Love And Consent 
ದೇಶ

ಒಬ್ಬಳೇ ವಧು, ಇಬ್ಬರು ವರರು: ಅಚ್ಚರಿ ಮೂಡಿಸಿದ 29 ಲಕ್ಷದ ವರದಕ್ಷಿಣೆ! | Love And Consent

ಬ್ಯಾಂಕಾಕ್: ಪ್ರೀತಿ ಕುರುಡು ಎನ್ನುತ್ತಾರೆ, ಆದರೆ ಈ ಪ್ರೇಮಕಥೆ ಇಡೀ ಜಗತ್ತೇ ಹುಬ್ಬೇರಿಸುವಂತೆ ಮಾಡಿದೆ!(Love And Consent) ಸಾಮಾನ್ಯವಾಗಿ ಒಬ್ಬ ಪುರುಷ ಇಬ್ಬರು ಮಹಿಳೆಯರನ್ನು(Grooms) ಮದುವೆಯಾಗುವುದನ್ನು ಕೇಳಿದ್ದೇವೆ. ಆದರೆ, ಥೈಲ್ಯಾಂಡ್‌ನ ಮಹಿಳೆಯೊಬ್ಬಳು ಏಕಕಾಲಕ್ಕೆ ಇಬ್ಬರು ವಿದೇಶಿ ಪುರುಷರನ್ನು ವರಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದ್ದಾರೆ.
37 ವರ್ಷದ ದುವಾಂಗ್‌ಡುವಾನ್ ಕೆತ್ಸಾರೊ ಎಂಬ ಮಹಿಳೆಯೇ ಈ ವಿಭಿನ್ನ ಮದುವೆಯ ನಾಯಕಿ. ಥೈಲ್ಯಾಂಡ್‌ನ ಪಟ್ಟಾಯ ನಗರದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಈಕೆಗೆ ಆಸ್ಟ್ರಿಯಾದ ನಿವೃತ್ತ ಪೊಲೀಸ್ ಅಧಿಕಾರಿ ರೋಮನ್ ಎಂಬುವವರ ಪರಿಚಯವಾಗಿತ್ತು. ಕಳೆದ ಐದು ವರ್ಷಗಳಿಂದ ಇವರಿಬ್ಬರು ಜೊತೆಯಾಗಿ ವಾಸಿಸುತ್ತಿದ್ದರು. ಆದರೆ, ಕಥೆಗೆ ಟ್ವಿಸ್ಟ್ ಸಿಕ್ಕಿದ್ದು ಮತ್ತೊಬ್ಬ ಆಸ್ಟ್ರಿಯನ್ ಪೊಲೀಸ್ ಅಧಿಕಾರಿ ಮ್ಯಾಕಿ ಎಂಬುವವರ ಎಂಟ್ರಿಯಾದಾಗ!

ಒಪ್ಪಿಗೆ ಮತ್ತು ಪ್ರಾಮಾಣಿಕತೆಯ ಪಯಣ

ದುವಾಂಗ್‌ಡುವಾನ್ ಅವರು ಮೊದಲು ರೋಮನ್ ಅವರನ್ನು ಪ್ರೀತಿಸುತ್ತಿದ್ದರು, ನಂತರ ಮ್ಯಾಕಿ ಅವರ ಪರಿಚಯವಾಯಿತು. ಈ ಮೂವರ ನಡುವೆ ರಹಸ್ಯಗಳಿರಲಿಲ್ಲ. ಪರಸ್ಪರ ಚರ್ಚಿಸಿ, ಒಮ್ಮತಕ್ಕೆ ಬಂದು ಒಟ್ಟಾಗಿ ಜೀವನ ನಡೆಸಲು ನಿರ್ಧರಿಸಿದರು. "ನಮ್ಮ ಸಂಬಂಧವು ಪ್ರಾಮಾಣಿಕತೆ ಮತ್ತು ಪರಸ್ಪರ ಗೌರವದ ಮೇಲೆ ನಿಂತಿದೆ," ಎನ್ನುತ್ತಾರೆ ಈ ವಧು.

ಕುಟುಂಬದ ಬೆಂಬಲ ಮತ್ತು ಆರ್ಥಿಕ ಸಂಕಷ್ಟ

ಸ್ವತಂತ್ರ ಗಾಯಕಿ ಮತ್ತು ಗೀತರಚನೆಗಾರ್ತಿಯಾಗಲು ಬಯಸಿದ್ದ ದುವಾಂಗ್‌ಡುವಾನ್ ಅವರ ವೃತ್ತಿಜೀವನ ಯಶಸ್ವಿಯಾಗಲಿಲ್ಲ. ಮೂವರು ಹೆಣ್ಣುಮಕ್ಕಳು ಮತ್ತು ಇಬ್ಬರು ಮೊಮ್ಮಕ್ಕಳನ್ನು ಹೊಂದಿರುವ ಇವರು, ಕುಟುಂಬವನ್ನು ಸಲಹಲು ಪಟ್ಟಾಯದಲ್ಲಿ ಕೆಲಸ ಆರಂಭಿಸಿದ್ದರು. ಈ ಕಷ್ಟದ ಸಮಯದಲ್ಲಿ ರೋಮನ್ ಮತ್ತು ಮ್ಯಾಕಿ ಇಬ್ಬರೂ ಆಕೆಗೆ ಬೆನ್ನೆಲುಬಾಗಿ ನಿಂತರು. ಮಗಳ ಈ ಅಸಮಾನ್ಯ ನಿರ್ಧಾರಕ್ಕೆ ಆಕೆಯ ಪೋಷಕರು ಮತ್ತು ಮಕ್ಕಳು ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.

ಲಕ್ಷ ಲಕ್ಷ ಹಣದ 'ಡೌರಿ' (ವರದಕ್ಷಿಣೆ)

ಥಾಯ್ ಸಂಪ್ರದಾಯದಂತೆ ನಡೆದ ಈ ವಿವಾಹದಲ್ಲಿ ವರರು ವಧುವಿಗೆ ಹಣ ನೀಡುವುದು ವಾಡಿಕೆ. ಇಲ್ಲಿ ವಿಶೇಷವೆಂದರೆ, ಇಬ್ಬರೂ ವರರು ತಲಾ 10 ಲಕ್ಷ ಥಾಯ್ ಬಹ್ತ್ (ಒಟ್ಟು ಸುಮಾರು 29 ಲಕ್ಷ ರೂಪಾಯಿ) ಹಣವನ್ನು ವಧುವಿಗೆ ಉಡುಗೊರೆಯಾಗಿ ನೀಡಿದ್ದಾರೆ. ಅತ್ಯಂತ ಸರಳವಾಗಿ ನಡೆದ ಈ ವಿವಾಹ ಸಮಾರಂಭದಲ್ಲಿ ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು,(ಏಜೆನ್ಸೀಸ್​).