ನವದೆಹಲಿ: ಮಳೆಗಾಲದ ಸಂಸತ್ ಅಧಿವೇಶನ ನಾಲ್ಕನೇ ವಾರಕ್ಕೆ ಕಾಲಿಡುತ್ತಿದ್ದು, ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಲಾಠಿ ಚಾರ್ಜ್ ಬಳಿಕ ಕಲಾಪಕ್ಕೆ ಗೈರು ಹಾಜರಾಗಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ವಿರುದ್ಧ ಪ್ರತಿಪಕ್ಷಗಳು ಕಿಡಿಕಾರುತ್ತಿರುವ ನಡುವೆ, ಅಮಿತ್ ಶಾ ಸದನಕ್ಕೆ ಬಂದ್ರೆ ಪ್ರತಿಪಕ್ಷಗಳಿಗೆ ಅರಗಿಸಿಕೊಳ್ಳಲಾಗಲ್ಲ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು(Kiren Rijiju) ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ವಿರೋಧ ಪಕ್ಷದ ಸದಸ್ಯರು ಶಾ ಅವರ ಗೈರುಹಾಜರಿ ಮತ್ತು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದಬ್ಬಾಳಿಕೆಯ ಬಗ್ಗೆ ಶಾ ಮಾತನಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ಈ ಕುರಿತು ಶುಕ್ರವಾರ(ಆ. 07) ಸದನದಲ್ಲಿ ಮಾತನಾಡಿರುವ ಕಿರಣ್ ರಿಜಿಜು, ಅಮಿತ್ ಶಾ ಸದನದಲ್ಲಿ ಪ್ರತಿಕ್ರಿಯಿಸಿದಾಗ, ವಿರೋಧ ಪಕ್ಷಗಳಿಗೆ ಅದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಿಯಮದಂತೆ, ಕಲಾಪಗಳನ್ನು ಪಟ್ಟಿ ಮಾಡಿದ ಸಚಿವರು ಸದನಕ್ಕೆ ಬರಬೇಕು. ಯಾವ ಸಚಿವರು ಸದನಕ್ಕೆ ಬರಬೇಕು ಮತ್ತು ಯಾರು ಪ್ರತಿಕ್ರಿಯಿಸಬೇಕು ಎಂದು ನೀವು ನಿರ್ದೇಶಿಸಲು ಸಾಧ್ಯವಿಲ್ಲ. ಅದನ್ನು ಸರ್ಕಾರ ಮತ್ತು ಅಧ್ಯಕ್ಷರು ನಿರ್ಧರಿಸುತ್ತಾರೆ ಎಂದು ಪ್ರತಿಪಕ್ಷಗಳ ಸಂಸದರ ವಿರುದ್ಧ ಕಿಡಿಕಾರಿದ್ದಾರೆ.
ಇದೇ ವೇಳೆ ರಾಜ್ಯಸಭೆಯಲ್ಲಿ, ಕಾಂಗ್ರೆಸ್ ಅಧ್ಯಕ್ಷ ಮತ್ತು ಎಲ್‌ಒಪಿ ಮಲ್ಲಿಕಾರ್ಜುನ ಖರ್ಗೆ, ಸಭಾಪತಿ ಸಿಪಿ ರಾಧಾಕೃಷ್ಣನ್ ಅವರು ಅಮಿತ್ ಶಾ ಅವರಿಗೆ ನಿರ್ದೇಶನ ನೀಡಿದ್ದಾರೆ ಎಂದು ಪ್ರತಿಪಾದಿಸಿದರು. ಇದನ್ನು ತಿರಸ್ಕರಿಸಿದ ರಿಜಿಜು, ಪ್ರತಿಪಕ್ಷ ಸದಸ್ಯರು ಸದನವನ್ನು ದಾರಿ ತಪ್ಪಿಸುತ್ತಿದ್ದಾರೆ. ಅಧ್ಯಕ್ಷರಿಂದ ಯಾವುದೇ ನಿರ್ದೇಶನ ಬಂದಿಲ್ಲ. ನಾನು ದಾಖಲೆಯಲ್ಲಿ ಹೇಳುತ್ತಿದ್ದೇನೆ: ಸಂಸತ್ತು ಬೆಳಿಗ್ಗೆ ಆರಂಭವಾದಾಗಿನಿಂದ ರಾತ್ರಿ ಮುಗಿಯುವವರೆಗೆ, ಗೃಹಸಚಿವರು ಸಂಸತ್ತಿನಲ್ಲಿರುತ್ತಾರೆ. ಯಾವುದೇ ಸಚಿವರು ಸದನಕ್ಕೆ ಬರಲು ಯಾವುದೇ ನಿರ್ದೇಶನ ನೀಡಲಾಗಿಲ್ಲ. ನೀವು ಬೆಳಿಗ್ಗೆ 11 ಗಂಟೆಯ ನಂತರ ಹೊರಡುತ್ತೀರಿ, ಆದರೆ ಗೃಹಸಚಿವರು ಸದನದಲ್ಲಿಯೇ ಇರುತ್ತಾರೆ ಎಂದಿದ್ದಾರೆ.
ಕಾಂಗ್ರೆಸ್ ಪ್ರತಿಕ್ರಿಯೆ
ಇನ್ನೂ ಅಮಿತ್ ಶಾ ಸದನಕ್ಕೆ ಬಂದ್ರೆ ಪ್ರತಿಪಕ್ಷಗಳಿಗೆ ಅರಗಿಸಿಕೊಳ್ಳಲಾಗಲ್ಲ ಎಂಬ ರಿಜಿಜು ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್, ಇದೊಂದು ತಮಾಷೆ ಎಂದು ವ್ಯಂಗ್ಯವಾಡಿದ್ದು, ಪರೀಕ್ಷಾ ಮಸೂದೆಯ ಬಗ್ಗೆ ಚರ್ಚೆ ನಡೆದಿತ್ತು. ಆ ವೇಳೆ ಅಮಿತ್ ಶಾ ಬಂದು ಮಾತನಾಡಬಹುದಿತ್ತು ಎಂದು ಹೇಳಿದ್ದಾರೆ (ಏಜೆನ್ಸೀಸ್).