ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು
ನವದೆಹಲಿ: ಶುಕ್ರವಾರವೂ ಲೋಕಸಭೆಯಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯಕ್ಕೆ ಸಂಬಂಧಿಸಿದಂತೆ ಬಿಕ್ಕಟ್ಟು ಮುಂದುವರೆದಿದ್ದು, ಕೇಂದ್ರ ಶಿಕ್ಷಣ ಸಚಿವ ಪ್ರಧಾನ್ ರಾಜೀನಾಮೆಗೆ ವಿಪಕ್ಷಗಳು ಪಟ್ಟುಹಿಡಿದಿದ್ದು, ನೀಟ್ ಚರ್ಚೆಯಿಂದ ಹಿಂದೆ ಸರಿದ್ರೆ ತಪ್ಪು ಸಂದೇಶ ರವಾನೆಯಾಗುತ್ತದೆ, ಚರ್ಚೆಗೆ ಅವಕಾಶ ನೀಡುವಂತೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು(Kiren Rijiju) ಒತ್ತಾಯಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಕಿರಣ್ ರಿಜಿಜು, ಚರ್ಚೆಗೆ ಅವಕಾಶ ಮಾಡಿಕೊಡಲು ಸರ್ಕಾರವು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳನ್ನು ಪದೇ-ಪದೇ ಸಂಪರ್ಕಿಸಿದೆ. ನೀಟ್ ಕುರಿತು ಚರ್ಚೆ ನಡೆಸದಿರುವುದು ದೇಶಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಪೂರ್ವಭಾವಿ ಷರತ್ತುಗಳನ್ನು ವಿಧಿಸದೇ ಚರ್ಚೆಗೆ ಅವಕಾಶ ಮಾಡಿಕೊಡುವಂತೆ ವಿರೋಧ ಪಕ್ಷಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಗಟ್ಟಲು ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಉಲ್ಲೇಖಿಸಿದ ಅವರು, ಅಂತಹ ಪ್ರಕರಣಗಳನ್ನು ನಿಭಾಯಿಸಲು ಕಾನೂನು ಜಾರಿಗೆ ತರಲಾಗುವುದು. ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಿ ದೇಶಕ್ಕೆ ಭರವಸೆ ನೀಡಿದ್ದಾರೆ. ಸೋನಮ್ ವಾಂಗ್ಚುಕ್ ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ. ಸದನದಲ್ಲಿ ಈ ಬಗ್ಗೆ ಚರ್ಚೆಯನ್ನು ಆರಂಭಿಸೋಣ ಎಂದಿದ್ದಾರೆ.
ಆದರೆ, ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಬಿಗಿಪಟ್ಟು ಹಿಡಿದಿದ್ದು, ಪ್ರತಿಭಟನೆಯನ್ನು ಮುಂದುವರೆಸಿವೆ. ಪ್ರತಿಭಟನೆಗಳ ನಡುವೆ, ಸ್ಪೀಕರ್ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದ್ದಾರೆ. ಕಳೆದ ಐದು ದಿನಗಳಿಂದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯವಾಗಿ ಲೋಕಸಭೆಯಲ್ಲಿ ಪದೇ-ಪದೇ ಗದ್ದಲ ಉಂಟಾಗಿದ್ದು, ಯಾವುದೇ ಪ್ರಮುಖ ವಿಷಯಗಳು ಚರ್ಚೆಯಾಗಿಲ್ಲ (ಏಜೆನ್ಸೀಸ್).