OilCrisis  
ದೇಶ

ತೈಲ ಲೋಕ ಅಲ್ಲೋಲ ಕಲ್ಲೋಲ.. 150 ಡಾಲರ್‌ಗೆ ಏರಲಿದೆಯೇ ಕಚ್ಚಾ ತೈಲ? ಕತಾರ್ ನೀಡಿತು ಎಚ್ಚರಿಕೆ..!

ನವದೆಹಲಿ/ದೋಹಾ: ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಯುದ್ಧವು ಈಗ ಜಾಗತಿಕ ಇಂಧನ ಬಿಕ್ಕಟ್ಟನ್ನು ಸೃಷ್ಟಿಸಿದೆ. ಯುದ್ಧದ ಏಳನೇ ದಿನಕ್ಕೆ ಕಾಲಿಡುತ್ತಿದ್ದಂತೆ, ಮಧ್ಯಪ್ರಾಚ್ಯದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರವಾದ ಕತಾರ್, ಇಡೀ ಜಗತ್ತಿಗೆ ಎಚ್ಚರಿಕೆಯೊಂದನ್ನು ನೀಡಿದೆ. ಒಂದು ವೇಳೆ ಸಂಘರ್ಷ ಹೀಗೇ ಮುಂದುವರಿದರೆ, ಕೇವಲ 2-3 ವಾರಗಳಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್‌ಗೆ 150 ಡಾಲರ್ ($150) ತಲುಪಲಿದೆ ಎಂದು ಕತಾರ್ ಇಂಧನ ಸಚಿವ ಸಾದ್ ಅಲ್-ಕಾಬಿ ಭವಿಷ್ಯ ನುಡಿದಿದ್ದಾರೆ.
ಜಗತ್ತಿಗೆ ಕಾದಿದೆ ಗಂಡಾಂತರ!
ವಿಶ್ವದ ಒಟ್ಟು ತೈಲ ಮತ್ತು ಅನಿಲ ರಫ್ತಿನ ಶೇಕಡಾ 20ರಷ್ಟು ಪಾಲು 'ಹೋರ್ಮುಜ್ ಜಲಸಂಧಿ' (Strait of Hormuz) ಮೂಲಕ ಸಾಗುತ್ತದೆ. ಇರಾನ್ ಮತ್ತು ಒಮಾನ್ ನಡುವಿನ ಈ ಕಿರಿದಾದ ಜಲಮಾರ್ಗವು ಯುದ್ಧದ ಕಾರಣದಿಂದಾಗಿ ಈಗ ಬಹುತೇಕ ಮುಚ್ಚಲ್ಪಟ್ಟಿದೆ. ಟ್ಯಾಂಕರ್‌ಗಳ ಸಂಚಾರ ಸ್ಥಗಿತಗೊಂಡಿರುವುದರಿಂದ ಕಚ್ಚಾ ತೈಲದ ಬೆಲೆ ಈಗಾಗಲೇ ಶೇ. 2.53 ರಷ್ಟು ಏರಿಕೆಯಾಗಿ 87.57 ಡಾಲರ್‌ಗೆ ತಲುಪಿದೆ.
"ಯುದ್ಧ ಮುಂದುವರಿದರೆ ಮಧ್ಯಪ್ರಾಚ್ಯದ ಎಲ್ಲಾ ದೇಶಗಳು ತೈಲ ರಫ್ತನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗುತ್ತದೆ. ಇದು ಜಾಗತಿಕ ಜಿಡಿಪಿ (GDP) ಮೇಲೆ ಭೀಕರ ಪರಿಣಾಮ ಬೀರಲಿದ್ದು, ಕಾರ್ಖಾನೆಗಳು ಕಚ್ಚಾ ವಸ್ತುಗಳಿಲ್ಲದೆ ಮುಚ್ಚಲ್ಪಡುತ್ತವೆ," ಎಂದು ಕತಾರ್ ಎನರ್ಜಿ ಸಿಇಒ ಎಚ್ಚರಿಸಿದ್ದಾರೆ.
ಕತಾರ್‌ನಲ್ಲಿ ಉತ್ಪಾದನೆ ಸ್ಥಗಿತ!
ವಿಶ್ವದ ಶೇ. 20ರಷ್ಟು ದ್ರವೀಕೃತ ನೈಸರ್ಗಿಕ ಅನಿಲ (LNG) ಪೂರೈಸುವ ಕತಾರ್, ತನ್ನ ಪ್ರಮುಖ ಕೈಗಾರಿಕಾ ಕೇಂದ್ರಗಳಾದ ರಾಸ್ ಲಫ್ಫಾನ್ ಮತ್ತು ಮೆಸಾಯೀಡ್ ಮೇಲೆ ಇರಾನ್ ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಇದು ಜಾಗತಿಕವಾಗಿ ಅನಿಲದ ಕೊರತೆಯನ್ನು ಸೃಷ್ಟಿಸಲಿದ್ದು, ವಿದ್ಯುತ್ ಮತ್ತು ಇಂಧನ ದರಗಳು ಗಗನಕ್ಕೇರುವ ಸಾಧ್ಯತೆಯಿದೆ.
ಭಾರತದ ಸ್ಥಿತಿ ಏನು? ಆತಂಕ ಬೇಡ ಎಂದ ಸರ್ಕಾರ
ಜಾಗತಿಕವಾಗಿ ತೈಲ ಬಿಕ್ಕಟ್ಟು ಎದುರಾಗಿದ್ದರೂ, ಭಾರತದ ಸ್ಥಿತಿ ಸದ್ಯಕ್ಕೆ ಸುಭದ್ರವಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಭಾರತದ ಬಳಿ ತುರ್ತು ಪರಿಸ್ಥಿತಿಯನ್ನು ಎದುರಿಸಲು ಬೇಕಾದಷ್ಟು ಕಚ್ಚಾ ತೈಲ ಮತ್ತು ಅನಿಲದ ಮೀಸಲು ಸಂಗ್ರಹವಿದೆ. ದೇಶದ ಎಲ್ಲಾ ರಿಫೈನರಿಗಳಿಗೆ ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸಲು ಸೂಚಿಸಲಾಗಿದೆ. ಹೋರ್ಮುಜ್ ಜಲಸಂಧಿಯ ಮೇಲೆ ಅವಲಂಬಿತವಾಗದೆ, ಇತರ ರಾಷ್ಟ್ರಗಳಿಂದ ತೈಲ ಆಮದು ಮಾಡಿಕೊಳ್ಳಲು ಭಾರತ ಮಾತುಕತೆ ನಡೆಸುತ್ತಿದೆ.
ಅಮೆರಿಕದಿಂದ ಭಾರತಕ್ಕೆ ವಿಶೇಷ ರಿಯಾಯಿತಿ!
ಇದೇ ವೇಳೆ, ಅಮೆರಿಕದ ಟ್ರಂಪ್ ಆಡಳಿತವು ಭಾರತಕ್ಕೆ ದೊಡ್ಡ ಸಮಾಧಾನಕರ ಸುದ್ದಿ ನೀಡಿದೆ. ಸಮುದ್ರದ ಮಧ್ಯದಲ್ಲಿ ಸಿಲುಕಿರುವ ರಷ್ಯಾದ ತೈಲವನ್ನು ಖರೀದಿಸಲು ಭಾರತೀಯ ಕಂಪನಿಗಳಿಗೆ ಅಮೆರಿಕ 30 ದಿನಗಳ ಕಾಲ ವಿಶೇಷ ರಿಯಾಯಿತಿ ನೀಡಿದೆ. "ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಪೂರೈಕೆ ನಿರಂತರವಾಗಿರಲಿ ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ" ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ತಿಳಿಸಿದ್ದಾರೆ,(ಏಜೆನ್ಸೀಸ್).