ನೊಯಲ್ ಟಾಟಾ ಮತ್ತು ಎನ್.ಚಂದ್ರಶೇಖರನ್
ಮುಂಬೈ: ಭಾರತದ ದೈತ್ಯ ಉದ್ಯಮ ಟಾಟಾ ಸಂಸ್ಥೆಯಲ್ಲಿ ಗೊಂದಲ ಮುಂದುವರೆದಿದ್ದು, ಸೆಪ್ಟೆಂಬರ್ 17ರಂದು ಎನ್. ಚಂದ್ರಶೇಖರನ್ ಅವರನ್ನು ಮುಂದಿನ 5 ವರ್ಷಗಳ ಕಾಲ ಟಾಟಾ ಸನ್ಸ್ ಅಧ್ಯಕ್ಷರಾಗಿ ಮರುನೇಮಕ ಮಾಡುವ ಕುರಿತು ತೆಗೆದುಕೊಂಡ ನಿರ್ಧಾರವನ್ನು ಟಾಟಾ ಟ್ರಸ್ಟ್ಸ್(Tata Trusts) ಪ್ರಶ್ನಿಸಿದೆ.
ಟಾಟಾ ಸನ್ಸ್‌ನ ಮಂಡಳಿಯು ಎನ್. ಚಂದ್ರಶೇಖರನ್ ಅವರಿಗೆ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮುಂದಿನ ಐದು ವರ್ಷಗಳ ಅವಧಿ ನೀಡುವ ಪರವಾಗಿ 4-1 ಮತಗಳನ್ನು ಚಲಾಯಿಸಿತು. ಟಾಟಾ ಟ್ರಸ್ಟ್ಸ್ ಅಧ್ಯಕ್ಷ ನೋಯೆಲ್ ಟಾಟಾ ಅವರು ಈ ಪ್ರಸ್ತಾವನೆಯನ್ನು ವಿರೋಧಿಸಿದ್ದು, ಇದರಿಂದ ಈಗ ಸಂಸ್ಥೆಯಲ್ಲಿ ಉಲ್ಬಣವನ್ನು ಸೃಷ್ಟಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಟಾಟಾ ಟ್ರಸ್ಟ್, ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಅವರನ್ನು ಮರು ನೇಮಕ ಮಾಡುವ ನಿರ್ಣಯವು ಕಾನೂನುಬದ್ಧವಾಗಿ ಅಮಾನ್ಯವಾಗಿದೆ. ಏಕೆಂದರೆ ಅದು ಟ್ರಸ್ಟ್-ನಾಮನಿರ್ದೇಶಿತ ನಿರ್ದೇಶಕರಿಬ್ಬರ ಕಡ್ಡಾಯ ಬೆಂಬಲವನ್ನು ಪಡೆಯಲಿಲ್ಲ ಎಂದು ವಾದಿಸಿದೆ.
ಕಂಪನಿಯ ಸಂಘಟನಾ ನಿಯಮಾವಳಿ ಪ್ರಕಾರ, ಟ್ರಸ್ಟ್‌ನಿಂದ ನಾಮನಿರ್ದೇಶನಗೊಂಡ ನಿರ್ದೇಶಕರ ಪೈಕಿ ಬಹುಮತದ ಬೆಂಬಲದ ಅಗತ್ಯವಿದೆ. ಅಧ್ಯಕ್ಷರ ನಿರ್ಣಾಯಕ ಮತವು ಈ ಷರತ್ತನ್ನು ಮೀರುವಂತಿಲ್ಲ ಎಂದು ಅದು ವಾದಿಸಿದೆ. ಟಾಟಾ ಟ್ರಸ್ಟ್‌ಗಳು ಟಾಟಾ ಸನ್ಸ್‌ನಲ್ಲಿ ಸರಿಸುಮಾರು ಶೇಕಡಾ 66 ರಷ್ಟು ಪಾಲನ್ನು ಹೊಂದಿವೆ.
ತನ್ನ ಇಬ್ಬರು ನಾಮನಿರ್ದೇಶಿತರಲ್ಲಿ ಒಬ್ಬರು ಪ್ರಸ್ತಾವನೆಯನ್ನು ವಿರೋಧಿಸಿದ್ದರಿಂದ ಒಟ್ಟಾರೆ 4:1 ಮತವು ಅಪ್ರಸ್ತುತವಾಗಿದೆ. ನಾಮನಿರ್ದೇಶಿತ ಇಬ್ಬರು ನಿರ್ದೇಶಕರಲ್ಲಿ ಒಬ್ಬರು ಅದರ ವಿರುದ್ಧ ಮತ ಚಲಾಯಿಸಿದ ನಂತರ ನಿರ್ಣಯವನ್ನು ಮಾನ್ಯವಾಗಿ ಅಂಗೀಕರಿಸಲು ಸಾಧ್ಯವಿಲ್ಲ. ಟ್ರಸ್ಟ್‌ಗಳ ಪ್ರಕಾರ, ಎರಡರ ನಡುವೆ ಬಹುಮತವಿದ್ದರೆ ಇಬ್ಬರೂ ನಿರ್ಣಯವನ್ನು ಬೆಂಬಲಿಸಬೇಕು ಎಂದರ್ಥ ಎಂದು ಹೇಳಿದೆ.
ಟಾಟಾ ಸನ್ಸ್ ಮಂಡಳಿಯಲ್ಲಿ ಇಬ್ಬರು ಟಾಟಾ ಟ್ರಸ್ಟ್‌ಗಳ ನಾಮನಿರ್ದೇಶಿತ ಸದಸ್ಯರಿದ್ದಾರೆ. ಆ ಇಬ್ಬರಲ್ಲಿ ಬಹುಮತ ಅಂದ್ರೆ ಇಬ್ಬರು, ಒಬ್ಬರಲ್ಲ. ಸೆ. 17ರಂದು ಅಂತಹ ಒಬ್ಬ ನಿರ್ದೇಶಕರು ನಿರ್ಣಯದ ವಿರುದ್ಧ ಮತ ಚಲಾಯಿಸಿದರು. ಹೀಗಾಗಿ ಎಓಎ ಕಡ್ಡಾಯಗೊಳಿಸಿದಂತೆ ಟಾಟಾ ಟ್ರಸ್ಟ್ಸ್‌ನ ನಾಮನಿರ್ದೇಶಿತ ನಿರ್ದೇಶಕರ ಸಕಾರಾತ್ಮಕ ಬೆಂಬಲ ಅದಕ್ಕೆ ಸಿಗಲಿಲ್ಲ. ಪರಿಣಾಮವಾಗಿ ನಿರ್ಣಯವೂ ಅಂಗೀಕಾರವಾಗಲಿಲ್ಲ ಎಂದು ಟ್ರಸ್ಟ್ಸ್ ತಿಳಿಸಿದೆ (ಏಜೆನ್ಸೀಸ್).