- ಆನ್ಲೈನ್ ಗೇಮ್ ಗೀಳಿನ ಸಲುವಾಗಿ ಪೋಷಕರು ಬೈದಿದ್ದಕ್ಕೆ ಆತ್ಮಹತ್ಯೆ
- ಗಾಜಿಯಾಬಾದ್‌ನ ಭಾರತ್ ಸಿಟಿಯಲ್ಲಿ ಮಧ್ಯರಾತ್ರಿ 2 ಗಂಟೆಗೆ ಘಟನೆ
- ಪಖಿ(12), ಪ್ರಾಚಿ(14) ಹಾಗೂ ವಿಶಿಕಾ(16) ಎಂಬ ಮೂವರು ಆತ್ಮಹತ್ಯೆ
ಲಖನೌ: ಆನ್ಲೈನ್ ಗೇಮ್ ಗೀಳಿನ ಸಲುವಾಗಿ ಪೋಷಕರು ಬೈದಿದ್ದಕ್ಕೆ ಮೂವರು ಅಪ್ರಾಪ್ತ 12, 14, 16 ವರ್ಷದ ಮೂವರು ಸಹೋದರಿಯರು ಅಪಾರ್ಟ್ಮೆಂಟ್ನ 9ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಇಂದು(ಫೆ. 04) ಮಧ್ಯರಾತ್ರಿ ನಡೆದಿದ್ದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಬುಧವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಗಾಜಿಯಾಬಾದ್‌ನ ಭಾರತ್ ಸಿಟಿಯಲ್ಲಿ ಈ ಘಟನೆ ನಡೆದಿದೆ. ಮೃತ ಬಾಲಕಿಯರನ್ನು ಪಖಿ(12), ಪ್ರಾಚಿ(14) ಹಾಗೂ ವಿಶಿಕಾ(16) ಎಂದು ಗುರುತಿಸಲಾಗಿದೆ. ಮೂವರು ಒಟ್ಟಿಗೆ ಸ್ನಾನ, ಊಟ, ಶಾಲೆಗೆ ಹೋಗುವುದು ಹಾಗೂ ಮಲಗುವುದು ಸೇರಿದಂತೆ ದೈನಂದಿನ ಚಟುವಟಿಕೆಗಳನ್ನು ಒಟ್ಟಿಗೆ ಮಾಡ್ತಿದ್ದರು ಎನ್ನಲಾಗಿದೆ.
ಕೋವಿಡ್-19 ಸಮಯದಿಂದ ಮೂವರು ಆನ್ಲೈನ್ ಗೇಮ್ಗಳಿಗೆ ವ್ಯಸನಿಯಾಗಿದ್ದರು ಎನ್ನಲಾಗದೆ. ಮತ್ತು ಮೂವರು ಆನ್ಲೈನ್ ಟಾಸ್ಕ್ ಆಧಾರಿತ ಕೋರಿಯನ್ ಲವ್ ಗೇಮ್ ಆಡುತ್ತಿದ್ದರು, ಅದರ ಗೀಳಿನಿಂದ ಸರಿಯಾಗಿ ಶಾಲೆಗೆ ಹೋಗುತ್ತಿರಲಿಲ್ಲ ಎಂದು ವರದಿಗಳು ಉಲ್ಲೇಖಿಸಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ (ಏಜೆನ್ಸೀಸ್).