Revanth Reddy | ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ
ಹೈದ್ರಾಬಾದ್: ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಿಂದು ದೇವರುಗಳ ಅಸ್ತಿತ್ವವನ್ನು ಅಪಹಾಸ್ಯ ಮಾಡಿದ್ದಾರೆ ಎಂಬ ವರದಿಗಳು ಹೊರಬಿದ್ದ ಬಳಿಕ, ಪ್ರತಿಪಕ್ಷ ಬಿಜೆಪಿ ಮತ್ತು ಬಿಆರ್‌ಎಸ್, ಸಿಎಂ ರೆಡ್ಡಿ ಹೇಳಿಕೆಯನ್ನು ಖಂಡಿಸಿದ್ದು, ತಕ್ಷಣವೇ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿವೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರೆಡ್ಡಿ, ಹಿಂದುಗಳು ಎಷ್ಟು ದೇವರುಗಳನ್ನು ನಂಬುತ್ತಾರೆ..? ಮೂರು ಕೋಟಿ ಇದೆಯೇ? ಇಷ್ಟೊಂದು ಏಕೆ ಇವೆ? ಅವಿವಾಹಿತರಿಗೆ ಒಬ್ಬ ದೇವರು, ಅದು ಹನುಮಾನ್. ಎರಡು ಬಾರಿ ಮದುವೆಯಾಗುವವರಿಗೆ ಇನ್ನೊಂದು ದೇವರು. ಮತ್ತು ಮದ್ಯಪಾನ ಮಾಡುವವರಿಗೆ ಮತ್ತೊಂದು ದೇವರು. ಕೋಳಿ ಬಲಿಗೆ ಒಬ್ಬನಿದ್ದಾನೆ, ಬೇಳೆ ಮತ್ತು ಅನ್ನಕ್ಕೆ ಒಬ್ಬನಿದ್ದಾನೆ. ಪ್ರತಿಯೊಂದು ಗುಂಪಿಗೂ ತನ್ನದೇ ಆದ ದೇವರು ಇದ್ದಾನೆ ಎಂದು ರೆಡ್ಡಿ ಹೇಳಿದ್ದರು.
ರೆಡ್ಡಿ ಕ್ಷಮೆಯಾಚನೆಗೆ ವಿರೋಧ ಪಕ್ಷಗಳ ಒತ್ತಾಯ...
ರೇವಂತ್ ರೆಡ್ಡಿಯ ಈ ಹೇಳಿಕೆಗೆ ತಕ್ಷಣವೇ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮತ್ತು ಬಿಆರ್‌ಎಸ್ ನಾಯಕರು ಮುಖ್ಯಮಂತ್ರಿ ಹಿಂದು ನಂಬಿಕೆಗಳನ್ನು ಅವಮಾನಿಸಿದ್ದಾರೆ ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಚಿಕ್ಕೋಟಿ ಪ್ರವೀಣ್, ಕಾಂಗ್ರೆಸ್ ಮತ್ತು ರೇವಂತ್ ರೆಡ್ಡಿಗೆ ಯಾವುದೇ ನಾಚಿಕೆ ಇಲ್ಲ. ಎಲ್ಲಾ ಸಭೆಗಳಲ್ಲಿ, ಮುಸ್ಲಿಮರಿಂದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಅವರು ಹೇಳುತ್ತಾರೆ. ಮುಖ್ಯಮಂತ್ರಿ ಕ್ಷಮೆಯಾಚಿಸಬೇಕು ಮತ್ತು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿವೆ.
ಹಿಂದು ದೇವತೆಗಳನ್ನು ಅಪಹಾಸ್ಯ ಮಾಡುವುದು ಫ್ಯಾಷನ್ ಆಗಿಬಿಟ್ಟಿದೆ
ರೇವಂತ್ ರೆಡ್ಡಿ ಹೇಳಿಕೆ ಕಿಡಿ ಕಾರಿರುವ ಬಿಆರ್‌ಎಸ್ ನಾಯಕ ರಾಕೇಶ್ ರೆಡ್ಡಿ ಅನುಗುಲ, ಇತ್ತೀಚಿನ ದಿನಗಳಲ್ಲಿ ಹಿಂದು ದೇವತೆಗಳನ್ನು ಅಪಹಾಸ್ಯ ಮಾಡುವುದು ಎಲ್ಲರಿಗೂ ಫ್ಯಾಷನ್ ಆಗಿಬಿಟ್ಟಿದೆ ಎಂದಿದ್ದಾರೆ. ಕೋಟ್ಯಂತರ ಹಿಂದುಗಳ ಭಾವನೆಗಳಿಗೆ ನೋವುಂಟು ಮಾಡುವ ರೀತಿಯಲ್ಲಿ ರೇವಂತ್ ರೆಡ್ಡಿ ಮಾತನಾಡುತ್ತಿರುವುದು ದುರದೃಷ್ಟಕರ. ಅವರು ಯಾರನ್ನೊ ಮೆಚ್ಚಿಸಲು ಈ ರೀತಿ ಮಾತನಾಡುತ್ತಿದ್ದಾರೆಯೇ? ಅವರು ತಕ್ಷಣ ಹಿಂದು ಸಮುದಾಯದ ಕ್ಷಮೆಯಾಚಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಇದೇ ಮೊದಲಲ್ಲ..
ಹಿಂದು ದೇವರುಗಳ ಬಗ್ಗೆ ಸಿಎಂ ರೇವಂತ್ ರೆಡ್ಡಿ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ರೆಡ್ಡಿ, ದೇವರ ಫೋಟೋದೊಂದಿಗೆ ಏನನ್ನಾದರೂ ಹುಡುಕುವವರು ಭಿಕ್ಷುಕರು, ಹಿಂದುಗಳಲ್ಲ ಎಂಬ ಹೇಳಿಕೆ ನೀಡಿದ್ದರು. ದೇವರು ದೇವಸ್ಥಾನದಲ್ಲಿರಬೇಕು ಮತ್ತು ಭಕ್ತಿ ಹೃದಯದಲ್ಲಿರಬೇಕು. ಅಂತಹವರು ಮಾತ್ರ ನಿಜವಾದ ಹಿಂದುಗಳು. ಬಿಜೆಪಿ ನಾಯಕರು ರಸ್ತೆಗಳಲ್ಲಿ ದೇವರ ಫೋಟೋ ಇಟ್ಟು ಮತ ಕೇಳುತ್ತಾರೆ ಎಂಬ ಹೇಳಿಕೆ ಬಿಜೆಪಿಯಿಂದ ಟೀಕೆಗೆ ಗುರಿಯಾಗಿತ್ತು(ಏಜೆನ್ಸೀಸ್).