ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ 
ದೇಶ

ಒಂದು ಬಾರಿ ಶಾಸಕ, 10 ಬಾರಿ ಸಿಎಂ... ನಿತೀಶ್​ ರಾಜಕೀಯ ಹಾದಿಯಲ್ಲಿದೆ ಹಲವು ವಿಶೇಷತೆಗಳು! Nitish Kumar

ಪ್ರಮುಖ ಮುಖ್ಯಾಂಶಗಳು

  • ಬಿಹಾರದಲ್ಲಿ ಮತ್ತೊಮ್ಮೆ ಎನ್‌ಡಿಎ ಯುಗ ಭರ್ಜರಿ ಆರಂಭ
  • ಹತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಿತೀಶ್​ ಕುಮಾರ್​
  • ಅತಿ ಹೆಚ್ಚು ಬಾರಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಾಣ
ಪಟನಾ: ಬಿಹಾರದಲ್ಲಿ ಮತ್ತೊಮ್ಮೆ ಎನ್‌ಡಿಎ ಯುಗ ಭರ್ಜರಿಯಾಗಿ ಆರಂಭವಾಗಿದೆ. ಹತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್​ ( Nitish Kumar ) ಅಪರೂಪದ ದಾಖಲೆಯನ್ನು ನಿರ್ಮಿಸಿದ್ದಾರೆ. ಅತಿ ಹೆಚ್ಚು ಬಾರಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿಯಾಗಿ ಹೊಸ ಇತಿಹಾಸವನ್ನು ನಿತೀಶ್​ ಸೃಷ್ಟಿಸಿದ್ದಾರೆ. ಇದರ ಜೊತೆಗೆ ಬಿಹಾರದಲ್ಲಿ ಅತಿ ಹೆಚ್ಚು ಅವಧಿಗೆ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ದಾಖಲೆಯನ್ನೂ ಬರೆದಿದ್ದಾರೆ. ನಿತೀಶ್​ ಅವರು ಇಲ್ಲಿಯವರೆಗೆ 19 ವರ್ಷಗಳ ಕಾಲ ಬಿಹಾರವನ್ನು ಆಳಿದ್ದಾರೆ. ಈ ಹೊಸ ಅವಧಿಯೊಂದಿಗೆ, ನಿತೀಶ್​ ಅವರು 24 ವರ್ಷಗಳ ರಾಜ್ಯಭಾರದೊಂದಿಗೆ ಅಪರೂಪದ ದಾಖಲೆಯನ್ನು ತಮ್ಮ ಜೀವನ ಪುಟದಲ್ಲಿ ಹಾಗೂ ದೇಶದ ರಾಜಕೀಯ ಇತಿಹಾಸದಲ್ಲಿ ದಾಖಲಿಸಿದ್ದಾರೆ.
ದೇಶದ ಇತಿಹಾಸದಲ್ಲಿ ವಿವಿಧ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದವರಲ್ಲಿ, ವಿವಿಧ ಇತಿಹಾಸಗಳನ್ನು ಸೃಷ್ಟಿಸಿದ ನಾಯಕರಿದ್ದಾರೆ. ಅವರಲ್ಲಿ, ಪವನ್ ಕುಮಾರ್ ಚಾಮ್ಲಿಂಗ್ ಅವರು ಸಿಕ್ಕಿಂನ ಮುಖ್ಯಮಂತ್ರಿಯಾಗಿ 24 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಅವರು 1994 ಡಿಸೆಂಬರ್​ನಿಂದ 2019 ಮೇ ವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಇವರ ನಂತರ ನವೀನ್ ಪಟ್ನಾಯಕ್ 2000 ಇಸವಿಯ ಮಾರ್ಚ್ ತಿಂಗಳಿಂದ 2024ರ ಜೂನ್ ವರೆಗೆ 24 ವರ್ಷಗಳ ಕಾಲ ಒಡಿಶಾದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅದಕ್ಕೂ ಮೊದಲು, 1977 ರಿಂದ 2000 ರವರೆಗೆ, ಜ್ಯೋತಿ ಬಸು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ 23 ವರ್ಷಗಳ ಕಾಲ ಸೇವೆ ಸಲ್ಲಿಸಿ, ಅಪರೂಪದ ದಾಖಲೆಯನ್ನು ಸೃಷ್ಟಿಸಿದರು. ಆ ಸಮಯದಲ್ಲಿ ಅದು ದಾಖಲೆಯಾಗಿತ್ತು. ನಂತರದ ಅವಧಿಯಲ್ಲಿ, ಪವನ್ ಕುಮಾರ್ ಚಾಮ್ಲಿಂಗ್ ಮತ್ತು ನವೀನ್ ಪಟ್ನಾಯಕ್ ತಮ್ಮ ತಮ್ಮ ರಾಜ್ಯಗಳಲ್ಲಿ ಅತಿ ಹೆಚ್ಚು ಕಾಲ ಆಳ್ವಿಕೆ ನಡೆಸಿ ಇತಿಹಾಸ ನಿರ್ಮಿಸಿದರು. ಈಗ ನಿತೀಶ್ ಕುಮಾರ್ ಆ ಸಾಲಿಗೆ ಸೇರಲಿದ್ದಾರೆ.
ವಿವಿಧ ರಾಜ್ಯಗಳಲ್ಲಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದವರಲ್ಲಿ, ಹಿಮಾಚಲ ಪ್ರದೇಶದ ವೀರಭದ್ರ ಸಿಂಗ್ ಮತ್ತು ಮಿಜೋರಾಂನ ಲಾಲ್ ಧನ್ಹಾವ್ಲಾ ತಲಾ 21 ವರ್ಷಗಳಿಗೂ ಹೆಚ್ಚು ಕಾಲ ಈ ಹುದ್ದೆಯನ್ನು ಅಲಂಕರಿಸಿದ್ದಾರೆ. ಆದಾಗ್ಯೂ, ಅವರೆಲ್ಲ ದೀರ್ಘಕಾಲದವರೆಗೆ ಅಧಿಕಾರದಲ್ಲಿರಲು ಕಾರಣ ಆ ರಾಜ್ಯಗಳಲ್ಲಿನ ರಾಜಕೀಯ ಪರಿಸ್ಥಿತಿ ಮಾತ್ರವಲ್ಲದೆ ಅಲ್ಲಿನ ಜನರು ಅವರ ಮೇಲೆ ಇಟ್ಟಿರುವ ನಂಬಿಕೆಯೂ ಆಗಿದೆ. ಅವರಲ್ಲಿ ಹೆಚ್ಚಿನವರು ಪ್ರಾದೇಶಿಕ ಪಕ್ಷಗಳ ನಾಯಕರು. ಅಲ್ಲದೆ, ರಾಷ್ಟ್ರೀಯ ಪಕ್ಷಗಳ ಉನ್ನತ ನಾಯಕರು ಅವರಿಗೆ ನೀಡಿದ ಪ್ರೋತ್ಸಾಹವು ಕೂಡ ಅವರ ದೀರ್ಘಾವಧಿಯ ಅಧಿಕಾರಾವಧಿಗೆ ಕಾರಣವಾಗಿದೆ ಎಂದು ಹೇಳಬಹುದು.
ಬಿಹಾರದ ಮುಖ್ಯಮಂತ್ರಿ ನಿತೀಶ್ ವಿಷಯಕ್ಕೆ ಬಂದರೆ, ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ನಿತೀಶ್, ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರುತ್ತೇನೆ ಎಂದೂ ಊಹಿಸಿರಲಿಲ್ಲ. ತುರ್ತು ಪರಿಸ್ಥಿತಿಗೆ ಮೊದಲು, 1974 ರಿಂದ 77 ರವರೆಗೆ, ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ಚಳುವಳಿಯಲ್ಲಿ ನಿತೀಶ್​ ಭಾಗವಹಿಸಿದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೈಲು ಶಿಕ್ಷೆ ಅನುಭವಿಸಿದ ನಾಯಕರಲ್ಲಿ ನಿತೀಶ್ ಕೂಡ ಒಬ್ಬರು. ಅವರು 1977, 80 ಮತ್ತು 85 ರ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದರು. ಆದಾಗ್ಯೂ, ಅವರು 1985 ರಲ್ಲಿ ಮಾತ್ರ ವಿಧಾನಸಭೆಗೆ ಪ್ರವೇಶಿಸಿದರು. 1985 ರಲ್ಲಿ, ಜನತಾದಳದ ಪರವಾಗಿ ಹರ್ನಾಥ್‌ನಿಂದ ಶಾಸಕರಾಗಿ ಬಿಹಾರ ವಿಧಾನಸಭೆಗೆ ಪ್ರವೇಶಿಸಿದರು. ಅದರ ನಂತರ, ಅವರು ರಾಷ್ಟ್ರ ರಾಜಕೀಯದತ್ತ ಗಮನಹರಿಸಿದರು. ಲೋಕಸಭಾ ಚುನಾವಣೆಯಲ್ಲಿ ಅವರು ಬರ್ಹ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. ಹೀಗಾಗಿ, ಅವರು 1989 ರಲ್ಲಿ ಸಂಸದರಾದರು ಮತ್ತು ಹದಿನೈದು ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಿದರು. 1990 ರಲ್ಲಿ ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದರು. 1998 ರಲ್ಲಿ ಜನತಾದಳದಿಂದ ಹೊರಬಂದ ನಂತರ, ಅವರು ಜಾರ್ಜ್ ಫರ್ನಾಂಡಿಸ್ ಅವರೊಂದಿಗೆ ಸಮತಾ ಪಕ್ಷವನ್ನು ಸ್ಥಾಪಿಸಿದರು. ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಅವರು ಮೊದಲ ಬಾರಿಗೆ ರೈಲ್ವೆ ಸಚಿವರಾದರು. ಬಂಗಾಳದಲ್ಲಿ ನಡೆದ ಗೈಸಲ್ ರೈಲು ಅಪಘಾತದ ನಂತರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ರಾಜಕೀಯ ನಾಯಕರಾಗಿ ನಿತೀಶ್ ಒಂದು ನವೀನ ಶೈಲಿಯನ್ನು ಹೊಂದಿದ್ದಾರೆ. ಅವರು ಪ್ರತಿ ಚುನಾವಣೆಯಲ್ಲೂ ಜನರನ್ನು ಆಕರ್ಷಿಸಲು ನಿರ್ದಿಷ್ಟವಾಗಿ ಯೋಚಿಸುತ್ತಾರೆ. ಒಮ್ಮೆ ಅವರು ಜಂಗಲ್ ರಾಜ್ ನಿರ್ಮೂಲನೆ ಎಂದು ಹೇಳಿದ್ದರು. ಇನ್ನೊಮ್ಮೆ ಹಿಂದುಳಿದ ವರ್ಗಗಳ ಕಲ್ಯಾಣ ಎಂದರು. ರಾಜ್ಯದಲ್ಲಿ ಈಗಾಗಲೇ 125 ಯೂನಿಟ್ ಉಚಿತ ವಿದ್ಯುತ್ ಅನ್ನು ಜಾರಿಗೆ ತರುತ್ತಿರುವ ಸರ್ಕಾರ, ಚುನಾವಣೆಗೂ ಮುನ್ನ ಮುಖ್ಯಮಂತ್ರಿಗಳ ಮಹಿಳಾ ರೋಜ್‌ಗಾರ್ ಯೋಜನೆಯನ್ನು ಪ್ರಾರಂಭಿಸಿತು. ರಾಜ್ಯದ ಮಹಿಳೆಯರ ಖಾತೆಗಳಿಗೆ 10 ಸಾವಿರ ರೂಪಾಯಿ ಜಮಾ ಮಾಡಿತು. ಇದರ ಜೊತೆಗೆ, ಉದ್ಯೋಗದ ಮೇಲೆ ಕೇಂದ್ರೀಕರಿಸುವ ಕಾರ್ಯಸೂಚಿಯನ್ನು ಘೋಷಿಸಲಾಯಿತು. ಇವೆಲ್ಲವೂ ಫಲ ನೀಡಿತು ಮತ್ತು ನಿತೀಶ್ ಮತ್ತೊಮ್ಮೆ ಸಿಎಂ ಸಿಂಹಾಸನವನ್ನು ಏರಿದ್ದಾರೆ. ಮುಂದಿನ ಐದು ವರ್ಷಗಳ ಕಾಲ ನಿತೀಶ್ ಸಿಎಂ ಆಗಿ ಮುಂದುವರಿದರೆ, ದೇಶದಲ್ಲಿ ಅತಿ ಹೆಚ್ಚು ಕಾಲ ಸಿಎಂ ಆಗಿ ಉಳಿದ ನಾಯಕ ಎಂಬ ದಾಖಲೆಯನ್ನು ನಿತೀಶ್ ಸ್ಥಾಪಿಸುತ್ತಾರೆ.
ಬಿಹಾರದ ಚುನಾವಣೆ ವಿಚಾರಕ್ಕೆ ಬರುವುದಾದರೆ, 2025ರ ನವೆಂಬರ 6ರಿಂದ 11ರವರೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಭರ್ಜರಿ ಗೆಲುವು ಸಾಧಿಸಿ, ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿ9ದೆ. ಒಟ್ಟು 243 ವಿಧಾನಸಭಾ ಸ್ಥಾನಗಳಲ್ಲಿ ಎನ್​ಡಿಎ 202 ಸ್ಥಾನಗಳನ್ನು ಗೆದ್ದುಕೊಂಡಿದೆ. ಅದರಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) 89, ಜನತಾ ದಳ (ಯುನೈಟೆಡ್) (ಜೆಡಿಯು) 85, ಲೋಕ್ ಜನಶಕ್ತಿ ಪಕ್ಷ (ರಾಮ್ ವಿಲಾಸ) 19, ಹಿಂದುಸ್ತಾನಿ ಆವಾಮ್ ಮೊರ್ಚಾ (ಸೆಕ್ಯುಲರ್) 5 ಮತ್ತು ರಾಷ್ಟ್ರೀಯ ಲೋಕ್ ಮೊರ್ಚಾ 4 ಸ್ಥಾನಗಳನ್ನು ಗೆದ್ದುಕೊಂಡಿದೆ.
ಇನ್ನು ಕಾಂಗ್ರೆಸ್​ ಹಾಗೂ ಆರ್​ಜೆಡಿ ನೇತೃತ್ವದ ಮಹಾಘಟಬಂಧನ್ (ಎಂಜಿಬಿ) ವಿಚಾರಕ್ಕೆ ಬಂದರೆ, 35 ಸ್ಥಾನಗಳೊಂದಿಗೆ ಎರಡನೇ ಸ್ಥಾನ ಪಡೆದಿದೆ. ಅದರಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) 25, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಕಾಂಗ್ರೆಸ್) 6 ಮತ್ತು ಸಿಪಿಐ(ಎಂಎಲ್) ಲಿಬರೇಷನ್ 4 ಸ್ಥಾನಗಳಲ್ಲಿ ಗೆದ್ದಿದೆ. ಗ್ರ್ಯಾಂಡ್ ಡೆಮಾಕ್ರಟಿಕ್ ಅಲೈಯನ್ಸ್ (ಜಿಡಿಎ) 15 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಅದರಲ್ಲಿ ಎಐಎಂಐಎಂ 5, ರಾಷ್ಟ್ರೀಯ ಲೋಕ್ ಜನಶಕ್ತಿ ಪಕ್ಷ 5 ಮತ್ತು ಆಜಾದ್ ಸಮಾಜ್ ಪಕ್ಷ 5 ಸ್ಥಾನಗಳನ್ನು ಪಡೆದಿದೆ. ಉಳಿದ 2 ಸ್ಥಾನಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಾರೆ. ಈ ಚುನಾವಣೆಯಲ್ಲಿ ಎನ್‌ಡಿಎ ಅಧಿಕಾರವನ್ನು ಖಚಿತಪಡಿಸಿಕೊಂಡಿದ್ದು, ನೀತಿಶ್ ಕುಮಾರ್ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿದ್ದಾರೆ, (ಏಜೆನ್ಸೀಸ್​).