Flipkart Fraud (ಸಾಂದರ್ಭಿಕ ಚಿತ್ರ)
ಮುಂಬೈ: ಆನ್‌ಲೈನ್‌ನಲ್ಲಿ ಬೆಲೆಬಾಳುವ ಆಪಲ್ ಐಫೋನ್ (Apple iPhone) ಬುಕ್ ಮಾಡಿದ್ದ ಗ್ರಾಹಕನಿಗೆ ಮೊಬೈಲ್ ಬದಲಿಗೆ ಗಡ್ಡದ ಬೆಳವಣಿಗೆಗೆ ಬಳಸುವ ಎಣ್ಣೆಯ ಬಾಟಲಿಯನ್ನು ಕಳುಹಿಸಿ ವಂಚಿಸಿದ್ದ ಫ್ಲಿಪ್‌ಕಾರ್ಟ್ (Flipkart Fraud) ಹಾಗೂ ಅದರ ಮಾರಾಟಗಾರರಿಗೆ ಗ್ರಾಹಕ ನ್ಯಾಯಾಲಯವು 1.11 ಲಕ್ಷಕ್ಕೂ ಹೆಚ್ಚಿನ ಹಣವನ್ನು ಮರುಪಾವತಿಸುವಂತೆ ಆದೇಶ ನೀಡಿದೆ.
ಪ್ರಕರಣ ಏನು?
ಮುಂಬೈನ ಪೊವಾಯ್ ನಿವಾಸಿಯೊಬ್ಬರು ಏಪ್ರಿಲ್ 22, 2023 ರಂದು ಫ್ಲಿಪ್‌ಕಾರ್ಟ್ ಮೂಲಕ ನೋ-ಕಾಸ್ಟ್ ಇಎಮ್‌ಐ ಯೋಜನೆಯಡಿಯಲ್ಲಿ 1,11,793 ರೂಪಾಯಿ ಪಾವತಿಸಿ 'ಆಪಲ್ ಐಫೋನ್ 14 ಪ್ರೋ ಮೊಬೈಲ್ ಬುಕ್ ಮಾಡಿದ್ದರು. ಆದರೆ, ಮರುದಿನ ಅವರಿಗೆ ಐಫೋನ್ ಬದಲಿಗೆ ಬಿಯರ್ಡ್ ಗ್ರೋತ್ ಆಯಿಲ್ ಡೆಲಿವರಿಯಾಗಿತ್ತು.
ಈ ಕುರಿತು ಗ್ರಾಹಕರು ಏಪ್ರಿಲ್ ಮತ್ತು ಮೇ 2023 ರಲ್ಲಿ ಅಗತ್ಯ ದಾಖಲೆಗಳೊಂದಿಗೆ ಫ್ಲಿಪ್‌ಕಾರ್ಟ್ ಗ್ರಾಹಕ ಸೇವೆಯನ್ನು ಸಂಪರ್ಕಿಸಿ ದೂರು ದಾಖಲಿಸಿದ್ದರು. ಆದರೆ ಸಂಸ್ಥೆಯು ಯಾವುದೇ ಪರಿಹಾರ ಅಥವಾ ಹಣ ಮರುಪಾವತಿ ನೀಡದೇ ದೂರನ್ನು ಸಮಸ್ಯೆ ಬಗೆಹರಿದಿದೆ ಎಂದು ಪದೇ ಪದೇ ಕ್ಲೋಸ್ ಮಾಡಿತ್ತು.
ನ್ಯಾಯಾಲಯದ ಕಟ್ಟುನಿಟ್ಟಿನ ಚಾಟಿ
ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕ ಆಯೋಗವು, ಆನ್‌ಲೈನ್ ವೇದಿಕೆಯ ಮೂಲಕ ಹಣ ಪಡೆದ ಮೇಲೆ ಸರಿಯಾದ ವಸ್ತು ಗ್ರಾಹಕನಿಗೆ ತಲುಪಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಮತ್ತು ಸಮಸ್ಯೆ ಬಂದಾಗ ಸೂಕ್ತ ಪರಿಹಾರ ನೀಡುವುದು ಫ್ಲಿಪ್‌ಕಾರ್ಟ್‌ನ ಕರ್ತವ್ಯ. ಕೇವಲ ಶೋರೂಮ್ನಂತೆ ಮಾರಾಟಕ್ಕೆ ವೇದಿಕೆ ಕಲ್ಪಿಸಿ ನಕಲಿ ಅಥವಾ ತಪ್ಪು ವಸ್ತು ತಲುಪಿದಾಗ ಜವಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸೂಕ್ತ ತನಿಖೆ ನಡೆಸದೆ ದೂರುಗಳನ್ನು ಕ್ಲೋಸ್ ಮಾಡುವುದು ಸೇವೆಯಲ್ಲಿನ ತೀವ್ರ ನ್ಯೂನತೆ ಮತ್ತು ಅನುಚಿತ ವ್ಯಾಪಾರ ವಹಿವಾಟು ಎಂದು ತೀವ್ರ ತರಾಟೆಗೆ ತೆಗೆದುಕೊಂಡಿತು.
ಆಯೋಗದ ಮಹತ್ವದ ಆದೇಶ
ತಮ್ಮ ಸೇವೆಯಲ್ಲಿನ ಲೋಪಕ್ಕಾಗಿ ಫ್ಲಿಪ್‌ಕಾರ್ಟ್ ಮತ್ತು ಸೆಲ್ಲರ್ ಇಬ್ಬರೂ ಜಂಟಿಯಾಗಿ ಹೊಣೆಗಾರರು ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ ಗ್ರಾಹಕ ಪಾವತಿಸಿದ್ದ 1,11,793 ರೂಪಾಯಿ ಪ್ರಮುಖ ಮೊತ್ತವನ್ನು ಏಪ್ರಿಲ್ 22, 2023 ರಿಂದ ಶೇಕಡಾ 9 ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ಹಿಂತಿರುಗಿಸಬೇಕು. ಜೊತೆಗೆ ಈ ಸಮಯದಲ್ಲಿ ಆದಂತಹ ಮಾನಸಿಕ ಕಿರುಕುಳ ಮತ್ತು ತೊಂದರೆಗಾಗಿ 50,000 ರೂಪಾಯಿ ಪರಿಹಾರ ನೀಡಬೇಕು. ನ್ಯಾಯಾಲಯದ ಮೊಕದ್ದಮೆ ವೆಚ್ಚವಾಗಿ 20,000 ರೂಪಾಯಿಗಳನ್ನು 45 ದಿನಗಳ ಒಳಗಾಗಿ ಪಾವತಿಸಬೇಕು ಎಂದು ಹೇಳಿದೆ.
ಆದಾಗ್ಯೂ, ಇದೇ ಪ್ರಕರಣದಲ್ಲಿ ಹೆಸರಿಸಲಾಗಿದ್ದ ತಯಾರಕ ಸಂಸ್ಥೆ ಆಪಲ್ ಇಂಡಿಯಾಗೆ ಪ್ಯಾಕಿಂಗ್ ಅಥವಾ ಡೆಲಿವರಿ ಪ್ರಕ್ರಿಯೆಯಲ್ಲಿ ಯಾವುದೇ ಪಾತ್ರವಿಲ್ಲದಿರುವುದರಿಂದ, ಆ ಕಂಪನಿಯ ಮೇಲಿನ ದೂರನ್ನು ಆಯೋಗವು ವಜಾಗೊಳಿಸಿದೆ (ಏಜೆನ್ಸೀಸ್).