Omar Abdullah | ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah) ಸೋಮವಾರ ನವದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿ ನಿಂತು ನಾಯಕತ್ವ ವಹಿಸಿದ ತಮ್ಮ ತಂದೆ, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾರನ್ನು ಶ್ಲಾಘಿಸುತ್ತಾ, ತಮ್ಮ ರಾಜಕೀಯ ಎದುರಾಳಿಗಳಿಗೆ ಟಾಂಗ್ ನೀಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಒಮರ್ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರದ ಹಕ್ಕುಗಳು ಮತ್ತು ಗೌರವಕ್ಕಾಗಿ 90 ವರ್ಷದ ವೃದ್ಧರೊಬ್ಬರು ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದ್ದರೆ, ಇನ್ನು ಕೆಲವರು ಮನೆಯಲ್ಲಿ ಕುಳಿತು ಟ್ವೀಟ್ ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿ ನವದೆಹಲಿಯ ಜಂತರ್ ಮಂತರ್‌ನಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ವೇಳೆ ಪಕ್ಷದ ನಾಯಕರು ಪ್ರತಿಭಟನಾ ಸ್ಥಳವನ್ನು ತಲುಪದಂತೆ ತಡೆಯಲಾಯಿತು ಎಂಬ ಆರೋಪಗಳ ನಡುವೆ ಒಮರ್ ಅಬ್ದುಲ್ಲಾರಿಂದ ಈ ಹೇಳಿಕೆ ಹೊರಬಿದ್ದಿದೆ.
ಆಟೋ ಏರಿದ ಒಮರ್ ಅಬ್ದುಲ್ಲಾ
ಜಂತರ್ ಮಂತರ್‌ನಿಂದ ತಾವು ಕೈಗೊಂಡ ಸರಳ ಪಾದಯಾತ್ರೆಯು ದೊಡ್ಡ ಮೆರವಣಿಗೆಯಾಗಿ ಬದಲಾಗುವ ಲಕ್ಷಣಗಳು ಕಂಡುಬಂದವು ಎಂದು ಸಿಎಂ ಅಬ್ದುಲ್ಲಾ ಹೇಳಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿ ಮತ್ತು ಜಮ್ಮು-ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಯುವ ಕಾರ್ಯಕರ್ತರು ತಮ್ಮೊಂದಿಗೆ ಸೇರಿಕೊಂಡಿದ್ದರಿಂದ ಇದು ಮತ್ತೊಂದು ದೊಡ್ಡ ಮೆರವಣಿಗೆಯಾಗಿ ಮಾರ್ಪಡುವ ಭೀತಿ ಇತ್ತು. ಸಿಕ್ಕ ಆಟೋರಿಕ್ಷಾವನ್ನು ಏರಿ ತೆರಳಿದ್ದಾಗಿ ತಮ್ಮ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಜಮ್ಮುವಿಗೆ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸಬೇಕೆಂದು ಆಗ್ರಹಿಸಿ ನ್ಯಾಷನಲ್ ಕಾನ್ಫರೆನ್ಸ್ ನಡೆಸುತ್ತಿದ್ದ ಪ್ರತಿಭಟನೆಯನ್ನು ಹತೋಟಿಗೆ ತರಲು ಕೇಂದ್ರ ಸರ್ಕಾರ ಯತ್ನಿಸಿದೆ ಎಂದು ಒಮರ್ ಅಬ್ದುಲ್ಲಾ ಆರೋಪಿಸಿದ್ದಾರೆ. ಆದರೆ ಇಂತಹ ಕ್ರಮಗಳು ಜಮ್ಮು ಮತ್ತು ಕಾಶ್ಮೀರದ ಹಕ್ಕು ಮತ್ತು ಗೌರವಕ್ಕಾಗಿ ನಡೆಯುತ್ತಿರುವ ಹೋರಾಟವನ್ನು ತಡೆಯಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಹಾಗೂ ಸಾಂವಿಧಾನಿಕ ಹಕ್ಕುಗಳ ಮರುಸ್ಥಾಪನೆಗಾಗಿ ಈ ಚಳವಳಿ ಈಗಷ್ಟೇ ಪ್ರಾರಂಭವಾಗಿದೆ ಎಂದಿರುವ ಅಬ್ದುಲ್ಲಾ, ಪ್ರತಿಭಟನೆಯ ವೇಳೆ ಎದುರಾದ ಅಡೆತಡೆಗಳ ಕುರಿತು ಉಲ್ಲೇಖಿಸುತ್ತಾ, ಪಕ್ಷದ ನಾಯಕರನ್ನು ಪ್ರತಿಭಟನಾ ಸ್ಥಳ ತಲುಪದಂತೆ ತಡೆಯಲಾಗಿತ್ತು ಎಂದು ದೂರಿದ್ದಾರೆ. ನಮ್ಮ ಹಕ್ಕಿಗಾಗಿ ಶಾಂತಿಯುತವಾಗಿ ಪ್ರತಿಭಟಿಸಲು ಜಂತರ್ ಮಂತರ್‌ಗೆ ತೆರಳದಂತೆ ನಮ್ಮನ್ನು ತಡೆಯಲಾಯಿತು. ಆದರೆ ನಮ್ಮ ಧ್ವನಿಯನ್ನು ಅಡಗಿಸಲು ಸಾಧ್ಯವಾಗಿಲ್ಲ. ರಾಜ್ಯದ ದರ್ಜೆ, ನಮ್ಮ ಹಕ್ಕುಗಳು, ನಮ್ಮ ಗೌರವ ಮತ್ತು ನಮ್ಮಿಂದ ಕಸಿದುಕೊಳ್ಳಲಾದ ಪ್ರತಿಯೊಂದನ್ನೂ ಮರಳಿ ಪಡೆಯಲು ನಡೆಯುತ್ತಿರುವ ಈ ಹೋರಾಟಕ್ಕೆ ಇದು ಆರಂಭವಷ್ಟೇ ಎಂದು ಅವರು ತಿಳಿಸಿದ್ದಾರೆ(ಏಜೆನ್ಸೀಸ್).