Andhra Pradesh Waterfall Drowning 
ದೇಶ

ಸೆಲ್ಫಿ ಕ್ರೇಜ್ ತಂದಿಟ್ಟ ಆಪತ್ತು; ರಜಾ ದಿನ ಕಳೆಯಲು ಆಂಧ್ರದ ಜಲಪಾತಕ್ಕೆ ತೆರಳಿದ್ದ ಮೂವರು ಯುವತಿಯರು ನೀರುಪಾಲು..Andhra Selfie Death

ಪ್ರಮುಖ ಮುಖ್ಯಾಂಶಗಳು

  • ಜಲಪಾತದ ಮಧ್ಯದ ಬಂಡೆ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವಾಗ ದುರಂತ
  • ಮುಲ್ಲುಂಗುಮ್ಮಿ ಜಲಪಾತದಲ್ಲಿ ಪ್ರಾಣ ಕಳೆದುಕೊಂಡ ಮೂವರು ಯುವತಿಯರು
  • ತ್ರಿಶಾ (17), ರತ್ನಕುಮಾರಿ (16), ಪವಿತ್ರಾ (16) ಎಂಬ ಯುವತಿಯರು ಸಾವು
ಅಮರಾವತಿ: ಸೋಶಿಯಲ್​ ಮೀಡಿಯಾದಲ್ಲಿ ವ್ಯೂವ್ಸ್​, ಲೈಕ್ಸ್​ ಪಡೆದುಕೊಳ್ಳುವ ಸಲುವಾಗಿ ಕಾಂಟೆಂಟ್​ ಕ್ರಿಯೇಟರ್​ಗಳು ಚಲಿಸುವ ರೈಲು, ರಸ್ತೆಗಳ ಮಧ್ಯೆ,. ಪಾರ್ಕ್, ಜಲಪಾತ, ಬೆಟ್ಟ ಹೀಗೆ ರೀಲ್ಸ್​ ಮಾಡೋಕೆ ಸಿಗುವ ಪ್ರದೇಶದಲ್ಲೆಲ್ಲ ವಿಡಿಯೋ ಮಾಡಿ, ಸಮಸ್ಯೆಗೆ ಸಿಲಿಕೊಳ್ಳುವ ಉದಾಹರಣೆ ಇದೆ. ಇಂತಹ ಸಾಹಸಮಯ ಚಟುವಟಿಕೆಗಳಿಂದ ಸದ್ಯ ಆಂಧ್ರದಲ್ಲಿ ಮೂವರು ಪ್ರಾಣ ಕಳೆದುಕೊಂಡಿರುವ( Selfie Death Andhra Pradesh) ಘಟನೆ ಬೆಳಕಿಗೆ ಬಂದಿದೆ.
ಶಾಲಾ-ಕಾಲೇಜಿಗೆ ರಜೆ ಹಿನ್ನೆಲೆ, ಜಲಪಾತಕ್ಕೆ ತೆರಳಿದ್ದ ಮೂವರು ಯುವತಿಯರಿಗೆ ಅದರ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುವ ಹಂಬಲವಾಗಿತ್ತು. ಹೀಗೆ ಫೋನ್​ ಹಿಡಿದು ಫೋಟೋ ಕ್ಲಿಕ್ಕಿಸಿಕೊಳ್ಳುವಾಗ ಮೂವರು ಹದಿಹರೆಯದ ಹುಡುಗಿಯರು ನೀರು ಪಾಲಾದ ಘಟನೆ ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದೆ.

ಒಂದೇ ಕುಟುಂಬದ ಮೂವರು ಮೃತ

ಮೃತರನ್ನು ತ್ರಿಶಾ (17), ರತ್ನಕುಮಾರಿ (16) ಮತ್ತು ಪವಿತ್ರಾ (16) ಎಂದು ಗುರುತಿಸಲಾಗಿದೆ. ಇವರು ಹುಕುಂಪೇಟ ಮಂಡಲದ ಜಾಂಬವಲಸ ಗ್ರಾಮದ ಎಂದು ತನಿಖೆಯಿಂದ ತಿಳಿದುಬಂದಿದೆ.

ರಜಾ ದಿನ ಕಳೆಯಲು ತೆರಳಿದ್ದ ಯುವತಿಯರು

ಹಬ್ಬದ ಹಿನ್ನೆಲೆ ಮೃತ ಯುವತಿಯರು ಸೇರಿದಂತೆ ಇನ್ನಿಬ್ಬರು ಹುಡುಗಿಯರು ಹತ್ತಿರದ ಮುಲ್ಲುಂಗುಮ್ಮಿ ಜಲಪಾತಕ್ಕೆ ಪ್ರವಾಸ ಹೋಗಿದ್ದರು. ಜಲಪಾತದ ಸೌಂದರ್ಯವನ್ನು ಸವಿಯುತ್ತಾ ಫೋಟೋ ಮತ್ತು ಸೆಲ್ಫಿ ವಿಡಿಯೋಗಳನ್ನು ತೆಗೆದುಕೊಳ್ಳುತ್ತಿದ್ದಾಗ, ಮೂವರು ಹುಡುಗಿಯರು ತೊರೆಯ ಮಧ್ಯದಲ್ಲಿದ್ದ ದೊಡ್ಡ ಬಂಡೆಯೊಂದನ್ನು ಹತ್ತಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿನ ಪ್ರವಾಹಕ್ಕೆ ಬಿದ್ದಿದ್ದಾರೆ.
ಹುಡುಗಿಯರು ನೀರಿಗೆ ಬೀಳುತ್ತಿದ್ದಂತೆ ಅಲ್ಲಿದ್ದ ಸ್ಥಳೀಯರು ತಕ್ಷಣ ರಕ್ಷಿಸಲು ಧಾವಿಸಿದರೂ ಸಹ, ನೀರಿನ ಸೆಳೆತ ಹೆಚ್ಚಿದ್ದರಿಂದ ಮೂವರೂ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಉಳಿದ ಇಬ್ಬರು ಹುಡುಗಿಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂತರ ನಡೆಸಿದ ಶೋಧ ಕಾರ್ಯದಲ್ಲಿ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಮೂವರು ನೀರುಪಾಲು

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಲ್ಲೂರಿ ಜಿಲ್ಲೆಯ ಈ ಭಾಗವು ಸುಂದರ ಜಲಪಾತಗಳಿಗೆ ಹೆಸರುವಾಸಿಯಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಇಂತಹ ಸರಣಿ ಸಾವುಗಳು ಆತಂಕ ಮೂಡಿಸಿವೆ. ಅಧಿಕಾರಿಗಳ ಎಚ್ಚರಿಕೆಯನ್ನು ಮೀರಿ ಅಪಾಯಕಾರಿ ಜಾಗಗಳಲ್ಲಿ ಫೋಟೋ ತೆಗೆದುಕೊಳ್ಳಲು ಹೋಗುವುದೇ ಇಂತಹ ಅವಘಡಗಳಿಗೆ ಕಾರಣವೆಂದು ಹೇಳಲಾಗುತ್ತಿದೆ, (ಏಜೆನ್ಸೀಸ್)