220 ಕಿ.ಮೀ ವೇಗ... ಕಂಠಪೂರ್ತಿ ಕುಡಿದು ಮೂವರನ್ನು ಬಲಿಪಡೆದ ಕಾರು ಚಾಲಕನ ಹಳೆಯ ವಿಡಿಯೋ ವೈರಲ್ 
ದೇಶ

220 ಕಿ.ಮೀ ವೇಗ... ಕಂಠಪೂರ್ತಿ ಕುಡಿದು ಮೂವರನ್ನು ಬಲಿಪಡೆದ ಕಾರು ಚಾಲಕನ ಹಳೆಯ ವಿಡಿಯೋ ವೈರಲ್ | Mini Cooper Accident​

ಭವಿಷ್ಯದ ದೊಡ್ಡ ಕನಸುಗಳನ್ನು ಹೊತ್ತು ಸಾಗುತ್ತಿದ್ದ ಈ ಮೂವರ ಜೀವ ಈತನ ವೇಗದ ಹುಚ್ಚಾಟಕ್ಕೆ ಕೆಲವೇ ಸೆಕೆಂಡುಗಳಲ್ಲಿ ಕಮರಿಹೋಗಿದ್ದು ಹೆತ್ತವರ ಹೃದಯವನ್ನು ಚೂರಾಗಿಸಿದೆ.

ಕೊಚ್ಚಿ: ಕೇರಳದ ನೆಡುಂಬಸ್ಸೆರಿಯ ಅಥಾಣಿ ಬಳಿ ನಡೆದ ಭೀಕರ ಮಿನಿ ಕೂಪರ್​ ಕಾರು ಅಪಘಾತದಲ್ಲಿ (Mini Cooper Accident ) ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿ ವಾಹನ ಚಾಲನೆ ಮಾಡಿದ ಯುವಕನೊಬ್ಬ, ಬೈಕ್​ನಲ್ಲಿ ಸಾಗುತ್ತಿದ್ದ ಮೂವರು ವಿದ್ಯಾರ್ಥಿಗಳ ಜೀವವನ್ನು ಬಲಿ ಪಡೆದ ದಾರುಳ ಘಟನೆ ಸದ್ಯ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಈಗಾಗಲೇ ಆರೋಪಿಯನ್ನು ಅರೆಸ್ಟ್​ ಮಾಡಿರುವ ಪೊಲೀಸರಿಗೆ ಹಳೆಯ ವಿಡಿಯೋವೊಂದು ಸಿಕ್ಕಿದ್ದು, ಈತನ ಹುಚ್ಚಾಟ ಇದೇ ಮೊದಲೇನಲ್ಲ ಎಂಬುದು ಗೊತ್ತಾಗಿದೆ.

ನೆಡುಂಬಸ್ಸೆರಿಯ ಅಥಾಣಿ ಪ್ರದೇಶದಲ್ಲಿ ನಡೆದ ಭೀಕರ ಅಪಘಾತದಲ್ಲಿ ದೇವಿಕಾ, ಗೋಪಿಕಾ ಮತ್ತು ಇಜಾಜ್ ಎಂಬ ಮೂವರು ದುರ್ಮರಣಕ್ಕೀಡಾಗಿದ್ದಾರೆ. ಎಲ್ಲರಿಗೂ ಕೇವಲ 21 ವರ್ಷ ವಯಸ್ಸಾಗಿದ್ದು, ಅತ್ತ ಏವಿಯೇಷನ್ (ವಿಮಾನಯಾನ) ಅಭ್ಯಾಸ ಮಾಡುತ್ತ, ಇತ್ತ ತ್ರಿಕ್ಕಾಕರದ ಆಂಟಿಕ್ ಅಂಗಡಿಯಲ್ಲಿ ಪಾರ್ಟ್-ಟೈಮ್ ಕೆಲಸ ಮಾಡುತ್ತಿದ್ದರು. ಭವಿಷ್ಯದ ದೊಡ್ಡ ಕನಸುಗಳನ್ನು ಹೊತ್ತು ಸಾಗುತ್ತಿದ್ದ ಈ ಮೂವರ ಜೀವ ಈತನ ವೇಗದ ಹುಚ್ಚಾಟಕ್ಕೆ ಕೆಲವೇ ಸೆಕೆಂಡುಗಳಲ್ಲಿ ಕಮರಿಹೋಗಿದ್ದು ಹೆತ್ತವರ ಹೃದಯವನ್ನು ಚೂರಾಗಿಸಿದೆ.

220 ಕಿ.ಮೀ ವೇಗ... ಕಂಠಪೂರ್ತಿ ಕುಡಿದು ಮೂವರನ್ನು ಬಲಿಪಡೆದ ಕಾರು ಚಾಲಕನ ಹಳೆಯ ವಿಡಿಯೋ ವೈರಲ್

ಮೂರು ಬಾರ್‌ಗಳಲ್ಲಿ ಕುಡಿತ

ಅಪಘಾತದ ಸಮಯದಲ್ಲಿ ಆರೋಪಿ ಕಂಠಪೂರ್ತಿ ಕುಡಿದಿದ್ದರು. ಶನಿವಾರ ಮಧ್ಯಾಹ್ನ ಮದ್ಯಪಾನ ಆರಂಭಿಸಿದ್ದ ಈತ, ಅಪಘಾತಕ್ಕೂ ಮೊದಲು ಮೂರು ಬಾರ್‌ಗಳಲ್ಲಿ ಮದ್ಯ ಸೇವಿಸಿದ್ದ. ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಕಾರನ್ನು ಓಡಿಸುತ್ತಿದ್ದ ಎಂಬುದು ಸ್ಪಷ್ಟವಾಗಿದೆ. ಈ ವೇಗ ಇನ್ನೂ ಹೆಚ್ಚಿರಬಹುದು ಎಂದು ತನಿಖಾ ತಂಡ ಮಾಹಿತಿ ಹಂಚಿಕೊಂಡಿದೆ ಎಂದು ಖಾಕಿ ಪಡೆ ತಿಳಿಸಿದೆ.

ಹಳೇ ವಿಡಿಯೋ ವೈರಲ್​

ಈ ಘಟನೆ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಯ ಹಳೆಯ ವಿಡಿಯೋವೊಂದು ಹರಿದಾಡುತ್ತಿದೆ. ಸುಹೈಲ್ ಬಹಳ ದಿನಗಳಿಂದ ಆಸೆ ಪಟ್ಟಿದ್ದ ಮಿನಿ ಕೂಪರ್ ಕಾರನ್ನು ಕೊಡಿಸಿದ್ದ ಬಗ್ಗೆ ಆತನ ತಾಯಿ ಜತೆ ಸಂತೋಷದಿಂದ ಮಾತನಾಡುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಇದರೊಟ್ಟಿಗೆ ಇನ್ನಷ್ಟು ವಿಡಿಯೋಗಳು ಸಿಕ್ಕಿದ್ದು, ಸುಹೇಲ್ ಕಾರನ್ನು 200ರಿಂದ 220 ಕಿ.ಮೀ ವೇಗದಲ್ಲಿ ಚಾಲನೆ ಮಾಡುತ್ತಿರುವುದನ್ನು ಬಲವಾದ ಸಾಕ್ಷಿಯಾಗಿ ಪೊಲೀಸರಿಗೆ ಸಿಕ್ಕಿವೆ.

ಆರೋಪಿಯ ದುರಂಹಕಾರ!

ಅಪಘಾತವೆಸಗಿ ಮೂವರ ಸಾವಿಗೆ ಕಾರಣನಾದ ಬಳಿಕವೂ ಕಿಂಚಿತ್ತು ಪಶ್ಚಾತಾಪ ಪಡದ ಸುಹೈಲ್, ಸ್ಥಳದಲ್ಲಿದ್ದವರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಅಲ್ಲದೆ, "ನನ್ನ ತಂದೆ ಎಲ್ಲವನ್ನೂ ನೋಡಿಕೊಳ್ಳುತ್ತಾರೆ" ಎಂದು ದೌಲತ್ತಿನ ಮಾತುಗಳಾಡಿದ್ದಾನೆ. ಆರೋಪಿ ಸುಹೈಲ್ ಸಜೀವ್, ಪ್ರಸಿದ್ಧ ಇಹಾ ಡಿಸೈನ್ಸ್ ಬಟ್ಟೆ ಬ್ರ್ಯಾಂಡ್‌ನ ಮಾಲೀಕರಾದ ಸಜೀವ್ ಜಮಾಲ್ ಹಾಗೂ ನುಹಾ ಸಜೀವ್ ದಂಪತಿಯ ಪುತ್ರ. ಅಲಾಪುಳ ಮತ್ತು ಕೊಚ್ಚಿಯಲ್ಲಿ ದೊಡ್ಡ ಮಟ್ಟದ ಜವಳಿ ವ್ಯವಹಾರ ಹೊಂದಿರುವ ಇವರ ಕುಟುಂಬ, ಕಾಕ್ಕನಾಡ್‌ನ ಗೋಲ್ಡ್ ಟವರ್ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದೆ ಎಂದು ವರದಿಗಳು ಉಲ್ಲೇಖಿಸಿವೆ,(ಏಜೆನ್ಸೀಸ್).