Operation Sindoor | ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ
ಮುಂಬೈ: ಆಪರೇಷನ್ ಸಿಂಧೂರ ಇನ್ನೂ ಮುಂದುವರೆದಿದ್ದು, ಕಾರ್ಯಾಚರಣೆಯ ಕುರಿತಾದ ವಿವರಗಳ ಕುರಿತು ಚರ್ಚೆಗಳನ್ನು ತಪ್ಪಿಸುವುದು ಉತ್ತಮ ಎಂದು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಅಭಿಪ್ರಾಯಟ್ಟಿದ್ದಾರೆ.
ಪುಣೆಯಲ್ಲಿ ನಡೆದ ಅಡ್ಮಿರಲ್ ಜೆ.ಜಿ. ನಾಡಕರ್ಣಿ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ ಅಡ್ಮಿರಲ್ ತ್ರಿಪಾಠಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ತ್ವರಿತ ನಿಯೋಜನೆ, ಕ್ಷಿಪ್ರ ಶಸ್ತ್ರಾಸ್ತ್ರ ಗುಂಡಿನ ದಾಳಿಯಿಂದ ಗುರುತಿಸಲ್ಪಟ್ಟ ಭಾರತೀಯ ನೌಕಾಪಡೆಯ ನಿರಂತರ ಸನ್ನದ್ಧತೆಯನ್ನು ಆಪರೇಷನ್ ಸಿಂಧೂರ ಪ್ರದರ್ಶಿಸಿತು ಎಂದು ಹೇಳಿದರು.
ಇಂದು ಘರ್ಷಣೆಗಳು ಯಾವುದೇ ಮುನ್ಸೂಚನೆಯಿಲ್ಲದೆ ನಡೆಯುತ್ತಿವೆ, ಇದರಿಂದಾಗಿ ದಿನದ 24 ಗಂಟೆಗಳೂ ಸಿದ್ಧತೆ ಅಗತ್ಯ ಎಂದಿರುವ ಅಡ್ಮಿರಲ್ ತ್ರಿಪಾಠಿ, ಭಾರತೀಯ ನೌಕಾಪಡೆಯು ಯುದ್ಧ ಸನ್ನದ್ಧತೆಗೆ ಹೆಸರುವಾಸಿಯಾಗಿದೆ, ಇದು ನಮ್ಮ ನಿಲುವು ಮತ್ತು ನಿರಂತರ ಸನ್ನದ್ಧತೆಯ ಮಾದರಿಯನ್ನು ತಿಳಿಸುತ್ತದೆ. ಈ ವಿಷಯದಲ್ಲಿ ಆಪರೇಷನ್ ಸಿಂಧೂರ ಒಂದು ಶ್ರೇಷ್ಠ ಉದಾಹರಣೆಯಾಗಿದೆ ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಜಾಗತಿಕ ಸಮುದ್ರಗಳು ಪ್ರಕ್ಷುಬ್ಧವಾಗಿರುವಾಗ ಜಗತ್ತು ಸ್ಥಿರ ದೀಪಸ್ತಂಭವನ್ನು ಹುಡುಕುತ್ತದೆ ಎಂದಿರುವ ತ್ರಿಪಾಠಿ, ಭಾರತವು ಜವಾಬ್ದಾರಿಯುತ ರಾಷ್ಟ್ರವಾಗಿರುವುದರಿಂದ ವಿಶ್ವ ವೇದಿಕೆಯಲ್ಲಿ ಆ ಪಾತ್ರವನ್ನು ವಹಿಸಬಹುದು ಎಂದು ಹೇಳಿದ್ದಾರೆ.
ಪ್ರಾದೇಶಿಕ ಚಲನಶೀಲತೆಯ ಕುರಿತು ಮಾತನಾಡಿದ ನೌಕಾಪಡೆಯ ಮುಖ್ಯಸ್ಥರು, ಬಾಂಗ್ಲಾದೇಶವನ್ನು ಸ್ನೇಹಿತ ಎಂದು ಹೊರತುಪಡಿಸಿ ಬೇರೆ ಯಾವುದನ್ನೂ ಕರೆಯುವುದಿಲ್ಲ ಎಂದಿದ್ದು, ಈಗಿನ ಉದ್ವಿಗ್ನತೆಯನ್ನು ತಾತ್ಕಾಲಿಕ ಎಂದಿರುವ ತ್ರಿಪಾಠಿ, ಕೆಲವೇ ವರ್ಷಗಳ ಬಳಿಕ ದ್ವಿಪಕ್ಷೀಯ ಸಂಬಂಧಗಳು ಉತ್ತಮವಾಗಬಹುದು ಎಂಬ ಆಶಾವಾದ ವ್ಯಕ್ತಪಡಿಸಿದ್ದಾರೆ. ಹೊಸ ತಂತ್ರಜ್ಞಾನಗಳು ಮತ್ತು ನೀರಿನೊಳಗಿನ ಡ್ರೋನ್‌ಗಳು ವೇಗವಾಗಿ ಹೊರಹೊಮ್ಮುತ್ತಿರುವುದರಿಂದ, ಜಾಗತಿಕ ಶಕ್ತಿಗಳಿಗೂ ನೀರೊಳಗಿನ ಕಾರ್ಯಾಚರಣೆ ಸಂಕೀರ್ಣವಾಗಿದೆ ಎಂದು ಹೇಳಿದರು.
ಈ ವರ್ಷದ ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನ ಅಮಾಯಕರು ಸಾವನ್ನಪ್ಪಿದ್ದರು, ಅದರಲ್ಲಿ ಹೆಚ್ಚಿನವರು ಪ್ರವಾಸಿಗರು. ಇದಕ್ಕೆ ಪ್ರತಿಯಾಗಿ ಮೇ 10 ರಂದು, ಎರಡೂ ರಾಷ್ಟ್ರಗಳು ಡ್ರೋನ್‌ಗಳನ್ನು ಬಳಸಿದ ನಾಲ್ಕು ದಿನಗಳ ಸಂಘರ್ಷದ ಬಳಿಕ, ಭಾರತ ಮತ್ತು ಪಾಕಿಸ್ತಾನವು ಕದನ ವಿರಾಮ ಘೋಷಿಸಿದವು. ಪಾಕಿಸ್ತಾನವು ಯಾವುದೇ ದುಸ್ಸಾಹಸಕ್ಕೆ ಪ್ರಯತ್ನಿಸಿದರೆ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಪುನರಾರಂಭಿಸಬಹುದು ಎಂದು ಭಾರತ ಅನೇಕ ಬಾರಿ ಎಚ್ಚರಿಸಿದೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಇದೇ ರೀತಿಯ ಹೇಳಿಕೆ ಮೂಲಕ ಪಾಕ್ಗೆ ಎಚ್ಚರಿಕೆ ನೀಡಿದ ಬಳಿಕ ಅಡ್ಮಿರಲ್ ತ್ರಿಪಾಠಿಯವರ ಈ ಹೇಳಿಕೆಗಳು ಹೊರ ಬಿದ್ದಿವೆ(ಏಜೆನ್ಸೀಸ್).