ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮತ್ತು ಮೋಹನ್ ಭಾಗವತ್
ನವದೆಹಲಿ: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಅಮೆರಿಕ ಭೇಟಿಗೆ ವಿರೋಧ ವ್ಯಕ್ತಪಡಿಸಿರುವ ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವನ್ನು(USCIRF) ಕೇಂದ್ರ ಸರ್ಕಾರ ತೀವ್ರವಾಗಿ ಟೀಕಿಸಿದ್ದು, ಆ ಸಂಸ್ಥೆ ಪಕ್ಷಪಾತಿಯಾಗಿದ್ದು, ಮತ್ತು ವಿಶ್ವಾಸಾರ್ಹತೆಯ ಕೊರತೆ ಹೊಂದಿದೆ ಎಂದು ಕಿಡಿಕಾರಿದೆ.
ಈ ಕುರಿತು ಶುಕ್ರವಾರ(ಆ. 21) ಮಾತನಾಡಿರುವ ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಯುಎಸ್‌ಸಿಐಆರ್‌ಎಫ್ ನಿರ್ದಿಷ್ಟ ಕಾರ್ಯಸೂಚಿಯನ್ನು ಉತ್ತೇಜಿಸುವ ಸಂಸ್ಥೆಯಾಗಿದ್ದು, ಅದರ ಕಾಮೆಂಟ್‌ಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಹೇಳಿದ್ದಾರೆ.
ಯುಎಸ್‌ಸಿಐಆರ್‌ಎಫ್ ಪಕ್ಷಪಾತದ ಮನೋಭಾವದಿಂದ ವರ್ತಿಸುತ್ತಿದೆ. ನಾವು ಅಂತಹ ಸಂಸ್ಥೆಗಳಿಂದ ದೂರವಿರಬೇಕು. ಅವರಿಗೆ ಯಾವುದೇ ವಿಶ್ವಾಸಾರ್ಹತೆ ಇಲ್ಲ ಮತ್ತು ಅವರದೇ ಆದ ಕಾರ್ಯಸೂಚಿಗಳಿವೆ. ಅದು ಭಾರತದ ಬಹುತ್ವ ವ್ಯವಸ್ಥೆಯ ವಾಸ್ತವತೆಯನ್ನು ಸ್ವೀಕರಿಸುತ್ತದೆ. ಮತ್ತು ವೈವಿಧ್ಯಮಯ ಸಮುದಾಯಗಳ ಸಾಮರಸ್ಯದ ಸಹಬಾಳ್ವೆಯನ್ನು ಗುರುತಿಸುತ್ತದೆ ನಾವು ನಿರೀಕ್ಷೆ ಮಾಡಲ್ಲ ಎಂದಿದ್ದಾರೆ.
ಮೋಹನ್ ಭಾಗವತ್ ಅವರ ವಿದೇಶ ಪ್ರವಾಸಗಳ ಸಂದರ್ಭದಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದು ಸೂಕ್ತವಲ್ಲ. ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಸುಳ್ಳು ವರದಿಗಳನ್ನು ನೀಡುವ ಬದಲು, ಅಮೆರಿಕದಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿಗಳು ಮತ್ತು ವಿದೇಶದಲ್ಲಿರುವ ಭಾರತೀಯರ ಸುರಕ್ಷತೆಯ ಮೇಲೆ ಗಮನಹರಿಸಬೇಕು ಎಂದು ತಿರುಗೇಟು ನೀಡಿದ್ದಾರೆ.
ಯುಎಸ್‌ಸಿಐಆರ್‌ಎಫ್ ಹೇಳಿದ್ದೇನು?
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಈ ತಿಂಗಳ 29ರಂದು ಅಮೆರಿಕ ಭೇಟಿ ನಿಗದಿಯಾಗಿದೆ. ಆದರೆ ಅವರ ಭೇಟಿಗೆ ವಿರೋಧ ವ್ಯಕ್ತಪಡಿಸಿ ಮಾತನಾಡಿರುವ ಯುಎಸ್‌ಸಿಐಆರ್‌ಎಫ್ ಸಮಿತಿಯ ಅಧ್ಯಕ್ಷ ಆಸಿಫ್ ಮಹಮೂದ್, ಸಂಘ ಪರಿವಾರದ ಬಗ್ಗೆ ಬಲವಾದ ಟೀಕೆಗಳನ್ನು ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಂಘಪರಿವಾರದ ಸದಸ್ಯರಾಗಿದ್ದು, ಅದರ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ಅದರ ಅಂಗಸಂಸ್ಥೆಗಳು ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುತ್ತಿವೆ ಎಂದು ಆರೋಪಿಸಿದ್ದರು. ಮತ್ತು ಆರ್ಎಸ್ಎಸ್ ಸದಸ್ಯರ ಮೇಲೆ ನಿರ್ಬಂಧಗಳನ್ನು ವಿಧಿಸಬೇಕು ಮತ್ತು ಅದರ ನಾಯಕರು ಅಮೆರಿಕದಲ್ಲಿ ಯಾವುದೇ ರಾಜತಾಂತ್ರಿಕ ಶಿಷ್ಟಾಚಾರ ಅಥವಾ ಉನ್ನತ ಮಟ್ಟದ ಸಭೆಗಳನ್ನು ನಡೆಸಲು ಅವಕಾಶ ನೀಡಬಾರದು ಎಂದು ಹೇಳಿದ್ದರು.
ಯುಎಸ್‌ಸಿಐಆರ್‌ಎಫ್ ಸ್ವತಂತ್ರ, ದ್ವಿಪಕ್ಷೀಯ ಯುಎಸ್ ಫೆಡರಲ್ ಸರ್ಕಾರಿ ಸಂಸ್ಥೆಯಾಗಿದೆ. ಇದು ಅಮೆರಿಕ ಅಧ್ಯಕ್ಷರು, ವಿದೇಶಾಂಗ ಕಾರ್ಯದರ್ಶಿ ಮತ್ತು ಕಾಂಗ್ರೆಸ್‌ಗೆ ನೀತಿ ಶಿಫಾರಸುಗಳನ್ನು ಮಾಡುತ್ತದೆ, ಅವುಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ (ಏಜೆನ್ಸೀಸ್).