ಕುಟುಂಬದ ಕಣ್ಣಿನಿಂದ ಮರೆಯಾಗಿದ್ದ ವೃದ್ಧ
- 10 ವರ್ಷಗಳಿಂದ ಯಾರಿಂದಲೂ ಆಗದ ಕೆಲಸ ಒಂದು ಪೆನ್ನಿಂದ ಸಾಧ್ಯ
- ವೃದ್ಧನ ಕುಟುಂಬಸ್ಥರನ್ನು ಕಡೆಗೂ ಹುಡುಕಿಕೊಟ್ಟ ಅದೊಂದು ಪದ
- ಪೊಲೀಸ್ ಅಧಿಕಾರಿ ಕೊಟ್ಟ ಡೈರಿಯಲ್ಲಿ ವೈದ್ಧ ಬರೆದಿದ್ದು ಮಾತ್ರ ಒಂದೇ ಒಂದು ಪದ
One Word: ಪೊಲೀಸ್ ಅಧಿಕಾರಿ ಕೊಟ್ಟ ಒಂದು ಪೆನ್ ಮತ್ತು ಡೈರಿಯಲ್ಲಿ ವೃದ್ಧನೊಬ್ಬ ಬರೆದ ಒಂದೇ ಒಂದು ಪದ ಆತನನ್ನು ಸುಮಾರು 10 ವರ್ಷಗಳ ಬಳಿಕ ಕುಟುಂಬವನ್ನು ಸೇರುವಂತೆ ಮಾಡಿದ ಘಟನೆ ಉತ್ತರಾಖಂಡ್ನಲ್ಲಿ ವರದಿಯಾಗಿದೆ.
ಕುಟುಂಬದಿಂದ ದೂರವಾಗಿದ್ದ ವೃದ್ಧನನ್ನು ಮತ್ತೆ ಅವರ ಕುಟುಂಬದೊಂದಿಗೆ ಸೇರಿಸಿದ್ದು ಅದೊಂದು ಪದ. ಮಾತಿನಿಂದ ಹೇಳಲಾಗದ ತನ್ನ ಹಿಂದಿನ ಬದುಕಿನ ಸುಳಿವನ್ನು ಪೊಲೀಸ್ ಅಧಿಕಾರಿಯೊಬ್ಬರು ಕೊಟ್ಟ ಡೈರಿಯಲ್ಲಿ ಬರೆದಿದ್ದೇ ಇಂದು ಅವರ ಕಣ್ಣೀರಿನ ಕ್ಷಣಕ್ಕೆ ಕಾರಣವಾಗಿದೆ. ಕಳೆದ 10 ವರ್ಷಗಳಿಂದ ಯಾರಿಂದಲೂ ಮನೆಯ ಮೇಟಿಯನ್ನು ಹುಡುಕಿಕೊಡಲು ಸಾಧ್ಯವಾಗದು, ಅಧಿಕಾರಿಯು ಉಪಯೋಗಿಸಿದ ಬುದ್ಧಿವಂತಿಕೆಯಿಂದ ಸಾಧ್ಯವಾಗಿದ್ದು ಸದ್ಯ ಅನೇಕರ ಹುಬ್ಬೇರಿಸಿದೆ.
ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಮಜ್ಖಾಲಿಯಲ್ಲಿ ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದ ವೃದ್ಧರೊಬ್ಬರು, ಹರಿದ ಬಟ್ಟೆಯಲ್ಲಿ ರಸ್ತೆಗಳಲ್ಲಿ ಅಲೆದಾಡುತ್ತಿರುವುದನ್ನು ಇತ್ತೀಚೆಗಷ್ಟೇ ಮಜ್ಖಾಲಿ ಪೊಲೀಸ್ ಔಟ್‌ಪೋಸ್ಟ್‌ಗೆ ಟ್ರಾನ್ಸ್ಫರ್ ಆದ ಸಬ್‌ಇನ್‌ಸ್ಪೆಕ್ಟರ್ ವಿನೋದ್ ಫರ್ಟ್ಯಾಲ್ ಗಮನಿಸಿದರು. ಈ ವೇಳೆ, ವ್ಯಕ್ತಿಯನ್ನು ಠಾಣೆಗೆ ಕರೆತಂದು ಮನೆ, ಕುಟುಂಬ, ಸಂಬಂಧಿಕರು, ವಿಳಾಸದ ಬಗ್ಗೆ ಮಾಹಿತಿ ಪಡೆಯಲು ಹಲವು ಬಾರಿ ಪ್ರಯತ್ನಿಸಿದರು. ಆದರೆ, ವೃದ್ಧನಿಗೆ ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗದ ಕಾರಣ, ಅವರ ಯಾವ ಪ್ರಯತ್ನವೂ ಆತಂಭದಲ್ಲಿ ಫಲಿಸಲಿಲ್ಲ.
ಪೆನ್ನಿಂದ ಸಾಧ್ಯವಾಯ್ತು
ಮಾತಿನ ಮೂಲಕ ಮಾಹಿತಿ ಪಡೆಯಲು ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗದ ಬೆನ್ನಲ್ಲೇ ವಿನೋದ್ ತಮ್ಮದೇ ಒಂದು ವಿಭಿನ್ನ ಪ್ರಯತ್ನಕ್ಕೆ ಮುಂದಾದರು. ಪ್ರೀತಿಯಿಂದಲೇ ಮಾತನಾಡಿಸುತ್ತಾ, ಅವರ ಕೈಗೆ ಒಂದು ಡೈರಿ ಮತ್ತು ಪೆನ್ನು ಕೊಟ್ಟು, ನಿಮ್ಮ ಜೀವನದ ಬಗ್ಗೆ ನೆನಪಿರುವ ಯಾವುದಾದರೂ ಪದ ಅಥವಾ ಸ್ಥಳದ ಹೆಸರನ್ನು ಬರೆದು ನೋಡಿ ಎಂದರು. ಇದಕ್ಕೆ ಸ್ಪಂದಿಸಿದ ಅವರು, ಬರೆದಿದ್ದು ಒಂದೇ ಒಂದು ಪದ ಅದುವೇ “ರಾಜೇಪುರ”.
ಇಲ್ಲಿಂದ ಶುರುವಾಯ್ತು ಹುಡುಕಾಟ
‘ರಾಜೇಪುರ’ ಎಂಬ ಪದದ ಆಧಾರದ ಮೇಲೆ ಮಜ್ಖಾಲಿ ಖಾಕಿ ಪಡೆಗೆ ಉತ್ತರ ಪ್ರದೇಶದ ಫರೂಖಾಬಾದ್ ಜಿಲ್ಲೆಯ ರಾಜೇಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ, ಈ ವ್ಯಕ್ತಿಯ ಫೋಟೋ ಸೇರಿದಂತೆ ಲಭ್ಯವಿದ್ದ ಎಲ್ಲ ಮಾಹಿತಿಯನ್ನು ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ, ಗುರುತು ಪತ್ತೆ ಹಚ್ಚುವಂತೆ ವಿನೋದ್ ಸೂಚಿಸಿದರು. ಸುಮಾರು ನಾಲ್ಕು ದಿನಗಳ ಕಾಲ ನಿರಂತರ ವಿಚಾರಣೆಯ ಬಳಿಕ ಪೊಲೀಸರಿಗೆ ವೃದ್ಧನ ಗುರುತು ಕಡೆಗೂ ಪತ್ತೆಯಾಯಿತು.
ವೃದ್ಧನ ಹೆಸರು ಶ್ಯಾಮ್ ಸಿಂಗ್ ಎನ್ನಲಾಗಿದ್ದು, ಅವರನ್ನು ಅವರ ಕುಟುಂಬದವರು ಪತ್ತೆ ಹಚ್ಚಿದ್ದಾಗಿ ಪೊಲೀಸರು ಖಚಿತ ಪಡಿಸಿದರು. ವಿಷಯ ತಿಳಿದ ಕೂಡಲೇ ಶ್ಯಾಮ್ ಸಿಂಗ್ ಅವರ ಪುತ್ರ ಹಾಗೂ ಕುಟುಂಬಸ್ಥರು ಉತ್ತರ ಪ್ರದೇಶದಿಂದ ಉತ್ತರಾಖಂಡದ ಮಜ್ಖಾಲಿ ಪೊಲೀಸ್ ಔಟ್‌ಪೋಸ್ಟ್‌ಗೆ ಭೇಟಿ ನೀಡಿ, 10 ವರ್ಷಗಳ ಬಳಿಕ ಶ್ಯಾಮ್ರನ್ನು ಕಂಡು ಕಣ್ಣೀರಿಟ್ಟರು. ಈ ಕ್ಷಣವನ್ನು ನೋಡಿದ ಠಾಣೆಯ ಅಧಿಕಾರಿಗಳು ಕೆಲ ನಿಮಿಷ ಭಾವುಕರಾದರು.
ಅಷ್ಟಕ್ಕೂ ಏನಾಗಿತ್ತು?
ಕುಟುಂಬಸ್ಥರ ಮಾಹಿತಿ ಪ್ರಕಾರ, ಶ್ಯಾಮ್ ಸಿಂಗ್ ಸುಮಾರು 10 ವರ್ಷಗಳ ಹಿಂದೆ ಮಾನಸಿಕ ಖಾಯಿಲೆಗಳಿಂದ ಬಳಲುತ್ತಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಣ್ಮರೆಯಾದ ಅವರನ್ನು ಎಲ್ಲಿ ಹುಡುಕಿದರು ಸಿಗಲಿಲ್ಲ. ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟರೂ ಅವರ ಬಗ್ಗೆ ಒಂದು ಸಣ್ಣ ಸುಳಿವೂ ಸಿಕ್ಕಿರಲಿಲ್ಲ. ಆದರೆ, ಸಬ್‌ಇನ್‌ಸ್ಪೆಕ್ಟರ್ ವಿನೋದ್ ಅವರ ಬುದ್ಧಿವಂತಿಕೆಯ ಪ್ರಯತ್ನ ಭಾವುಕ ಕ್ಷಣಕ್ಕೆ ಕಾರಣವಾಯಿತು.
ಘಟನೆಗೆ ಸಾರ್ವಜನಿಕರ ಮೆಚ್ಚುಗೆ
ಈ ಮಾನವೀಯ ಘಟನೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಶ್ಯಾಮ್ ಸಿಂಗ್ ಅವರ ಬಗ್ಗೆ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಪೊಲೀಸರು ಕೇವಲ ಪ್ರಕರಣಗಳನ್ನು ದಾಖಲಿಸುವುದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದು ಮಾತ್ರವಲ್ಲ, ಕಳೆದುಹೋದ ಕುಟುಂಬಗಳನ್ನು ಮತ್ತೆ ಸೇರಿಸುವ ಕೆಲಸವನ್ನೂ ಮಾಡುತ್ತಾರೆ ಎಂದು ಸಂತಸ ವ್ಯಕ್ತಪಡಿಸಲಾಗಿದೆ,(ಏಜೆನ್ಸೀಸ್).