No-Confidence Motion | ಸಂಖ್ಯಾಬಲದ ಆಟದಲ್ಲಿ ಮಕಾಡೆ ಮಲಗಿದ ವಿರೋಧ ಪಕ್ಷಗಳು
ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು (No-Confidence Motion) ನಿರೀಕ್ಷೆಯಂತೆ ಧ್ವನಿ ಮತದಾನದ ಮೂಲಕ ಸೋತಿದ್ದು, ಈ ನಿರ್ಣಯದ ಮೇಲಿನ ಚರ್ಚೆಯು ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ನಡುವಿನ ವಾಕ್ಸಮರ ಮತ್ತು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು.
ರಾಹುಲ್ ನಡವಳಿಕೆ ಕೆದಕಿದ ಅಮಿತ್ ಷಾ
ಚರ್ಚೆಯ ವೇಳೆ ವಿರೋಧ ಪಕ್ಷಗಳು ಸ್ಪೀಕರ್ ಪಕ್ಷಪಾತಿಯಾಗಿದ್ದಾರೆ ಎಂದು ಟೀಕಿಸಿದಾಗ, ಇದಕ್ಕೆ ತಿರುಗೇಟು ನೀಡಿದ ಅಮಿತ್ ಷಾ, ನೇರವಾಗಿ ರಾಹುಲ್ ಗಾಂಧಿಯ ಹಳೆಯ ವರ್ತನೆಗಳನ್ನು ಉಲ್ಲೇಖಿಸಿದರು. ಸರ್, ಇವರು ನಡವಳಿಕೆಯ ಬಗ್ಗೆ ನಮಗೆ ಪಾಠ ಮಾಡುತ್ತಿದ್ದಾರೆ. ಇವರ ಪರಮೋಚ್ಚ ನಾಯಕ (ರಾಹುಲ್ ಗಾಂಧಿ) ಸದನದೊಳಗೆ ಕಣ್ಣು ಮಿಟುಕಿಸಿದ್ದು, ಪ್ರಧಾನಿಯನ್ನು ಅಪ್ಪಿಕೊಂಡಿದ್ದು ಮತ್ತು ಫ್ಲೈಯಿಂಗ್ ಕಿಸ್ ನೀಡಿದ್ದನ್ನು ದೇಶ ನೋಡಿದೆ. ಇಂತಹ ವರ್ತನೆಗಳು ಪ್ರಚೋದನಾಕಾರಿಯಾಗಿಲ್ವೇ? ಎಂದು ಷಾ ಪ್ರಶ್ನಿಸಿದರು.
ಅವಿಶ್ವಾಸಕ್ಕೆ ಕಾರಣ...
ಸಂಸತ್ತಿನ ಕಲಾಪಗಳಲ್ಲಿ ಸಭಾಧ್ಯಕ್ಷರು ಪಕ್ಷಪಾತ ಮಾಡುತ್ತಿದ್ದಾರೆ ಮತ್ತು ವಿರೋಧ ಪಕ್ಷಗಳ ಧ್ವನಿಯನ್ನು ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿ ಇಂಡಿಯಾ ಒಕ್ಕೂಟದ ಸದಸ್ಯರು ಈ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದಾರೆ. ಮುಖ್ಯವಾಗಿ, ಪ್ರಧಾನಿಯವರ ಕುರಿತು ಮಾತನಾಡಲು ಹೋದಾಗ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಮೈಕ್ರೋಫೋನ್ ಆಫ್ ಮಾಡುವುದು, ಅಡ್ಡಿಪಡಿಸುವುದು ಮತ್ತು ವಿಪಕ್ಷದ ಸಂಸದರನ್ನು ಅಮಾನತುಗೊಳಿಸುವ ಮೂಲಕ ಸಂಸದೀಯ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಅಂಕಿ-ಅಂಶಗಳ ಬಲ : ವಿರೋಧ ಪಕ್ಷಗಳಿಗೆ ಮುಖಭಂಗ
ನಿರ್ಣಯದ ಮೇಲಿನ ಮತದಾನಕ್ಕೆ ಮುನ್ನವೇ ಅಂಕಿ-ಅಂಶಗಳು ಸರ್ಕಾರದ ಪರವಾಗಿದ್ದವು. ಸ್ಪೀಕರ್ ಅವರನ್ನು ಉಳಿಸಿಕೊಳ್ಳಲು ಎನ್‌ಡಿಎಗೆ ಸ್ಪಷ್ಟ ಬಹುಮತವಿತ್ತು.
ಸರ್ಕಾರದ ಬಲ (NDA): ಒಟ್ಟು 293 ಸಂಸದರ ಬೆಂಬಲವಿತ್ತು. ಇದರಲ್ಲಿ ಬಿಜೆಪಿ (240), ಜೆಡಿಯು (16), ಟಿಡಿಪಿ (12) ಮತ್ತು ಇತರ ಮಿತ್ರಪಕ್ಷಗಳು ಸೇರಿವೆ.
ವಿರೋಧ ಪಕ್ಷದ ಬಲ (INDIA): ಕೇವಲ 238 ಸಂಸದರು ಮಾತ್ರ ನಿರ್ಣಯದ ಪರವಾಗಿದ್ದರು. ಇದರಲ್ಲಿ ಕಾಂಗ್ರೆಸ್‌ನ 99 ಸಂಸದರ ಜೊತೆಗೆ ಎಸ್‌ಪಿ, ಟಿಎಂಸಿ ಮತ್ತು ಡಿಎಂಕೆ ಸದಸ್ಯರಿದ್ದರು.
ಸಂಖ್ಯಾಬಲದ ಕೊರತೆಯಿಂದಾಗಿ ವಿರೋಧ ಪಕ್ಷಗಳ ನಿರ್ಣಯವು ಧ್ವನಿ ಮತದಾನದಲ್ಲಿ ಸೋಲಬೇಕಾಯಿತು. ಈ ಮೂಲಕ ಓಂ ಬಿರ್ಲಾ ಸ್ಪೀಕರ್ ಆಗಿ ಮುಂದುವರಿಯುವುದು ಖಚಿತವಾಗಿದೆ(ಏಜೆನ್ಸೀಸ್).