ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್
ಹೈದರಾಬಾದ್: ತೆಲಂಗಾಣದ ಹೈದರಾಬಾದ್ ಮೂಲದ NALSAR ಕಾನೂನು ವಿಶ್ವವಿದ್ಯಾಲಯದ ಸುಮಾರು 450 ವಿದ್ಯಾರ್ಥಿಗಳು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನು ವಿವಿಯ ಘಟಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸುವಿಕೆಯನ್ನು ವಿರೋಧಿಸಿದ್ದು, ಈ ಕುರಿತು ಪರಿಶೀಲಿಸುವಂತೆ ಸಂಸ್ಥೆಯ ಕುಲಪತಿಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.
2026ರ ಬ್ಯಾಚ್‌ನ ಕೆಲವು ಕಾನೂನು ವಿದ್ಯಾರ್ಥಿಗಳು ಜು. 23ರಂದು ಇಮೇಲ್ ಮೂಲಕ ಪತ್ರ ಬರೆದಿದ್ದು, ಜುಲೈ 20ರಂದು ಜಂತರ್ ಮಂತರ್‌ನಲ್ಲಿ 'ಚಲೋ ಸಂಸದ್' ಯಾತ್ರೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಕ್ರೂರ ಪೊಲೀಸ್ ಕ್ರಮಕ್ಕೆ ಸಂಬಂಧಿಸಿದ ಅರ್ಜಿಯನ್ನು ತುರ್ತು ವಿಚಾರಣೆಗೆ ಒಳಪಡಿಸಲು ಸಿಜೆಐ ನಿರಾಕರಿಸಿದ್ದನ್ನು ಉಲ್ಲೇಖಿಸಿ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಮುಂಬರುವ ಘಟಿಕೋತ್ಸವಕ್ಕೆ ಸಿಜೆಐ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುವ ಪ್ರಸ್ತಾಪದ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಲು ಈ ಇಮೇಲ್ ಬರೆಯುತ್ತಿರುವುದಾಗಿ ಅವರು ಹೇಳಿದ್ದು, ಕಾನೂನು ವಿದ್ಯಾರ್ಥಿಗಳಾಗಿ, ನಮ್ಮ ಕಳವಳವು ನಿರ್ದಿಷ್ಟವಾದದ್ದು. ಮತ್ತು ಸಾಂವಿಧಾನಿಕ ಹಕ್ಕುಗಳ ಬದ್ಧತೆ, ನ್ಯಾಯದ ಲಭ್ಯತೆ ಮತ್ತು ಕುಂದುಕೊರತೆಗಳಿಗೆ ತಾರ್ಕಿಕವಾಗಿ ಸ್ಪಂದಿಸುವುದು ಸೇರಿದಂತೆ ವಿವಿಯ ತನ್ನದೇ ಆದ ಮೌಲ್ಯಗಳು, ಅದು ಮಾಡುವ ಆಯ್ಕೆಗಳಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುವ ಕ್ಷಣವೇ ಘಟಿಕೋತ್ಸವವಾಗಿದೆ.
ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯದ ಗಂಭೀರ ಆರೋಪಗಳನ್ನು ತಳ್ಳಿಹಾಕುವಂತಹ ಸಾರ್ವಜನಿಕ ನಡವಳಿಕೆಗಳನ್ನು ಹೊಂದಿರುವ ಗಣ್ಯರಿಂದ ನಮ್ಮ ಪದವಿಗಳನ್ನು ಪಡೆಯುವುದು, ನಲ್ಸಾರ್‌ನಲ್ಲಿ ನಮ್ಮ ವ್ಯಾಸಂಗದ ಅವಧಿಯಲ್ಲಿ ನಾವು ಕಲಿತ ಮೌಲ್ಯಗಳಿಗೆ ವಿರುದ್ಧವಾಗಿದೆ. ಯಾವುದೇ ಔಪಚಾರಿಕ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನಾವು ಈಗಲೇ ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇವೆ.
ಇದರಿಂದ ನಮ್ಮ ಅಭಿಪ್ರಾಯಗಳನ್ನು ಸಕಾಲದಲ್ಲಿ ಪರಿಗಣನೆಗೆ ತೆಗೆದುಕೊಳ್ಳಬೇಕು. ಘಟಿಕೋತ್ಸವದ ಮುಖ್ಯ ಅತಿಥಿಯ ಆಯ್ಕೆಯಲ್ಲಿ ಯಾವುದೇ ಅಂತಿಮ ನಿರ್ಧಾರವನ್ನು ತಿಳಿಸುವ ಮೊದಲು ಅಥವಾ ಆಹ್ವಾನವನ್ನು ನೀಡುವ ಮೊದಲು ಪದವಿ ಪಡೆಯುತ್ತಿರುವ ಬ್ಯಾಚ್‌ನೊಂದಿಗೆ ಸಮಾಲೋಚಿಸುವಂತೆ ವಿದ್ಯಾರ್ಥಿಗಳು ವಿನಂತಿಸಿದ್ದಾರೆ. ಇನ್ನೂ ಈ ಕುರಿತು ವಿವಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ (ಏಜೆನ್ಸೀಸ್).