ಪಿ ಚಿದಂಬರಂ 
ದೇಶ

ಒಂದು ರಾಷ್ಟ್ರ, ಒಂದು ಚುನಾವಣೆಗೆ ವಿರೋಧ; ದೇಶಾದ್ಯಂತ ಅಭಿಯಾನದ ಎಚ್ಚರಿಕೆ ನೀಡಿದ ಪಿ.ಚಿದಂಬರಂ | P Chidambaram

ನವದೆಹಲಿ: ಕೇಂದ್ರ ಸರ್ಕಾರ ತರಲಿಚ್ಚಿಸಿರುವ ಒಂದು ರಾಷ್ಟ್ರ, ಒಂದು ಚುನಾವಣೆಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಮತ್ತು ಮಾಜಿ ಗೃಹಸಚಿವ ಪಿ.ಚಿದಂಬರಂ(P Chidambaram), ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ 2029ರಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸಲು ಸಾಧ್ಯವಿಲ್ಲ. ಪ್ರಸ್ತಾವಿತ ಮಸೂದೆ ವಿರುದ್ಧ ವಿಪಕ್ಷಗಳು ದೇಶಾದ್ಯಂತ ಅಭಿಯಾನ ಆರಂಭಿಸಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆಯನ್ನು ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಪಿ.ಪಿ. ಚೌಧರಿ ಅವರು, ಸಂವಿಧಾನಕ್ಕೆ ತಿದ್ದುಪಡಿ ತಂದು ರಾಜ್ಯ ಸರ್ಕಾರಗಳು ಈ ಕ್ರಮಕ್ಕೆ ಬೆಂಬಲ ನೀಡಿದರೆ 2029ರಲ್ಲಿ ಏಕಕಾಲಿಕ ಚುನಾವಣೆಗಳನ್ನು ನಡೆಸುವುದು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪಿ.ಚಿದಂಬರಂ, 2029ರಲ್ಲಿ ಏಕಕಾಲಿಕ ಚುನಾವಣೆಗಳನ್ನು ನಡೆಸಬಹುದು ಎಂಬ ಚೌಧರಿ ಅವರ ಹೇಳಿಕೆಯನ್ನು ಓದಿದ್ದೇನೆ. ಅವರ ಅಭಿಪ್ರಾಯ ತಪ್ಪಾಗಿದೆ ಮತ್ತು ಅದು ಮಸೂದೆಯ ಪಠ್ಯಕ್ಕೆ ವಿರುದ್ಧವಾಗಿದೆ ಎಂದು ನನಗೆ ಅನ್ನಿಸುತ್ತದೆ.
ಒಂದು ವೇಳೆ ಮಸೂದೆಯು ಅಂಗೀಕಾರಗೊಂಡರೂ ಮಸೂದೆಯ ಅಡಿಯಲ್ಲಿ ಬರುವ 'ನಿಗದಿತ ದಿನಾಂಕ'ವು ಕೇವಲ 'ಸಾರ್ವತ್ರಿಕ ಚುನಾವಣೆಯ ನಂತರದ' ದಿನಾಂಕವಾಗಿರಲು ಮಾತ್ರ ಸಾಧ್ಯ. ಮುಂದಿನ ಸಾರ್ವತ್ರಿಕ ಚುನಾವಣೆಯು 2029ರಲ್ಲಿ ನಡೆಯಲಿದೆ. ಆದ್ದರಿಂದ, 2029ರಲ್ಲಿ ಏಕಕಾಲಿಕ ಚುನಾವಣೆಗಳನ್ನು ನಡೆಸುವುದು ಸಾಧ್ಯವಿಲ್ಲ. ಇದು ಒಂದು ಒಳ್ಳೆಯ ವಿಷಯವೇ ಆಗಿದೆ ಎಂದಿದ್ದಾರೆ.
ಒಂದು ರಾಷ್ಟ್ರ, ಒಂದು ಚುನಾವಣೆಯ ಮಸೂದೆಯನ್ನು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಸಾಂವಿಧಾನಿಕ ವಿಕೃತಿ ಎಂದಿರುವ ಅವರು, ಇವುಗಳ ವಿರುದ್ಧ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ದೇಶಾದ್ಯಂತ ಅಭಿಯಾನವನ್ನು ಆರಂಭಿಸಲಿವೆ ಎಂದು ಹೇಳಿದ್ದಾರೆ.
ಸೋಮವಾರ ಜಂಟಿ ಸಂಸದೀಯ ಸಮಿತಿಗೆ ಹಾಜರಾಗಿ ಈ ಮಸೂದೆಗಳ ಕುರಿತ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿರುವ ಚಿದಂಬರಂ, ತಮ್ಮ ನಿಲುವನ್ನು ಮಂಡಿಸಲು ಅವಕಾಶ ನೀಡಿದ್ದಕ್ಕಾಗಿ ಕೃತಜ್ಞತೆ. ಜೆಪಿಸಿ ಮುಂದೆ ನಾನು ಮಂಡಿಸಿದ ಸಾಕ್ಷ್ಯ ಅಥವಾ ವಿವರಗಳನ್ನು ಬಹಿರಂಗಪಡಿಸುವಂತಿಲ್ಲ; ಆದರೆ, ಈ ಮಸೂದೆಯು ಸಂವಿಧಾನದ ಮೂಲಭೂತ ಲಕ್ಷಣಗಳನ್ನು, ಅದರಲ್ಲೂ ವಿಶೇಷವಾಗಿ ಒಕ್ಕೂಟ ವ್ಯವಸ್ಥೆಯ ದೇಶವೊಂದರ ಸಂಸದೀಯ ಪ್ರಜಾಪ್ರಭುತ್ವದ ತತ್ವಗಳನ್ನು ಉಲ್ಲಂಘಿಸುತ್ತದೆ ಎಂಬುದೇ ನನ್ನ ಹೇಳಿಕೆಯ ಮುಖ್ಯ ಸಾರವಾಗಿತ್ತು ಎಂದಿದ್ದಾರೆ.

ಒಂದು ರಾಷ್ಟ್ರ, ಒಂದು ಚುನಾವಣೆಯ ಪ್ರಸ್ತಾವಿತ ಮಸೂದೆಗಳಾದ ಸಂವಿಧಾನ (129ನೇ ತಿದ್ದುಪಡಿ) ಮಸೂದೆ-2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಮಸೂದೆ-2024 ಅನ್ನು ಪಿ.ಪಿ. ಚೌಧರಿ ನೇತೃತ್ವದ 31 ಸದಸ್ಯರ ಜಂಟಿ ಸಂಸದೀಯ ಸಮಿತಿಯು ಪರಿಶೀಲನೆ ನಡೆಸುತ್ತಿದೆ (ಏಜೆನ್ಸೀಸ್).