Amit Shah | ರಾಹುಲ್ ಜಾತಕ ಬಿಚ್ಚಿಟ್ಟ ಅಮಿತ್​ ಷಾ...ಕ್ಷಮೆಯಾಚನೆಗೆ ಒತ್ತಾಯಿಸಿ ವಿಪಕ್ಷಗಳ ಹೈಡ್ರಾಮಾ!  
ದೇಶ

ಲೋಕಸಭೆಯಲ್ಲಿ ರಾಹುಲ್ ಜಾತಕ ಬಿಚ್ಚಿಟ್ಟ ಅಮಿತ್​ ಷಾ...ಕ್ಷಮೆಯಾಚನೆಗೆ ಒತ್ತಾಯಿಸಿ ವಿಪಕ್ಷಗಳ ಹೈಡ್ರಾಮಾ! | Amit Shah

ನವದೆಹಲಿ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಪದಚ್ಯುತಿಗೆ ವಿರೋಧ ಪಕ್ಷಗಳು ಮಂಡಿಸಿರುವ ನಿರ್ಣಯದ ಮೇಲೆ ಬುಧವಾರ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah), ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಸಂಸದೀಯ ಇತಿಹಾಸದ ಹಾಜರಾತಿ ಅಂಕಿ-ಅಂಶಗಳನ್ನು ಪ್ರಸ್ತಾಪಿಸುವ ಮೂಲಕ ಪ್ರತಿಪಕ್ಷಗಳನ್ನು ತಿವಿದರು.
ಅಮಿತ್​ ಷಾ ಮಾತುಗಳಿಂದ ಕುಪಿತಗೊಂಡ ವಿರೋಧ ಪಕ್ಷದ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ರಾಹುಲ್ ಗಾಂಧಿ ಹಾಜರಾತಿ ಬಗ್ಗೆ ಅಮಿತ್​ ಷಾ ಹೇಳಿದ್ದೇನು..?

ಸ್ಪೀಕರ್ ವಿರೋಧ ಪಕ್ಷಗಳಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಯಾಗಿ ಮಾತನಾಡಿದ ಅಮಿತ್ ಷಾ, ಸದನದಲ್ಲಿ ಹಾಜರಿದ್ದವರಿಗೆ ಮಾತ್ರ ಮಾತನಾಡಲು ಸಾಧ್ಯ ಎಂದು ಚುಚ್ಚಿದರು. 15ನೇ ಲೋಕಸಭೆಯಿಂದ 17ನೇ ಲೋಕಸಭೆಯವರೆಗೆ ರಾಹುಲ್​​ರ ಹಾಜರಾತಿ ವಿವರಗಳನ್ನು ಅವರು ಓದಿ ಹೇಳುತ್ತಿದ್ದಂತೆ ಸದನದಲ್ಲಿ ಗದ್ದಲ ಆರಂಭವಾಯಿತು.

ಅಮಿತ್ ಷಾ ನೀಡಿದ ಅಂಕಿ-ಅಂಶಗಳು ಹೀಗಿವೆ

17ನೇ ಲೋಕಸಭೆ: ರಾಹುಲ್ ಗಾಂಧಿ ಹಾಜರಾತಿ 51% (ಸದನದ ಸರಾಸರಿ 66%).
16ನೇ ಲೋಕಸಭೆ: ರಾಹುಲ್ ಗಾಂಧಿ ಹಾಜರಾತಿ 52% (ಸದನದ ಸರಾಸರಿ 80%).
15ನೇ ಲೋಕಸಭೆ: ರಾಹುಲ್ ಗಾಂಧಿ ಹಾಜರಾತಿ ಕೇವಲ 43% (ಸದನದ ಸರಾಸರಿ 76%).
ರಾಷ್ಟ್ರಪತಿಗಳ ಭಾಷಣ, ಬಜೆಟ್ ಚರ್ಚೆ ಅಥವಾ 370ನೇ ವಿಧಿ ರದ್ದತಿಯಂತಹ ಪ್ರಮುಖ ಸಂದರ್ಭಗಳಲ್ಲಿ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿರುತ್ತಾರೆ. ಸಂಸತ್ತಿಗೆ ಬಾರದೆ, ಚರ್ಚೆಯಲ್ಲಿ ಭಾಗವಹಿಸದೆ ಈಗ ಬಂದು ನಮಗೆ ಮಾತನಾಡಲು ಬಿಡುತ್ತಿಲ್ಲ ಎನ್ನುವುದು ಎಷ್ಟರ ಮಟ್ಟಿಗೆ ಸರಿ? ಎಂದು ಷಾ ಪ್ರಶ್ನಿಸಿದರು.

ಅಮಿತ್ ಷಾ ಮಾಫಿ ಮಾಂಗೋ ಘೋಷಣೆಗಳ ಅಬ್ಬರ

ಗೃಹ ಸಚಿವ ಅಮಿತ್​ ಷಾ ರಾಹುಲ್ ಗಾಂಧಿ ಹಾಜರಾತಿಯ ಅಂಕಿ-ಅಂಶಗಳನ್ನು ಪ್ರಸ್ತಾಪಿಸುತ್ತಿದ್ದಂತೆ ಕಾಂಗ್ರೆಸ್, ಡಿಎಂಕೆ ಮತ್ತು ಸಮಾಜವಾದಿ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಎಲ್ಲಾ ಸಂಸದರು ಒಕ್ಕೊರಲಿನಿಂದ ಅಮಿತ್ ಷಾ ಮಾಫಿ ಮಾಂಗೋ (ಅಮಿತ್ ಷಾ ಕ್ಷಮೆಯಾಚಿಸಲಿ) ಎಂದು ಘೋಷಣೆಗಳನ್ನು ಕೂಗತೊಡಗಿದರು.
ಪ್ರತಿಭಟನೆಯ ತೀವ್ರತೆ ಹೆಚ್ಚಾದಾಗ ವಿಪಕ್ಷಗಳ ಹರಿಹಾಯ್ದ ಅಮಿತ್ ಷಾ, ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ನೀವು ಈಗ ಅಬ್ಬರಿಸಿದರೂ ನನ್ನ ಮಾತುಗಳನ್ನು ಕೇಳಲೇಬೇಕಾಗುತ್ತದೆ. ನೀವು ಕೇಳದಿದ್ದರೆ ಈ ದೇಶದ ಜನರು ನಿಮ್ಮನ್ನು ಕೇಳಿಸಿಕೊಳ್ಳುತ್ತಿದ್ದಾರೆ ಎಂದು ಕೋಪದಿಂದಲೇ ಉತ್ತರಿಸಿದರು.
ಕಾಂಗ್ರೆಸ್​ ಸಂಸದ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಲವಾರು ಸದಸ್ಯರು ಇದು ಸ್ಪೀಕರ್ ಮೇಲಿನ ಚರ್ಚೆಯೋ ಅಥವಾ ರಾಹುಲ್ ಗಾಂಧಿ ಮೇಲಿನ ಚರ್ಚೆಯೋ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಷಾ, ಸ್ಪೀಕರ್ ಮೇಲೆ ಆರೋಪ ಮಾಡುವ ಮೊದಲು ನಿಮ್ಮ ನಡವಳಿಕೆಯನ್ನು ಆತ್ಮಾವಲೋಕನ ಮಾಡಿಕೊಳ್ಳಿ, ಮೈಕ್ರೋಫೋನ್ ಆಫ್ ಆಗುವುದು ನೀವು ನಿಯಮ ಮೀರಿದಾಗ ಮಾತ್ರ ಎಂದು ಸಭಾಧ್ಯಕ್ಷರ ನಡೆಯನ್ನು ಸಮರ್ಥಿಸಿಕೊಂಡರು.
ಗದ್ದಲದ ನಡುವೆಯೇ ಮುಂದುವರಿದ ಈ ಚರ್ಚೆಯು ಅಂತಿಮವಾಗಿ ಧ್ವನಿ ಮತದಾನದ ಮೂಲಕ ಸ್ಪೀಕರ್ ವಿರುದ್ಧದ ನಿರ್ಣಯದ ಸೋಲಿನೊಂದಿಗೆ ಅಂತ್ಯಗೊಂಡಿತು(ಏಜೆನ್ಸೀಸ್​).