Vande Mataram | ಕಾಂಗ್ರೆಸ್ ವಿರೋಧದ ನಡುವೆಯೂ ದಿಟ್ಟ ನಿಲುವು ತಳೆದ ಒಮರ್ ಅಬ್ದುಲ್ಲಾ!  
ದೇಶ

ವಂದೇ ಮಾತರಂ ಗೌರವಿಸುವುದು ಸಾಂವಿಧಾನಿಕ ಕರ್ತವ್ಯ!...ಕಾಂಗ್ರೆಸ್ ವಿರೋಧದ ನಡುವೆಯೂ ದಿಟ್ಟ ನಿಲುವು ತಳೆದ ಒಮರ್ ಅಬ್ದುಲ್ಲಾ! | Vande Mataram

ಶ್ರೀನಗರ: ವಂದೇ ಮಾತರಂ ( Vande Mataram) ಗೀತೆ ಹಾಡುವ ವಿಚಾರದಲ್ಲಿ ಕಾಂಗ್ರೆಸ್ ತಳೆದಿರುವ ನಿಲುವಿನಿಂದ ಅಂತರ ಕಾಯ್ದುಕೊಂಡಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆಯನ್ನು ಗಾಯನ ಮಾಡುವುದು ಸಾಂವಿಧಾನಿಕ ಬದ್ಧತೆಯಾಗಿದೆ ಮತ್ತು ಈ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ತಾವು ಬಯಸುವುದಿಲ್ಲ ಎಂದು ಗುರುವಾರ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಅಬ್ದುಲ್ಲಾ, ಒಂದು ವೇಳೆ ಕಾಂಗ್ರೆಸ್ ಪಕ್ಷವೇ ಮರಳಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಈ ಕಾನೂನನ್ನು ಹಿಂಪಡೆಯಬಹುದು, ಆಗ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಕಾಂಗ್ರೆಸ್‌ಗೆ ಬೆಂಬಲ ನೀಡಲು ಸಂತೋಷಪಡುತ್ತದೆ ಎಂದರು. ಇದೇ ವೇಳೆ ಕಾಂಗ್ರೆಸ್ ನಡೆಯನ್ನು ಟೀಕಿಸಿದ ಅವರು, ಸಂಸತ್ತಿನಲ್ಲಿ ಈ ಮಸೂದೆಯನ್ನು ಮಂಡಿಸಿದಾಗಲೇ ಕಾಂಗ್ರೆಸ್ ಪಕ್ಷವು ಇದನ್ನು ವಿರೋಧಿಸಬೇಕಿತ್ತು ಎಂದು ಹೇಳಿದರು.

ವಂದೇ ಮಾತರಂ ಗೀತೆ ಕಡ್ಡಾಯ ಎಂದ ಅಬ್ದುಲ್ಲಾ!

ಕಾಂಗ್ರೆಸ್ ನಾಯಕರು ಈ ಕಾನೂನನ್ನು ಸಂಸತ್ತಿನಲ್ಲೇ ತಡೆಯಬಹುದಿತ್ತು. ಆದರೆ ಈಗ ಕಾನೂನು ಈಗಾಗಲೇ ಜಾರಿಯಲ್ಲಿದೆ. ಇಬ್ಬರು ರಾಜ್ಯಪಾಲರು, ಓರ್ವ ಉಪರಾಜ್ಯಪಾಲರು ಹಾಗೂ ನಮ್ಮ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಭಾಗವಹಿಸುವ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಪ್ರಸಾರವಾಗುವುದು ಸಹಜ. ಪ್ರಸ್ತುತ ಚಾಲ್ತಿಯಲ್ಲಿರುವ ಕಾನೂನಿನ ಪ್ರಕಾರ, ಎಲ್ಲಿ ರಾಷ್ಟ್ರಗೀತೆ ಪ್ರಸಾರವಾಗುತ್ತದೆಯೋ ಅಲ್ಲಿ ವಂದೇ ಮಾತರಂಗೂ ನಿಗದಿಪಡಿಸಿದ ಮಾನದಂಡಗಳನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದು ವಿವರಿಸಿದರು.
ಹೀಗಿರುವಾಗ ಕಾಂಗ್ರೆಸ್ ಪಕ್ಷಕ್ಕೆ ಏನು ಬೇಕಾಗಿದೆ..? ಇದು ಕಾನೂನುಬದ್ಧವಾಗಿ ಅನುಸರಿಸಬೇಕಾದ ಸಾಂವಿಧಾನಿಕ ಕರ್ತವ್ಯ. ಮುಂದೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂಸತ್ತಿನಲ್ಲಿ ಈ ಕಾನೂನನ್ನು ರದ್ದುಗೊಳಿಸಬಹುದು. ಅದಕ್ಕೆ ನಮಗೆ ಯಾವುದೇ ಅಭ್ಯಂತರವಿಲ್ಲ. ನಮ್ಮ ಪಕ್ಷವಾಗಿ ನಾವು ಎಂದಿಗೂ ವಂದೇ ಮಾತರಂ ಅನ್ನು ಒಪ್ಪಿಕೊಂಡಿಲ್ಲ, ಆದರೆ ಸಾಂವಿಧಾನಿಕ ಬದ್ಧತೆಗಳನ್ನು ಪೂರೈಸುವುದು ನಮ್ಮ ಕರ್ತವ್ಯ ಎಂದು ಅವರು ತಿಳಿಸಿದರು. ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದರೂ, ಸೋಮವಾರ ಜಮ್ಮು ಮತ್ತು ಕಾಶ್ಮೀರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹಾಗೂ ಫಾರೂಕ್ ಅಬ್ದುಲ್ಲಾ ಅವರ ಸಮ್ಮುಖದಲ್ಲೇ ವಂದೇ ಮಾತರಂ ಪೂರ್ಣ ಗೀತೆಯನ್ನು ನುಡಿಸಿದ ನಂತರ ಉಭಯ ಪಕ್ಷಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ.
ಈ ಘಟನೆಯನ್ನು ಖಂಡಿಸಿದ ಕಾಂಗ್ರೆಸ್, 1937ರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿರ್ಣಯದಂತೆ ವಂದೇ ಮಾತರಂ ಗೀತೆಯ ಮೊದಲ ಎರಡು ಸಾಲುಗಳನ್ನು ಮಾತ್ರ ಹಾಡಬೇಕು ಮತ್ತು ಇಂಡಿಯಾ ಮೈತ್ರಿಕೂಟದ ಪಾಲುದಾರರು ಈ ನಿರ್ಣಯಕ್ಕೆ ಗೌರವ ನೀಡಬೇಕು ಎಂದು ಪ್ರತಿಪಾದಿಸಿತ್ತು. ಪ್ರಸ್ತುತ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲೂ ಸಹ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲಾಗುವುದು ಎಂದು ರಾಜ್ಯ ಸರ್ಕಾರ ಇಂದು ಘೋಷಿಸಿದೆ.
ನ್ಯಾಷನಲ್ ಕಾನ್ಫರೆನ್ಸ್ ನಾಯಕರು ಸರ್ಕಾರದ ಅಧಿಕೃತ ಶಿಷ್ಟಾಚಾರಗಳಿಂದ ಪಕ್ಷದ ಸಿದ್ಧಾಂತವನ್ನು ದೂರವಿಡಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ವಂದೇ ಮಾತರಂ ಹಾಡಲು ಬಯಸುವ ಯಾರೇ ಆದರೂ ಅದನ್ನು ಹಾಡಬಹುದು, ಯಾರನ್ನೂ ಬಲವಂತಪಡಿಸಲಾಗುವುದಿಲ್ಲ ಎಂದೂ ಎನ್‌ಸಿ ನಾಯಕರು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ 90 ಸದಸ್ಯರ ವಿಧಾನಸಭೆಯಲ್ಲಿ 6 ಶಾಸಕರನ್ನು ಹೊಂದಿದ್ದು, ಅಬ್ದುಲ್ಲಾ ಸರ್ಕಾರಕ್ಕೆ ಹೊರಗಿನಿಂದ ಬಾಹ್ಯ ಬೆಂಬಲ ನೀಡುತ್ತಿರುವ ಕಾಂಗ್ರೆಸ್‌ಗೆ ಸಿಎಂ ಈ ಹೇಳಿಕೆ ತೀವ್ರ ಅಸಮಾಧಾನ ತಂದಿದೆ.

ಸಂಪೂರ್ಣ ವಂದೇ ಮಾತರಂ ಹಾಡದಿರಲು ಕಾಂಗ್ರೆಸ್ ನಿರ್ಧಾರ

ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ 88 ಹಿರಿಯ ಪಕ್ಷದ ನಾಯಕರು ಭಾಗವಹಿಸಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (CWC) ಇತ್ತೀಚಿನ ಸಭೆಯ ನಂತರ ಈ ವಿವಾದ ಭುಗಿಲೆದ್ದಿದೆ. ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಪ್ರಕಾರ, ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಅನ್ನು ಹಿಂದಿನಂತೆಯೇ, ಅಂದರೆ ಕೇವಲ ಮೊದಲ ಎರಡು ಪ್ಯಾರಾಗಳನ್ನು ಮಾತ್ರ ಹಾಡಲಾಗುವುದು. ಪಕ್ಷದ ಕಾರ್ಯಕ್ರಮಗಳಲ್ಲಿ ಸಂಪೂರ್ಣ ರಾಷ್ಟ್ರೀಯ ಗೀತೆಯನ್ನು ಹಾಡುವುದಿಲ್ಲ ಎಂದು ನಿರ್ಧರಿಸಲಾಗಿದೆ.

ವಂದೇ ಮಾತರಂ ರಾಜಕೀಯ ವಿವಾದವಾಗಿದ್ದೇಕೆ..?

ಬಂಕಿಮ್ ಚಂದ್ರ ಚಟರ್ಜಿ ಅವರು ಬರೆದ ವಂದೇ ಮಾತರಂ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಐತಿಹಾಸಿಕವಾಗಿ ಪ್ರಮುಖ ಸ್ಥಾನವನ್ನು ಹೊಂದಿದೆ. ಈ ಗೀತೆಯು ರಾಷ್ಟ್ರೀಯ ಚಳವಳಿಯ ಪ್ರಬಲ ಸಂಕೇತವಾಗಿ ಮಾರ್ಪಟ್ಟಿತ್ತು ಮತ್ತು ಇಂದಿಗೂ ಭಾರತದ ರಾಷ್ಟ್ರೀಯ ಜೀವನದಲ್ಲಿ ಪ್ರಮುಖ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ರಾಜಕೀಯ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಈ ಗೀತೆಯ ಸಂಪೂರ್ಣ ಆವೃತ್ತಿಯನ್ನು ಎಷ್ಟರಮಟ್ಟಿಗೆ ಹಾಡಬೇಕು ಎಂಬುದರ ಸುತ್ತ ಈಗಿನ ವಿವಾದ ಕೇಂದ್ರೀಕೃತವಾಗಿದೆ. ಸಂಪೂರ್ಣ ಗೀತೆಯನ್ನು ಹಾಡುವುದನ್ನು ಬೆಂಬಲಿಸುವವರು ರಾಷ್ಟ್ರೀಯ ಗೀತೆಯನ್ನು ಅದರ ಸಂಪೂರ್ಣ ರೂಪದಲ್ಲಿ ಗೌರವಿಸಬೇಕು ಎಂದು ವಾದಿಸುತ್ತಿದ್ದರೆ, ಕಾಂಗ್ರೆಸ್ ಮಾತ್ರ ತನ್ನ ಪಕ್ಷದ ಕಾರ್ಯಕ್ರಮಗಳಲ್ಲಿ ಕೇವಲ ಮೊದಲ ಎರಡು ನುಡಿಗಳನ್ನು ಹಾಡುವ ತನ್ನ ಹಳೆಯ ಪದ್ಧತಿಯನ್ನೇ ಉಳಿಸಿಕೊಳ್ಳಲು ನಿರ್ಧರಿಸಿದೆ(ಏಜೆನ್ಸೀಸ್​).