ಕಿಶ್ತ್ವಾರ್ ದುರಂತಕ್ಕೆ ಒಂದು ವರ್ಷ
- ಕಿಶ್ತ್ವಾರ್‌ನ ಚಿಸೋಟಿ ಪ್ರವಾಹ ದುರಂತಕ್ಕೆ ಒಂದು ವರ್ಷ
- 2025ರ ಆಗಸ್ಟ್ 14ರಂದು ಸಂಭವಿಸಿದ ದುರಂತದಲ್ಲಿ 63 ಸಾವು
- ನಾಪತ್ತೆಯಾಗಿದ್ದ 30 ಮಂದಿ ಶವವೂ ಸಿಗದೆ ಕುಟುಂಬಗಳ ಗೋಳು
Kishtwar flood tragedy
: ಒಂದು ವರ್ಷ ಕಳೆದರೂ ಆ ಕುಟುಂಬಗಳ ಕಾಯುವಿಕೆ ಮಾತ್ರ ಮುಗಿದಿಲ್ಲ. ಕಿಶ್ತ್ವಾರ್ನಲ್ಲಿ ಕಳೆದ ವರ್ಷ ಸಂಭವಿಸಿದ ಭೀಕರ ದಿಢೀರ್ ಪ್ರವಾಹದಲ್ಲಿ ನಾಪತ್ತೆಯಾಗಿದ್ದ 30 ಮಂದಿಯ ಕುಟುಂಬಗಳು ಇಂದಿಗೂ ತಮ್ಮವರಿಗಾಗಿ ಕಾದು ಕುಳಿತಿವೆ. ಶವ ಸಿಗಲಿಲ್ಲ, ಅಂತ್ಯಕ್ರಿಯೆ ಮಾಡಲಾಗಲಿಲ್ಲ, ತಮ್ಮವರು ನಿಜವಾಗಿಯೂ ಇಲ್ಲ ಎಂಬುದನ್ನು ಒಪ್ಪಿಕೊಳ್ಳಲೂ ಸಾಧ್ಯವಾಗುತ್ತಿಲ್ಲ.
2025ರ ಆಗಸ್ಟ್ 14ರಂದು ವಾರ್ಷಿಕ ಮಚೈಲ್ ಮಾತಾ ಯಾತ್ರೆ ನಡೆಯುತ್ತಿದ್ದಾಗ, ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಚಿಸೋಟಿ ಗ್ರಾಮದಲ್ಲಿ ದಿಢೀರ್ ಭೀಕರ ಪ್ರವಾಹ ಅಪ್ಪಳಿಸಿತ್ತು. ಮಚೈಲ್ ಮಾತಾ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ವಾಹನದಲ್ಲಿ ತಲುಪಬಹುದಾದ ಕೊನೆಯ ದಾರಿಯೇ ಈ ಚಿಸೋಟಿ ಗ್ರಾಮ.
ಜಮ್ಮು ಮೂಲದ ಸಾಮಾಜಿಕ ಕಾರ್ಯಕರ್ತ ರಾಮನ್ ಕುಮಾರ್ ಶರ್ಮಾ ಅವರು ಕಿಶ್ತ್ವಾರ್ ಜಿಲ್ಲಾಡಳಿತದಿಂದ ಪಡೆದ ಆರ್ಟಿಐ ಮಾಹಿತಿಯ ಪ್ರಕಾರ, ದುರಂತದಲ್ಲಿ 63 ಮಂದಿ ಮೃತಪಟ್ಟಿದ್ದು, 127 ಜನ ಗಾಯಗೊಂಡಿದ್ದಾರೆ. ಇನ್ನೂ 30 ಮಂದಿ ನಾಪತ್ತೆಯಾಗಿದ್ದಾರೆ. ಇವರಲ್ಲಿ 27 ಮಂದಿ ಯಾತ್ರಿಕರು ಮತ್ತು ಮೂವರು ಚಿಸೋಟಿ ಗ್ರಾಮದ ನಿವಾಸಿಗಳು.
ಶವ ಸಿಗದೆ ಕುಂಟುಂಬಳ ಕಣ್ಣೀರು
ನಾಪತ್ತೆಯಾದವರ ಕುಟುಂಬಗಳಿಗೆ ನೋವು ಇನ್ನಷ್ಟು ಕಠಿಣವಾಗಿದೆ. ತಮ್ಮವರ ಮೃತದೇಹವೇ ಸಿಗದ ಕಾರಣ ಅಂತ್ಯಕ್ರಿಯೆ ನಡೆಸಲು ಸಾಧ್ಯವಾಗಿಲ್ಲ. ಕೆಲ ಕುಟುಂಬಗಳಿಗೆ ಅಧಿಕೃತ ದಾಖಲೆಗಳಲ್ಲಿ ‘ನಾಪತ್ತೆ’ ಎಂಬ ಪದವೊಂದೇ ಉಳಿದಿದೆ. ಇದರಲ್ಲಿ ಎಸ್‌ಎಸ್‌ಬಿ ಹೆಡ್ ಕಾನ್‌ಸ್ಟೆಬಲ್ ಹುಸೇನ್ ದಾಸ್ ಅವರ ಕುಟುಂಬದ ಕಥೆ ಕಣ್ಣೀರು ತರಿಸುವಂತಿದೆ. ದುರಂತದಲ್ಲಿ ಅವರ ಪತ್ನಿ, ಇಬ್ಬರು ಮಕ್ಕಳು, ತಾಯಿ, ಸಹೋದರಿ, ಇಬ್ಬರು ಸೋದರಳಿಯರು ಮತ್ತು ಅತ್ತಿಗೆ ಸೇರಿ ಎಂಟು ಮಂದಿ ಸಿಲುಕಿದ್ದರು. ಅವರ ಪತ್ನಿಯ ಮೃತದೇಹ ಮಾತ್ರ ಪತ್ತೆಯಾಗಿದ್ದು, ಉಳಿದ ಏಳು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.
ಕಣ್ಣೇದುರೆ ಕೊಚ್ಚಿಹೋದ ಬದುಕು
ದುರಂತ ಸಂಭವಿಸಿದ ದಿನ ಹುಸೇನ್ ದಾಸ್ ಕರ್ತವ್ಯಕ್ಕಾಗಿ ಬೆಳಗ್ಗೆ 9 ಗಂಟೆ ಸುಮಾರಿಗೆ ಹೊರಟಿದ್ದರು. ಅದಕ್ಕೂ ಮುನ್ನ ಮಕ್ಕಳೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದರು. ಕೆಲವೇ ಗಂಟೆಗಳ ನಂತರ ಪ್ರವಾಹದ ಸುದ್ದಿ ತಿಳಿದು ಕುಟುಂಬದವರನ್ನು ಸಂಪರ್ಕಿಸಲು ಹಲವು ಬಾರಿ ಕರೆ ಮಾಡಿದರೂ, ಎಲ್ಲರ ಮೊಬೈಲ್‌ಗಳು ಸ್ವಿಚ್ ಆಫ್ ಆಗಿದ್ದವು.
ಮಧ್ಯಾಹ್ನ ಸುಮಾರು 12.25ರ ವೇಳೆಗೆ ಪ್ರವಾಹ ಚಿಸೋಟಿಗೆ ಅಪ್ಪಳಿಸಿತ್ತು. ನೀರಿನೊಂದಿಗೆ ಬಂಡೆಗಳು, ಮರಗಳು ಮತ್ತು ಭಾರೀ ಪ್ರಮಾಣದ ಅವಶೇಷಗಳು ನುಗ್ಗಿ ಬಂದಿದ್ದವು. ಯಾತ್ರಿಕರಿಂದ ತುಂಬಿದ್ದ ಪ್ರದೇಶದಲ್ಲಿದ್ದ ತಾತ್ಕಾಲಿಕ ಮಾರುಕಟ್ಟೆ, ಲಂಗರ್ ಮತ್ತು ಭದ್ರತಾ ಔಟ್‌ಪೋಸ್ಟ್‌ಗಳೂ ಕೊಚ್ಚಿಹೋಗಿದ್ದವು. ಮನೆಗಳು ಹಾಗೂ ಹಲವು ಮೂಲಸೌಕರ್ಯಗಳಿಗೂ ಹಾನಿಯಾಗಿತ್ತು.
ಇನ್ನೂ 30 ಮಂದಿ ಪತ್ತೆಯಾಗಿಲ್ಲ
ಪ್ರವಾಹದ ಬಳಿಕ ಸೇನೆ, ಪೊಲೀಸರು, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಬಾರ್ಡರ್ ರೋಡ್ಸ್ ಆರ್ಗನೈಸೇಷನ್ ಹಾಗೂ ಜಿಲ್ಲಾಡಳಿತದ ತಂಡಗಳು ಭಾರೀ ಪ್ರಮಾಣದಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ನಡೆಸಿದ್ದವು. ಈ ವೇಳೆ ಕೆಲವರು ಪತ್ತೆಯಾಗುತ್ತಿದ್ದಂತೆ ನಾಪತ್ತೆಯಾದವರ ಸಂಖ್ಯೆಯಲ್ಲೂ ಬದಲಾವಣೆಯಾಗಿತ್ತು. ಆಗಸ್ಟ್ 19ರಂದು ಅಧಿಕಾರಿಗಳು 63 ಮಂದಿ ಮೃತಪಟ್ಟಿದ್ದು, 39 ಜನ ನಾಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದರು.
ಪರಿಹಾರ ಸಿಕ್ಕರೂ ನೋವು ಕಡಿಮೆಯಾಗಿಲ್ಲ
63 ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿಯಂತೆ ಒಟ್ಟು 2.52 ಕೋಟಿ ರೂ. ಪರಿಹಾರ ಮಂಜೂರು ಮಾಡಲಾಗಿದೆ. ಆದರೆ ಕಾಣೆಯಾದವರ ಕುಟುಂಬಗಳ ನೋವು ಹಣದಿಂದ ಕಡಿಮೆಯಾಗಿಲ್ಲ. ತಮ್ಮವರ ಮೃತದೇಹವೇ ಸಿಗದ ಅಂತ್ಯಕ್ರಿಯೆಯನ್ನೂ ನೆರವೇರಿಸಲು ಸಾಧ್ಯವಾಗಿಲ್ಲ. ಸಮಾಧಿ ಬಳಿ ನಿಂತು ಕೊನೆಯ ಬಾರಿ ನೆನಪಿಸಿಕೊಳ್ಳುವ ಅವಕಾಶವೂ ಇಲ್ಲ. ಇನ್ನೂ ಕೆಲ ಕುಟುಂಬಗಳಿಗೆ ತಮ್ಮವರು ಬದುಕಿದ್ದಾರೋ, ಸತ್ತಿದ್ದಾರೋ ಎಂಬ ಮಾಹಿತಿಯೂ ಸಿಕ್ಕಿಲ್ಲ,(ಏಜೆನ್ಸೀಸ್).