Opposition Boycott | ಸ್ಪೀಕರ್ ವಿರುದ್ಧ ಸಿಡಿದೆದ್ದು ಸರ್ವಪಕ್ಷ ಸಭೆ ಬಹಿಷ್ಕರಿಸಿದ ಇಂಡಿಯಾ ಒಕ್ಕೂಟದ ಸದಸ್ಯರು
ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನವೇ ಕೇಂದ್ರ ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವಿನ ರಾಜಕೀಯ ಸಂಘರ್ಷ ತಾರಕಕ್ಕೇರಿದ್ದು, ಭಾನುವಾರ ನಡೆದ ಸರ್ವಪಕ್ಷ ಸಭೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಶಿವಸೇನಾ (ಯುಬಿಟಿ) ಪಕ್ಷದ ಬಂಡಾಯ ಸಂಸದರನ್ನು ಆಹ್ವಾನಿಸಿದ ಲೋಕಸಭಾ ಸ್ಪೀಕರ್ ಕ್ರಮವನ್ನು ಖಂಡಿಸಿ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಸಭೆಯಿಂದ ಹೊರನಡೆದಿದೆ(Opposition Boycott).
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯೊಂದಿಗೆ, ಉದ್ಧವ್ ಬಣದ ಆರು ಬಂಡಾಯ ಸಂಸದರ ವಿಲೀನಕ್ಕೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಇತ್ತೀಚೆಗಷ್ಟೇ ಅನುಮೋದನೆ ನೀಡಿದ್ದರು. ಇದರ ಬೆನ್ನಲ್ಲೇ, ಟಿಎಂಸಿ ತೊರೆದು ಅಷ್ಟಾಗಿ ಪರಿಚಯವಿಲ್ಲದ ಎನ್‌ಸಿಪಿಐ ಪಕ್ಷ ಸೇರಿರುವ 20 ಬಂಡಾಯ ಸಂಸದರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಬಂಡಾಯ ನಾಯಕರನ್ನು ಸರ್ವಪಕ್ಷ ಸಭೆಗೆ ಆಹ್ವಾನಿಸಿದ್ದೇ ಈಗ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬಂಡಾಯ ಸಂಸದರ ಆಹ್ವಾನಕ್ಕೆ ಆಕ್ಷೇಪ
ವಿರೋಧ ಪಕ್ಷಗಳ ಜಂಟಿ ನಿರ್ಧಾರದ ಬಗ್ಗೆ ಮಾತನಾಡಿದ ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ, ಟಿಎಂಸಿ ಮತ್ತು ಶಿವಸೇನಾ (ಯುಬಿಟಿ) ಪಕ್ಷದ ಬಂಡಾಯ ಸಂಸದರ ಕುರಿತು ಸ್ಪೀಕರ್ ತೆಗೆದುಕೊಂಡಿರುವ ಏಕಪಕ್ಷೀಯ ನಿರ್ಧಾರವನ್ನು ಪ್ರತಿಭಟಿಸಲು ವಿರೋಧ ಪಕ್ಷಗಳು ಒಟ್ಟಾಗಿ ಈ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದವು ಎಂದು ಮಾಹಿತಿ ನೀಡಿದ್ದಾರೆ.
ಸಂವಿಧಾನದ 91ನೇ ತಿದ್ದುಪಡಿ ಉಲ್ಲೇಖಿಸಿದ ಮೊಯಿತ್ರಾ
ಈ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಕಾಂಗ್ರೆಸ್, ಸಮಾಜವಾದಿ ಪಕ್ಷ, ಡಿಎಂಕೆ, ಜೆಎಂಎಂ, ಆಮ್ ಆದ್ಮಿ ಪಕ್ಷ, ನ್ಯಾಷನಲ್ ಕಾನ್ಫರೆನ್ಸ್, ಎಡಪಕ್ಷಗಳು ಮತ್ತು ಶಿವಸೇನಾ ಯುಬಿಟಿ ಸೇರಿದಂತೆ ಇಡೀ ವಿರೋಧ ಪಕ್ಷ ಒಟ್ಟಾಗಿ ಸಭೆಯಿಂದ ಹೊರನಡೆದಿದೆ. ಅಧಿಕೃತ ದಾಖಲೆಗಳ ಪ್ರಕಾರ ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ಒಟ್ಟು ಬಲ 28 ಸದಸ್ಯರು. ಇನ್ನು ಮಾನ್ಯತೆ ಪಡೆಯದ ಎನ್‌ಸಿಪಿಐ ಪಕ್ಷ ಸೇರಿರುವ 20 ಬಂಡಾಯ ಸಂಸದರ ವಿಲೀನಕ್ಕೆ ಸ್ಪೀಕರ್ ಇನ್ನೂ ಅಧಿಕೃತ ಅನುಮೋದನೆ ನೀಡಿಲ್ಲ. ಅವರ ಅನರ್ಹತೆ ಅರ್ಜಿಗಳು ಇನ್ನೂ ಬಾಕಿ ಇವೆ ಎಂದು ನೆನಪಿಸಿದರು.
ಮುಂದುವರಿದು ಮಾತನಾಡಿದ ಮೊಯಿತ್ರಾ, ಸಂವಿಧಾನದ 91ನೇ ತಿದ್ದುಪಡಿಯ ನಂತರ ಸದನದಲ್ಲಿ ಇಂತಹ ಬಂಡಾಯಗಾರರಿಗೆ ಪ್ರತ್ಯೇಕ ಬಣ ರಚಿಸಲು ಯಾವುದೇ ಅವಕಾಶವಿಲ್ಲ. ಹೀಗಿರುವಾಗ ಯಾವ ಆಧಾರದ ಮೇಲೆ ಸಂಸದೀಯ ವ್ಯವಹಾರಗಳ ಸಚಿವರು ಈ 20 ಬಂಡಾಯ ಸಂಸದರಿಗೆ ಆಹ್ವಾನ ನೀಡಿದ್ದಾರೆ..? ಅವರು ಈ ಸಭೆಯಲ್ಲಿ ಹೇಗೆ ಭಾಗವಹಿಸುತ್ತಿದ್ದಾರೆ..? ಪ್ರತಿಭಟನೆಯನ್ನು ನಡೆಸಿ ನಾವೆಲ್ಲಾ ಹೊರನಡೆದಿದ್ದು, ನಮಗೆ ಬೆಂಬಲ ನೀಡಿದ ಎಲ್ಲಾ ವಿರೋಧ ಪಕ್ಷಗಳಿಗೆ ಧನ್ಯವಾದಗಳು ಎಂದರು.
ಕೆಲ ಸಮಯದ ನಂತರ ಪುನಃ ಸಭೆಗೆ ತೆರಳಿದ ಸದಸ್ಯರು ಕಲಾಪದ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ತಮ್ಮ ತೀವ್ರ ಆಕ್ಷೇಪ ಹಾಗೂ ಸಾಂಕೇತಿಕ ಪ್ರತಿಭಟನೆಯನ್ನು ದಾಖಲಿಸಿದ ಬೆನ್ನಲ್ಲೇ, ಮುಂಬರುವ ಅಧಿವೇಶನದ ಕಾರ್ಯಸೂಚಿ ಹಾಗೂ ಜನರ ಸಮಸ್ಯೆಗಳ ಚರ್ಚೆಯಲ್ಲಿ ಭಾಗಿಯಾಗಲು ವಿಪಕ್ಷಗಳು ಸಭೆಗೆ ಮರಳಿವೆ ಎಂದು ಮೂಲಗಳು ತಿಳಿಸಿವೆ(ಏಜೆನ್ಸೀಸ್).