Shatrughan Sinha | ಅಭಿಷೇಕ್ ನನ್ನ ನಾಯಕನೇ ಅಲ್ಲ ಎಂದ ಸಂಸದ ಶತ್ರುಘ್ನ ಸಿನ್ಹಾ 
ದೇಶ

ಅಭಿಷೇಕ್ ನನ್ನ ನಾಯಕನೇ ಅಲ್ಲ!...ಟಿಎಂಸಿ ಆಂತರಿಕ ಸಂಘರ್ಷದ ಬೆನ್ನಲ್ಲೇ ಶತ್ರುಘ್ನ ಸಿನ್ಹಾ ಹೊಸ ಬಾಂಬ್ | Shatrughan Sinha

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದೊಳಗಿನ ಆಂತರಿಕ ಭಿನ್ನಮತ ಈಗ ಹೊಸ ತಿರುವು ಪಡೆದುಕೊಂಡಿದ್ದು, ಪಕ್ಷದ ಹಿರಿಯ ಸಂಸದ ಶತ್ರುಘ್ನ ಸಿನ್ಹಾ(Shatrughan Sinha ) ಅವರು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲಿನ ತಮ್ಮ ನಿಷ್ಠೆಯನ್ನು ಪುನರುಚ್ಚರಿಸಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹೆಚ್ಚುತ್ತಿರುವ ಪ್ರಭಾವದ ವಿರುದ್ಧ ಟಿಎಂಸಿಯ ಹಲವು ಸಂಸದರು ಮತ್ತು ಮುಖಂಡರು ಬಂಡಾಯದ ಬಾವುಟ ಹಾರಿಸುತ್ತಿರುವ ಬೆನ್ನಲ್ಲೇ, ಶತ್ರುಘ್ನ ಸಿನ್ಹಾ ತಮ್ಮ ರಾಜಕೀಯ ನಿಷ್ಠೆ ಕೇವಲ ಮಮತಾ ಬ್ಯಾನರ್ಜಿ ಅವರಿಗೆ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ನಾಯಕಿ ಒಬ್ಬರೇ, ಅವರು ಮಮತಾ ಬ್ಯಾನರ್ಜಿ; ಅಭಿಷೇಕ್ ಬ್ಯಾನರ್ಜಿ ಅಲ್ಲ ಎಂದು ನೇರವಾಗಿ ಹೇಳಿದ್ದಾರೆ.

ಮಮತಾ ಬೆನ್ನಿಗೆ ನಿಂತ ಶತ್ರುಘ್ನ ಸಿನ್ಹಾ

ಪಕ್ಷದ ಕಾರ್ಯವೈಖರಿ ಬಗ್ಗೆ ಅಸಮಾಧಾನವಿದ್ದ ನಾಯಕರು, ಚುನಾವಣೆಗೆ ಮುಂಚೆಯೇ ಈ ನಿಲುವನ್ನು ಏಕೆ ತೆಗೆದುಕೊಳ್ಳಲಿಲ್ಲ? ಎಂದು ಪ್ರಶ್ನಿಸಿರುವ ಸಿನ್ಹಾ, ಮಮತಾ ಬ್ಯಾನರ್ಜಿ ಅವರು ಅತ್ಯಂತ ಅನುಭವಿ ಹಾಗೂ ಯಶಸ್ವಿ ರಾಜಕೀಯ ನಾಯಕಿಯಾಗಿದ್ದು, ವರ್ಷಗಳಿಂದ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಾ ಬಂದಿದ್ದಾರೆ. ಅವರ ರಾಜಕೀಯ ಪರಿಪಕ್ವತೆಯೇ ಈ ಹಿಂದೆಯೂ ಪಕ್ಷವನ್ನು ಹಲವು ಸವಾಲುಗಳಿಂದ ಪಾರು ಮಾಡಿದೆ ಎಂದು ಅವರು ಪ್ರಶಂಸಿಸಿದರು.

ಕಲ್ಯಾಣ್ ಬ್ಯಾನರ್ಜಿ ಪರ ಬ್ಯಾಟಿಂಗ್

ಕಲ್ಯಾಣ್ ಬ್ಯಾನರ್ಜಿ ಅವರು ದೇಶದ ಅತ್ಯುತ್ತಮ ಸಂಸದರಲ್ಲಿ ಒಬ್ಬರಾಗಿದ್ದು, ಅವರ ಬುದ್ಧಿವಂತಿಕೆ ಮತ್ತು ರಾಜಕೀಯ ಚಾಣಾಕ್ಷತನ ಸಂಸದೀಯ ಚರ್ಚೆಗಳಲ್ಲಿ ಪಕ್ಷಕ್ಕೆ ದೊಡ್ಡ ಬಲ ತಂದಿದೆ ಎಂದರು. ಅಲ್ಲದೆ, ಕಲ್ಯಾಣ್ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ನಡುವಿನ ಭಿನ್ನಾಭಿಪ್ರಾಯಗಳು ಕೇವಲ ಪಕ್ಷದ ಶಿಷ್ಟಾಚಾರ ಮತ್ತು ಸಾಂಸ್ಥಿಕ ಶಿಸ್ತಿಗೆ ಸಂಬಂಧಿಸಿದ್ದವಷ್ಟೇ ಹೊರತು, ಇದರಲ್ಲಿ ಯಾವುದೇ ಸದ್ಧಾಂತಿಕ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಿನ್ಹಾ ಅಭಿಪ್ರಾಯಪಟ್ಟರು. ಕಲ್ಯಾಣ್ ಬ್ಯಾನರ್ಜಿ ಅವರು ಕೆಲವು ಬೆಳವಣಿಗೆಗಳನ್ನು ಟೀಕಿಸಿದ್ದರೂ, ತಾವು ಯಾವಾಗಲೂ ಮಮತಾ ಬ್ಯಾನರ್ಜಿ ಅವರೊಂದಿಗೇ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂಬುದನ್ನು ಸಿನ್ಹಾ ಉಲ್ಲೇಖಿಸಿದರು.

ವಿವಾದ ಸೃಷ್ಟಿಸಿದ ಕಲ್ಯಾಣ್ ಬ್ಯಾನರ್ಜಿ ಸಂದೇಶ

ಮಮತಾ ಬ್ಯಾನರ್ಜಿ ಪರಮಾಪ್ತರಲ್ಲಿ ಒಬ್ಬರಾಗಿರುವ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಗುರುವಾರ ಪಕ್ಷದ ನಾಯಕತ್ವಕ್ಕೆ ನೀಡಿದ ಖಡಕ್ ಸಂದೇಶದ ಬಳಿಕ ಈ ವಿವಾದ ಮತ್ತಷ್ಟು ತಾರಕಕ್ಕೇರಿದೆ. ಮಮತಾ ಬ್ಯಾನರ್ಜಿ ಅವರು ತಮ್ಮ ಸೋದರಸಂಬಂಧಿ ಅಭಿಷೇಕ್ ಬ್ಯಾನರ್ಜಿ ಅವರ ಪರ ನಿಲ್ಲುತ್ತಾರೋ ಅಥವಾ ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಹಿರಿಯ ಕಾರ್ಯಕರ್ತರ ಪರ ನಿಲ್ಲುತ್ತಾರೋ ಎಂಬುದನ್ನು ಅವರೇ ನಿರ್ಧರಿಸಬೇಕು ಎಂದು ಕಲ್ಯಾಣ್ ಹೇಳಿದ್ದರು. ನಾನು ಮಮತಾ ಬ್ಯಾನರ್ಜಿ ಅವರ ಜೊತೆಗಿದ್ದೇನೆ. ಆದರೆ ದೀದಿಯೇ ಮೊದಲು ನಿರ್ಧಾರ ಮಾಡಬೇಕು. ಅಭಿಷೇಕ್ ಇಲ್ಲದೆ ಅವರಿಗೆ ಪಕ್ಷ ನಡೆಸಲು ಸಾಧ್ಯವಿಲ್ಲ ಎಂದಾದರೆ, ನಾನು ಈ ಪಕ್ಷದಲ್ಲಿ ಇರುವುದಿಲ್ಲ ಎಂದು ಕಲ್ಯಾಣ್ ಬ್ಯಾನರ್ಜಿ ನೀಡಿರುವ ಎಚ್ಚರಿಕೆ ಈಗ ಟಿಎಂಸಿ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ(ಏಜೆನ್ಸೀಸ್​).