Shashi Tharoor | ಕಾಂಗ್ರೆಸ್ ಸಂಸದ ತರೂರ್
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಭಾರತ ಮತ್ತು ಪಾಕಿಸ್ತಾನ ಅನುಸರಿಸುತ್ತಿರುವ ವಿದೇಶಾಂಗ ನೀತಿಗಳ ನಡುವಿನ ವ್ಯತ್ಯಾಸವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಎತ್ತಿ ತೋರಿಸಿದ್ದು, ಪಾಕ್ ರಾಜತಾಂತ್ರಿಕತೆಯನ್ನು ಕಟುವಾಗಿ ಟೀಕಿಸಿರುವ ಅವರು, ಭಾರತದ ಜವಾಬ್ದಾರಿಯುತ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಒಂದರ ಎಡಿಟ್ ಹಿಸ್ಟರಿಯಲ್ಲಿ ಡ್ರಾಫ್ಟ್ ಪಾಕಿಸ್ತಾನ ಪ್ರಧಾನಿ ಸಂದೇಶ ಎಂಬ ಶೀರ್ಷಿಕೆ ಕಂಡುಬಂದಿದ್ದನ್ನು ತರೂರ್ ಉಲ್ಲೇಖಿಸಿದ್ದು, ವಾಷಿಂಗ್ಟನ್ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಎಂತಹುದು ಎಂಬುದು ಇದರಿಂದಲೇ ತಿಳಿಯುತ್ತದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಪೋಸ್ಟ್ ಅನ್ನು ಹೋಲುವ ಆ ಟ್ವೀಟ್ ಅನ್ನು ವಾಷಿಂಗ್ಟನ್ ಕಚೇರಿಯೇ ಪಾಕ್ ಪ್ರಧಾನಿಗಾಗಿ ಬರೆದುಕೊಟ್ಟಿದೆ ಎಂಬ ಆರೋಪಗಳಿವೆ ಎಂದು ತರೂರ್ ವ್ಯಂಗ್ಯವಾಡಿದರು.
ಭಾರತ vs ಪಾಕಿಸ್ತಾನ; ವಿಭಿನ್ನ ಹಿತಾಸಕ್ತಿ
ಅಮೆರಿಕ ಮತ್ತು ಇರಾನ್ ನಡುವಿನ ಮಧ್ಯಸ್ಥಿಕೆಯಲ್ಲಿ ಪಾಕಿಸ್ತಾನ ವಹಿಸುತ್ತಿರುವ ಪಾತ್ರದ ಕುರಿತು ಮಾತನಾಡಿದ ತರೂರ್, ಪಾಕಿಸ್ತಾನ ಇರಾನ್‌ನೊಂದಿಗೆ 900 ಕಿ.ಮೀ ಗಡಿ ಹಂಚಿಕೊಂಡಿದೆ. ಅಲ್ಲಿ ದೊಡ್ಡ ಮಟ್ಟದ ಶಿಯಾ ಜನಸಂಖ್ಯೆ ಇದೆ. ಯುದ್ಧ ತೀವ್ರಗೊಂಡರೆ ನಿರಾಶ್ರಿತರ ಮೊದಲ ಅಲೆಯನ್ನು ಎದುರಿಸುವ ಅನಿವಾರ್ಯತೆ ಪಾಕಿಸ್ತಾನಕ್ಕಿದೆ. ಹಾಗಾಗಿ ಅವರ ಪಣ ಮತ್ತು ಭಾರತದ ಹಿತಾಸಕ್ತಿಗಳು ಸಂಪೂರ್ಣ ಭಿನ್ನವಾಗಿವೆ. ಈ ವಿಷಯದಲ್ಲಿ ಪಾಕಿಸ್ತಾನ ಮತ್ತು ಭಾರತಕ್ಕೆ ಯಾವುದೇ ಸ್ಪರ್ಧೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಮಧ್ಯಪ್ರಾಚ್ಯದ ಯುದ್ಧವು ಭಾರತದ ಇಂಧನ ಪೂರೈಕೆ ಮತ್ತು ಗಲ್ಫ್ ರಾಷ್ಟ್ರಗಳಲ್ಲಿರುವ ಒಂದು ಕೋಟಿಗೂ ಹೆಚ್ಚು ಭಾರತೀಯರ ಮೇಲೆ ನೇರ ಪರಿಣಾಮ ಬೀರಲಿದೆ. ನಮಗೆ ಶಾಂತಿ ಬೇಕು. ಆದರೆ ಅದನ್ನು ಹೇಗೆ ಸಾಧಿಸಬೇಕು ಎಂಬುದು ಮುಖ್ಯ. ಕೆಲವೊಮ್ಮೆ ಮೌನವಾಗಿರುವುದು ಕೂಡ ರಾಜತಾಂತ್ರಿಕವಾಗಿ ಉಪಯುಕ್ತ ಕೊಡುಗೆಯಾಗಬಲ್ಲದು. ಭಾರತವು ಯಾವ ರೀತಿಯ ಪಾತ್ರ ವಹಿಸಬೇಕು ಎಂಬುದನ್ನು ತಾನೇ ನಿರ್ಧರಿಸಬೇಕು ಎಂದು ತರೂರ್ ಹೇಳಿದರು.
ಪಾಕಿಸ್ತಾನದ ಮಧ್ಯಸ್ಥಿಕೆಯ ಪಾತ್ರವನ್ನು ಭಾರತದ ವಿದೇಶಾಂಗ ನೀತಿಯ ಹಿನ್ನಡೆ ಎಂದು ಕರೆದಿದ್ದ ತನ್ನದೇ ಪಕ್ಷದ ಟೀಕೆಯನ್ನು ತಳ್ಳಿಹಾಕಿದ ತರೂರ್, ಭಾರತವು ಪ್ರಾದೇಶಿಕ ಕ್ರಮದಲ್ಲಿ ಒಬ್ಬ ಜವಾಬ್ದಾರಿಯುತ ಪಾಲುದಾರ ಎಂದು ಕರೆಯುತ್ತಾ, ಸಂಪೂರ್ಣ ನಿಷ್ಕ್ರಿಯತೆಯು ಕೂಡ ಅಪಾಯಕಾರಿಯಾಗಬಹುದು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಪ್ರಸ್ತುತ ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ನಿಯೋಗಗಳು ಮಾತುಕತೆ ನಡೆಸುತ್ತಿದ್ದರೂ, ಯುದ್ಧ ಅಂತ್ಯಗೊಳಿಸುವ ಕುರಿತು ಇನ್ನೂ ಯಾವುದೇ ಅಂತಿಮ ಚೌಕಟ್ಟು ಸಿದ್ಧವಾಗಿಲ್ಲ(ಏಜೆನ್ಸೀಸ್).