ಮುಂಬೈ: ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಮೊದಲ ದಿನವೇ ಭಾರತ ಸಂಪೂರ್ಣವಾಗಿ ಸೋತಿತು ಎಂಬ ತಮ್ಮ ಹೇಳಿಕೆಗೆ ಕ್ಷಮೆ ಕೇಳಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಹಾರಾಷ್ಟ್ರ ಮಾಜಿ ಸಿಎಂ ಪೃಥ್ವಿರಾಜ್ ಚವ್ಹಾಣ್ ನಿರಾಕರಿಸಿದ್ದಾರೆ.
"ನಾನು ಈಗ ಹೆಚ್ಚೇನೂ ಹೇಳಲು ಬಯಸುವುದಿಲ್ಲ. ಆದರೆ, ನಾನು ಕ್ಷಮೆಯಾಚಿಸುವುದಿಲ್ಲ. ಅದರ ಅಗತ್ಯವಿಲ್ಲ. ನಾನು ಯಾವುದೇ ತಪ್ಪು ಹೇಳಿಕೆ ನೀಡಿಲ್ಲ" ಎಂದು ಚವಾಣ್ ಹೇಳಿದರು.
ವಿವಾದದ ಕಿಡಿ ಹೊತ್ತಿಸಿದ ಚವ್ಹಾಣ್!
ಪುಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮಹಾರಾಷ್ಟ್ರ ಮಾಜಿ ಸಿಎಂ ಪೃಥ್ವಿರಾಜ್ ಚವ್ಹಾಣ್, ಆಪರೇಷನ್ ಸಿಂಧೂರನ ಮೊದಲ ದಿನ ನಾವು ಸಂಪೂರ್ಣವಾಗಿ ಸೋತಿದ್ದೇವೆ. 7ರಂದು ನಡೆದ ಅರ್ಧ ಗಂಟೆಯ ವೈಮಾನಿಕ ಕಾರ್ಯಾಚರಣೆಯಲ್ಲಿ ಜನರು ಒಪ್ಪಬಹುದು, ಒಪ್ಪದೇ ಇರಬಹುದು ನಾವು ಸಂಪೂರ್ಣವಾಗಿ ಸೋತಿದ್ದೇವೆ. ಭಾರತೀಯ ವಿಮಾನಗಳನ್ನು ಹೊಡೆದುರುಳಿಸಲಾಯಿತು. ಒಂದೇ ಒಂದು ವಿಮಾನವೂ ಹಾರಲಿಲ್ಲ. ಗ್ವಾಲಿಯರ್, ಬಟಿಂಡಾ ಅಥವಾ ಸಿರ್ಸಾದಿಂದ ಯಾವುದೇ ವಿಮಾನ ಹೊರಟಿದ್ದರೆ, ಪಾಕಿಸ್ತಾನವು ಹೊಡೆದುರುಳಿಸುವ ಹೆಚ್ಚಿನ ಸಂಭವನೀಯತೆ ಇತ್ತು ಅದಕ್ಕಾಗಿಯೇ ವಾಯುಪಡೆಯನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಯಿತು ಎಂದು ಹೇಳಿದ್ದಾರೆ. ಇದೀಗ ಈ ಹೇಳಿಕೆ ರಾಜಕೀಯ ವಿವಾದದ ಕಿಡಿಯನ್ನು ಹೊತ್ತಿಸಿದೆ.
ಬಿಜೆಪಿ ಕಿಡಿ
ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ, ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಕ್ಷದ ಸಹೋದ್ಯೋಗಿಗಳು ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮ "ಮನಸ್ಥಿತಿ"ಯನ್ನು ಬಹಿರಂಗಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
"ಸೇನೆಯನ್ನು ಅವಮಾನಿಸುವುದು ಕಾಂಗ್ರೆಸ್‌ನ ವಿಶಿಷ್ಟ ಲಕ್ಷಣವಾಗಿದೆ. ಇದು ಕೇವಲ ಚವಾಣ್ ಅವರ ಹೇಳಿಕೆಯಲ್ಲ. ರಾಹುಲ್ ಗಾಂಧಿ ಕೂಡ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ಇದೆಲ್ಲವೂ ಗಾಂಧಿಯವರ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ, ಅದಕ್ಕಾಗಿಯೇ ಕಾಂಗ್ರೆಸ್ ಅಥವಾ ಅವರು ಅಂತಹ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ. ಈ ಹೇಳಿಕೆಗಳು ಅವರ ಸೇನಾ ವಿರೋಧಿ ಮನಸ್ಥಿತಿಯನ್ನು ಬಹಿರಂಗಪಡಿಸುತ್ತವೆ." ಎಂದು ಕಿಡಿ ಕಾರಿದ್ದಾರೆ,(ಏಜೆನ್ಸೀಸ್).