೆ ಕಡೆಗೂ ಸ್ಪಷ್ಟನೆ ನೀಡಿದೆ.
ಅಮೆರಿಕದ ಟೆಕ್ನಾಲಜಿಯ ಈ ದೈತ್ಯ ಕಂಪನಿಯು 2026ರ ಆರ್ಥಿಕ ವರ್ಷದಲ್ಲಿ ಜಾಗತಿಕವಾಗಿ ಸುಮಾರು 21,000 ಉದ್ಯೋಗಗಳನ್ನು ಕಡಿತಗೊಳಿಸಿರುವುದು ನಿಜ ಎಂದು ತಿಳಿಸಿದೆ. ಇದಕ್ಕೆ ಎಐ ಮೂಲ ಕಾರಣ ಎಂಬುದನ್ನೂ ಸ್ಪಷ್ಟಪಡಿಸಿದೆ. ಕಂಪನಿಯ ಕಾರ್ಯಪಡೆಯು ಶೇ.13ರಷ್ಟು ಕುಸಿದಿದ್ದು, ಕಳೆದ ವರ್ಷ ಸುಮಾರು 1,62,000 ಉದ್ಯೋಗಿಗಳಿಂದ ಈ ವರ್ಷದ ಮೇ 31ರ ಹೊತ್ತಿಗೆ 1,41,000ಕ್ಕೆ ಕಟ್​ ಆಫ್​ ಮಾಡಲಾಗಿದೆ ಎಂದು ಹೇಳಿಕೊಂಡಿದೆ.
"ನಮ್ಮ ವರ್ಕ್​ ಫೋರ್ಸ್​ನಲ್ಲಿ ಬದಲಾವಣೆಗಳಿಗೆ ಎಐ ತಂತ್ರಜ್ಞಾನದ ಅವಲಂಬಿತವೇ ಕಾರಣ. ಭವಿಷ್ಯದಲ್ಲಿ ಇನ್ನಷ್ಟು ಉದ್ಯೋಗಿಗಳ ಹಾಗೂ ಉದ್ಯೋಗಗಳು ಕಡಿತವಾಗಲಿದೆ. ಇದು ಇಲ್ಲಿಗೆ ಮುಗಿಯುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ. ಇದು ಪ್ರಸ್ತುತ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಪರೋಕ್ಷ ಮುನ್ನೆಚ್ಚರಿಕೆಯಾಗಿದೆ ಎಂಬುದರಲ್ಲಿ ಅನುಮಾನವೇ ಬೇಡ. ಬಿಲಿಯನ್​ಗಟ್ಟಲೇ ಹಣವನ್ನು ಕೇವಲ ಕೃತಕ ಬುದ್ಧಿಮತ್ತೇ ಮೇಲೆ ಹೂಡಿಕೆ ಮಾಡುತ್ತಿರುವುದೇ ಲೇಆಫ್​ ಪ್ರಕ್ರಿಯೆಗೆ ಮುಖ್ಯ ಕಾರಣ,(ಏಜೆನ್ಸೀಸ್).