ಪಾಕ್ ಪ್ರಧಾನಿ ಹೇಳಿಕೆ ಟೀಕಿಸಿದ ಒಮರ್ ಅಬ್ದುಲ್ಲಾ
- ಮುಂದಿನ ದಿನಗಳಲ್ಲಿ ಕಾಶ್ಮೀರ ನಮ್ಮದು ಎಂದ ಪಾಕ್ ಪ್ರಧಾನಿ
- ಶೆಹಬಾಜ್ ಷರೀಫ್ ಹೇಳಿಕೆಗೆ ಕಾಶ್ಮೀರ ಸಿಎಂ ವ್ಯಂಗ್ಯ
- ಮುಖಕ್ಕೆ ಹೊಡೆದಂತೆ ಉತ್ತರ ಕೊಟ್ಟ ಒಮರ್ ಅಬ್ದುಲ್ಲಾ
ನವದೆಹಲಿ: ಇತ್ತೀಚೆಗಷ್ಟೇ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ಶೀಘ್ರವೇ ಕಾಶ್ಮೀರ ಪಾಕ್ ಭಾಗವಾಗಲಿದೆ ಎಂದು ಹೇಳುವ ಮೂಲಕ ಮತ್ತೊಮ್ಮೆ ನಾಲಿಗೆ ಹರಿಬಿಟ್ಟು ಭಾರತದೊಂದಿಗೆ ಹೊಸ ಉದ್ವಿಗ್ನತೆ ಹುಟ್ಟುಹಾಕಿದ್ದಾರೆ. ಪಾಕ್ ಪ್ರಧಾನಿಯ ಹುಚ್ಚು ಮಾತಿಗೆ ಪ್ರತಿಕ್ರಿಯಿಸಿರುವ ಜಮ್ಮು-ಕಾಶ್ಮೀರ ಸಿಎಂ, ಇದೀಗ ಮುಟ್ಟಿ ನೋಡುಕೊಳ್ಳುವಂತೆ ಉತ್ತರಿಸಿದ್ದಾರೆ.
ಕಾಶ್ಮೀರ ಪಾಕಿಸ್ತಾನದ ಜೀವನಾಡಿ. ಮತ್ತು ಮುಂದೊಂದು ದಿನ ಅದು ಪಾಕ್ ಭಾಗವಾಗಲಿದೆ ಎಂದು ಷರೀಷ್ ಹೇಳಿದರು. ಈ ಹೇಳಿಕೆಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ಕೊಟ್ಟಿರುವ ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ, "ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ (ಪಿಒಕೆ) ಅನ್ನೇ ಅವರಿಂದ ನೋಡಿಕೊಳ್ಳಲು ಆಗ್ತಿಲ್ಲ. ಹೀಗಿರುವಾಗ ಕಾಶ್ಮೀರ ಬೇಕೇ? ಮೊದಲು ತಮ್ಮಲ್ಲಿರುವದನ್ನು ಸರಿಯಾಗಿ ನಿರ್ವಹಿಸದ ನೀವು, ಇನ್ನೂ ನಮ್ಮೊಂದಿಗೆ ಏನು ಮಾಡಲು ಸಾಧ್ಯ ಹೇಳಿ?" ಎಂದು ಟೀಕಿಸಿದ್ದಾರೆ.
ಸಿಂಧೂ ಒಪ್ಪಂದ ಬಗ್ಗೆ ಪ್ರತಿಕ್ರಿಯೆ
ಸಿಂಧೂ ಜಲ ಒಪ್ಪಂದವನ್ನು (ಐಡಬ್ಲ್ಯೂಟಿ) ಸ್ಥಗಿತಗೊಳಿಸುವುದರಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಏನಾದರೂ ಪ್ರಯೋಜನವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಬ್ದುಲ್ಲಾ, "ಒಪ್ಪಂದ ಸ್ಥಗಿತಗೊಂಡಿದೆ. ಆದರೆ, ನಮಗೆ ಇನ್ನೂ ಯಾವುದೇ ಪ್ರಯೋಜನವಾಗಿಲ್ಲ. ರಾಟ್ಲೆ, ಪಕಲ್ ದುಲ್ ಮತ್ತು ಇತರ ಯೋಜನೆಗಳಂತಹ ನಡೆಯುತ್ತಿರುವ ಯೋಜನೆಗಳು ವಿನ್ಯಾಸ, ವ್ಯಾಪ್ತಿ ಅಥವಾ ನೀರಿನ ಸಂಗ್ರಹ ಸಾಮರ್ಥ್ಯದಲ್ಲಿ ಬದಲಾವಣೆಗಳನ್ನು ಕಾಣುವುದಿಲ್ಲ, ಆದ್ದರಿಂದ ವಿದ್ಯುತ್ ಉತ್ಪಾದನೆಯ ಮೇಲೆ ಸದ್ಯ ಯಾವುದೇ ಪರಿಣಾಮ ಬೀರುವುದಿಲ್ಲ" ಎಂದು ಹೇಳಿದ್ದಾರೆ,(ಏಜೆನ್ಸೀಸ್).