ಮದ್ರಾಸ್ ಹೈಕೋರ್ಟ್ 
ದೇಶ

ದೇವಸ್ಥಾನಗಳಲ್ಲಿ ದೇವರಷ್ಟೇ ವಿಐಪಿ, ಮತ್ಯಾರೂ ಅಲ್ಲ; ವಿಐಪಿ ದರ್ಶನದ ವಿರುದ್ಧ ಮದ್ರಾಸ್ ಹೈಕೋರ್ಟ್ ಕಿಡಿ | VIP darshan

ಚೆನ್ನೈ: ದೇವಸ್ಥಾನಗಳಲ್ಲಿನ ವಿಐಪಿ ಸಂಸ್ಕೃತಿ ಮತ್ತು ವಿಶೇಷ ವಿಐಪಿ ದರ್ಶನ(VIP darshan) ಬಗ್ಗೆ ಶುಕ್ರವಾರ(ಮೇ 29) ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮದ್ರಾಸ್ ಹೈಕೋರ್ಟ್ ಪೀಠ​, ದೇವಾಲಯಗಳಲ್ಲಿ ದೇವರಷ್ಟೇ ವಿಐಪಿ, ಮತ್ಯಾರೂ ಅಲ್ಲ. ದೇವರು ಯಾರಿಗೂ ಕಾಯುವುದಿಲ್ಲ ಎಂದು ಬಲವಾದ ಹೇಳಿಕೆ ನೀಡಿದೆ.
ದೇವಾಲಯಗಳಲ್ಲಿ ವೃದ್ಧರು, ಅಂಗವಿಕಲರು ಹಾಗೂ ಗರ್ಭಿಣಿಯರನ್ನು ಹೊರತುಪಡಿಸಿ ವಿಶೇಷ ಮತ್ತು ಪಾವತಿಸಿದ ದರ್ಶನಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್​, ಈ ಕಾಮೆಂಟ್​ಗಳನ್ನು ಮಾಡಿದ್ದು, ಸಾಮಾನ್ಯ ಭಕ್ತರನ್ನು ವಿಐಪಿಗಳಿಗಾಗಿ ಸರತಿ ಸಾಲಿನಲ್ಲಿ ಕಾಯುವಂತೆ ಮಾಡುವುದು ಸಂವಿಧಾನಬಾಹಿರ ಎಂದು ಪ್ರತಿಪಾದಿಸಿದೆ.
ಸಚಿವರು ಮತ್ತು ಶಾಸಕರು ಯಾವಾಗ ಬೇಕಾದರೂ ಹೋಗಲು ಅವಕಾಶವಿಲ್ಲ. ದೇವರ ಮುಂದೆ ಎಲ್ಲರೂ ಸಮಾನರು. ಸಚಿವರು ಮತ್ತು ಸಾರ್ವಜನಿಕ ಪ್ರತಿನಿಧಿಗಳು ತಾವು ವಿಶೇಷ ಎಂದು ಭಾವಿಸಬಾರದು. ಹೆಚ್ಚಿನ ಹಣ ವಿಧಿಸುವುದು ಮತ್ತು ವಿಶೇಷ ದರ್ಶನಗಳನ್ನು ಒದಗಿಸುವುದು ಆರ್ಟಿಕಲ್ 14 ರ ಅಡಿಯಲ್ಲಿ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿತು.
ಇದೇ ವೇಳೆ ವಿಐಪಿ ಸಂಸ್ಕೃತಿ ಮತ್ತು ಪಾವತಿಸಿದ ದರ್ಶನಗಳ ರದ್ದತಿ ಕುರಿತು ಪ್ರತಿಕ್ರಿಯಿಸಲು ತಮಿಳುನಾಡು ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದ್ದು, ಮುಂದಿನ ವಿಚಾರಣೆಯನ್ನು 6 ವಾರಗಳ ಕಾಲ ಮುಂದೂಡಿತು (ಏಜೆನ್ಸೀಸ್).