ತೈಲ ಬಿಕ್ಕಟ್ಟು ತಾತ್ಕಾಲಿಕ, ಸದ್ಯದಲ್ಲೇ ಇಳಿಯಲಿದೆ ದರ 
ದೇಶ

ತೈಲ ಬಿಕ್ಕಟ್ಟು ತಾತ್ಕಾಲಿಕ, ಸದ್ಯದಲ್ಲೇ ಇಳಿಯಲಿದೆ ದರ

ಇರಾನ್ ಸಂಘರ್ಷ ಶೀಘ್ರದಲ್ಲೇ ಭಾರತದ ಆರ್ಥಿಕತೆಗೆ ಭಾರಿ ಹೊಡೆತ ನೀಡಬಹುದು ಎಂದು ಅನೇಕರು ಭಯಪಡುತ್ತಿದ್ದಾರೆ. ಆಮದು ತೈಲದ ಮೇಲೆಯೇ ಭಾರತ ಅವಲಂಬಿತವಾಗಿದೆ ಎಂಬುದು ನಿಮಗೆ ಗೊತ್ತಿದೆ. ಇದು ಬಿಕ್ಕಟ್ಟಾಗಲಿದೆಯೇ? ಖಂಡಿತ ಇಲ್ಲ. ನಿಶ್ಚಿಂತರಾಗಿರಿ. ಏಕೆಂದರೆ, ತೈಲ ಬೆಲೆಗಳು ಶೀಘ್ರದಲ್ಲೇ ಅತಿ ಕಡಿಮೆ ಬೆಲೆಗೆ ಇಳಿಯಲಿವೆ. ಇಂಧನ ಕೇಂದ್ರಿತ ಪ್ರಾದೇಶಿಕ ಸಂಘರ್ಷಗಳು ತೈಲ ಬೆಲೆಗಳ ಮೇಲೆ ಕೇವಲ ಕ್ಷಣಿಕ ಪರಿಣಾಮವನ್ನು ಮಾತ್ರ ಬೀರುತ್ತವೆ.
ಹೌದು, ಭಾರತ ಆಮದು ಮಾಡಿಕೊಳ್ಳುವ ಇಂಧನದ ಶೇ. 40ಕ್ಕಿಂತ ಹೆಚ್ಚು ಪಾಲು ಹೊಮುಜ್ ಜಲಸಂಧಿಯ ಮೂಲಕವೇ ಬರುತ್ತದೆ. ಪ್ರಸ್ತುತ ಅಲ್ಲಿ ಕೆಲವೇ ಕೆಲವು ಪ್ರಮುಖ ಹಡಗುಗಳು ಸಂಚರಿಸುತ್ತಿವೆ. ಈ ಜಲಸಂಧಿಯ ಮುಚ್ಚುವಿಕೆಗೆ ಪರ್ಷಿಯನ್ ಕೊಲ್ಲಿಯ ದೊಡ್ಡ ತೈಲ ಉತ್ಪಾದಕರು, ಉತ್ಪಾದನೆಯನ್ನು ಕಡಿತಗೊಳಿಸುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ಬ್ರೆಂಟ್ ಕ್ರೂಡ್ ಬೆಲೆಗಳು ಜನವರಿಯ ಕನಿಷ್ಠ ಮಟ್ಟವಾದ 55 ಡಾಲರ್​ನಿಂದ ಯುದ್ಧಕ್ಕೂ ಮುನ್ನ 67 ಡಾಲರ್​ಗೆ ಏರಿದ್ದವು. ನಂತರ ಒಂದು ದಿನದ ಮಟ್ಟಿಗೆ ಸುಮಾರು 120 ಡಾಲರ್​ಗೆ ಏರಿದವು. ಮರುದಿನವೇ 91 ಡಾಲರ್​ಗೆ ಇಳಿದವು. ಬಳಿಕ ಮಾ. 12ರಂದು ಟ್ಯಾಂಕರ್​ಗಳನ್ನು ಇರಾನ್ ಧ್ವಂಸಗೊಳಿಸಿದಾಗ ತೈಲ ಬೆಲೆಗಳು ಮತ್ತೆ 100 ಡಾಲರ್​ಗೆ ಏರಿದವು. 85 ಡಾಲರ್ ಇದ್ದ ರಷ್ಯಾದ ಅಗ್ಗದ ತೈಲ, ಶೇ. 73ರಷ್ಟು ಏರಿತು! ಬೆಲೆ ಹೆಚ್ಚಳ ಭೀತಿ ಎಲ್ಲೆಡೆ ಆವರಿಸಿದೆ.
ಕರ್ನಾಟಕದ ಸ್ಥಿತಿಗತಿ: ದೀರ್ಘಕಾಲದ ಅತ್ಯಂತ ಹೆಚ್ಚಿನ ಬೆಲೆಗಳು ಕರ್ನಾಟಕವನ್ನೂ ಬಿಟ್ಟಿಲ್ಲ. ಕರ್ನಾಟಕ ಜಿಡಿಪಿಯ ಶೇ. 30.5ರಷ್ಟು ಪಾಲು ತಂತ್ರಜ್ಞಾನ ಸೇವೆಗಳದ್ದು. ಆದರೆ, ಬಹುತೇಕ ಕೈಗಾರಿಕೆಗಳಿಗಿಂತ ಬೆಂಗಳೂರು ಹೆಚ್ಚು ಸುರಕ್ಷಿತವಾಗಿರಬಹುದು. ಒಟ್ಟಾರೆಯಾಗಿ ಉತ್ಪಾದನೆಯ ಶೇ. 32.1ರಷ್ಟನ್ನು ಹೊಂದಿರುವ ಭಾರಿ ಉದ್ಯಮ ಮತ್ತು ಕೃಷಿ ವಲಯ, ನಿಂತುಹೋದ ರಸಗೊಬ್ಬರ ಆಮದುಗಳು ಕೃಷಿಯ ಮೇಲೆ ದುಪ್ಪಟ್ಟು ಹೊಡೆತ ನೀಡಲಿವೆ. ಮಾ. 10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮುಖವಾಗಿ ಪ್ರಸ್ತಾಪಿಸಿದಂತೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಗೃಹಬಳಕೆಯ ಎಲ್​ಪಿಜಿಗೆ ಆದ್ಯತೆ ನೀಡುವಂತೆ ನೀಡಿದ ಆದೇಶ ಈಗಾಗಲೇ ಆತಿಥ್ಯ ವಲಯಕ್ಕೆ ಹಾನಿ ಮಾಡುತ್ತಿದೆ.
ಇಂಧನ ಸಾಮ್ರಾಜ್ಯ ಆಧಾರಿತ ಯುದ್ಧಗಳಿಗೆ ಸುದೀರ್ಘ ಇತಿಹಾಸವಿದೆ. ಇದು ಕೆಲವೇ ಜನರಿಗೆ ಅರ್ಥವಾಗುವ ಒಂದು ಆಘಾತಕಾರಿ ಸತ್ಯವನ್ನು ಬಿಚ್ಚಿಡುತ್ತದೆ. 1980ರಿಂದ ನಡೆದ 9 ಪ್ರಮುಖ ಸಂಘರ್ಷಗಳು, ಪ್ರಮುಖ ತೈಲ ಪ್ರಾಂತ್ಯಗಳನ್ನು ಒಳಗೊಂಡಿವೆ. ಯುದ್ಧ ಆರಂಭದ ಒಂದು ತಿಂಗಳ ನಂತರ ಬೆಲೆಗಳು ಹೆಚ್ಚಾಗಿದ್ದವು. ಆದರೆ, ಆರು ತಿಂಗಳ ನಂತರ ತೈಲ ಬೆಲೆಗಳು ವಾಸ್ತವವಾಗಿ ಯುದ್ಧ ಪ್ರಾರಂಭವಾಗುವ ಮುನ್ನ ಇದ್ದ ಸರಾಸರಿ ಶೇ. -3.9ರಷ್ಟು ಕೆಳಗಿದ್ದವು. ಒಂದು ವರ್ಷದ ನಂತರ ಶೇ. -5.3 ಇಳಿಕೆ ಕಂಡಿದ್ದವು, ಏರಿಕೆ ಅಲ್ಲ!
ಕೊನೆಯ ಎರಡನ್ನು ಗಮನಿಸಿ. 2022ರಲ್ಲಿ ರಷ್ಯಾ-ಯೂಕ್ರೇನ್ ಯುದ್ಧ ಪ್ರಾರಂಭವಾದ ಒಂದು ತಿಂಗಳ ನಂತರ, ತೈಲ ಬೆಲೆ ಶೇ. 21.1ರಷ್ಟು ಏರಿಕೆ ಕಂಡಿತು. ಆರು ತಿಂಗಳಲ್ಲೇ ಆ ಏರಿಕೆ ಮಾಯವಾಯಿತು. ಒಂದು ವರ್ಷದ ನಂತರ, ತೈಲ ಬೆಲೆ ಶೇ. -18.7ರಷ್ಟು ಭಾರಿ ಕುಸಿತ ಕಂಡಿತು. ಒಂದು ವರ್ಷದ ನಂತರ 2023ರಲ್ಲಿ ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡಿದ ಸಂದರ್ಭದಲ್ಲಿ ತೈಲ ಬೆಲೆ ಶೇ. -7ರಷ್ಟು ಇಳಿಕೆಯಾಗಿತ್ತು. ಕರ್ನಾಟಕದ ಆರ್ಥಿಕತೆ ಬೆಳೆಯಿತು!
ಬೆಲೆಗಳು ಏಕೆ ಕುಸಿಯುತ್ತವೆ?: ಆರಂಭಿಕ ಆಘಾತದ ಬಳಿಕ ಬೆಲೆಗಳು ಏಕೆ ಕುಸಿಯುತ್ತವೆ? ಯುದ್ಧಗಳ ಆರಂಭಕ್ಕೂ ಕೆಲವು ತಿಂಗಳುಗಳ ಮುನ್ನ ಬೆಲೆಗಳು ಸಾಮಾನ್ಯ ಬೇಡಿಕೆ ಮತ್ತು ಉತ್ಪಾದನಾ ವೆಚ್ಚ ಆಧಾರಿತ ಪೂರೈಕೆಯನ್ನು ಪ್ರತಿಬಿಂಬಿಸುತ್ತವೆ. ನಂತರ, ಈ ವರ್ಷ ಸಂಭವಿಸಿದಂತೆಯೇ ಯುದ್ಧ ಪ್ರಾರಂಭವಾಗುವ ಮೊದಲೇ ಹೋರಾಟಕ್ಕೆ ಕಾರಣವಾಗುವ ಉದ್ವಿಗ್ನತೆಗಳು ತೈಲ ಬೆಲೆ ಏರಿಕೆಗೆ ಕಾರಣವಾಗುತ್ತವೆ. ಹಿಂಸಾಚಾರವು ದುಬಾರಿ ಬೆಲೆಗಳನ್ನು ಸ್ತಬ್ಧಗೊಳಿಸುತ್ತದೆ. ಆರಂಭಿಕ ಭೀತಿ ಕೆಟ್ಟ ಪರಿಸ್ಥಿತಿಯ ಬೆಲೆಯನ್ನು ನಿಗದಿಪಡಿಸುತ್ತದೆ. ಹಾಗೆ ನೋಡಿದರೆ ಒಂದು ಸುದೀರ್ಘ ಯುದ್ಧ, ಈ ಸಂದರ್ಭದಲ್ಲಿ ಜಲಸಂಧಿ ಮುಚ್ಚಲ್ಪಟ್ಟ ಸ್ಥಿತಿ. ಶಾಂತಿ ನೆಲೆಸಿದಾಗ ಬೆಲೆಗಳು ಯುದ್ಧಪೂರ್ವ ಮಟ್ಟಕ್ಕೆ ಮರಳುತ್ತವೆ.
ಇರಾಕ್ ಮೇಲಿನ ಅಮೆರಿಕ ಆಕ್ರಮಣವನ್ನು ಹೊರತುಪಡಿಸಿ, ಅಲ್ಲಿ ರಾಷ್ಟ್ರ ನಿರ್ವಣಕ್ಕಾಗಿ ಅಮೆರಿಕ ತನ್ನ ಭೂಸೇನೆಯನ್ನು ಕಳುಹಿಸಿತ್ತು. ಈ ಪರ್ಷಿಯನ್ ಕೊಲ್ಲಿ ಯುದ್ಧಗಳು ಹೆಚ್ಚು ಕಾಲ ನಡೆದಿಲ್ಲ. ಅಲ್ಲದೆ, ಕಂಪನಿಗಳು ಮತ್ತು ಸರ್ಕಾರಗಳು ಪರಿಸ್ಥಿತಿಗೆ ಹೊಂದಿಕೊಳ್ಳುತ್ತವೆ. ಸೌದಿ ಅರೇಬಿಯಾ ಈಗ ಜಲಸಂಧಿಯ ಹೊರಗಿನಿಂದ ಯಾನ್ಬುಗೆ ಪ್ರತಿದಿನ 5 ದಶಲಕ್ಷ ಬ್ಯಾರೆಲ್ ತೈಲವನ್ನು ಕಳುಹಿಸುತ್ತಿದೆ. ರಷ್ಯಾದ ತೈಲ ಖರೀದಿಗೆ ಅಮೆರಿಕ ಭಾರತಕ್ಕೆ ವಿನಾಯಿತಿ ನೀಡಿದೆ ಮತ್ತು ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಈಗಾಗಲೇ ತೈಲ ಖರೀದಿಸುತ್ತಿದೆ. ವೆನೆಜುವೆಲಾದ ತೈಲವೂ ಈಗ ನಿರ್ಬಂಧಗಳಿಂದ ಮುಕ್ತವಾಗಿದೆ.
ದೊಡ್ಡ ದುಷ್ಪರಿಣಾಮ ಆಗದು: ಯಾವುದೇ ಆಮದು ಇಲ್ಲ ಎಂದು ಊಹಿಸಿಕೊಂಡರೂ ಭಾರತ 50ರಿಂದ 74 ದಿನಗಳಿಗೆ ಸಾಕಾಗುವಷ್ಟು ತೈಲ ಮತ್ತು ಇಂಧನ ಸಂಗ್ರಹ ಹೊಂದಿದೆ ಎಂದು ಅಂದಾಜಿಸಲಾಗಿದೆ. ಈಗಲೂ ಮಾರ್ಗ ಮಧ್ಯದಲ್ಲಿರುವ ಶೇ. 60ರಷ್ಟು ಆಮದನ್ನು ಪರಿಗಣಿಸಿದರೆ, ಸುಮಾರು 125ರಿಂದ 185 ದಿನಗಳಷ್ಟು ಸಂಗ್ರಹವಿದೆ. ಇರಾನ್ ಜಲಸಂಧಿಯನ್ನು ತಿಂಗಳುಗಳ ಕಾಲ ಮುಚ್ಚಿದರೂ (ಅದು 1980ರ ಇರಾನ್-ಇರಾಕ್ ಯುದ್ಧದಲ್ಲಿ ವಿಫಲವಾಯಿತು), ಅದರ ಪರಿಣಾಮ ದೊಡ್ಡದಾಗಿರುವುದಿಲ್ಲ. ಬೆಲೆಗಳು ಯುದ್ಧ ಮುಗಿಯುವುದಕ್ಕೂ ಮುನ್ನವೇ ಅದರ ಅಂತ್ಯವನ್ನು ಸೂಚಿಸುತ್ತವೆ. ನಂತರ ಬೆಲೆಗಳು ಆರಂಭಿಕ ದಾಳಿಗೆ ಕೆಲವು ತಿಂಗಳುಗಳ ಮೊದಲಿದ್ದ ಮಟ್ಟಕ್ಕೆ ಇಳಿಯಲು ಆರಂಭಿಸುತ್ತವೆ. ಸಾಮಾನ್ಯ ಪೂರೈಕೆ ಮತ್ತು ಬೇಡಿಕೆಗೆ ಅನುಗುಣವಾಗಿ. ಅಂದರೆ ಪ್ರತಿ ಬ್ಯಾರೆಲ್​ಗೆ ಸುಮಾರು 60 ಡಾಲರ್ ಆಗಿರುತ್ತದೆ.
ಬೆಂಗಳೂರಿಗರಲ್ಲಿ ಆತಂಕ ಅನಗತ್ಯ: ಆದ್ದರಿಂದ, ಬೆಂಗಳೂರಿನ ರೆಸ್ಟೋರೆಂಟ್​ಗಳು, ಹೊಟೇಲ್​ಗಳು ಮತ್ತು ಮೆಸ್​ಗಳಿಗೆ ಎಲ್​ಪಿಜಿ ನಿರ್ಬಂಧಗಳು ಕಾಡುತ್ತಿವೆ. ಇವುಗಳ ಮೇಲೆ ಅವಲಂಬಿತ ಅನೇಕ ಕಾರ್ವಿುಕರು ಮತ್ತು ವಿದ್ಯಾರ್ಥಿಗಳ ಕಳವಳ ಅನಗತ್ಯವಾಗಿದೆ. ತಾಳ್ಮೆ ಮುಖ್ಯ. ಬೆಲೆಗಳು ಇಳಿಯುತ್ತವೆ. ಒಂದು ವೇಳೆ ನನ್ನ ವಿಶ್ಲೇಷಣೆ ತಪ್ಪಾಗಿದ್ದರೆ, 2023 ನಿಮಗೆ ನೆನಪಿದೆಯೇ? ತೈಲ ಬೆಲೆ ಕಳೆದ ಆರು ತಿಂಗಳುಗಳ ಕಾಲ 75 ಡಾಲರ್​ಗಿಂತ ಮೇಲೆಕ್ಕಿತ್ತು ಮತ್ತು ಸೆಪ್ಟೆಂಬರ್ ಅಂತ್ಯದಲ್ಲಿ 98 ಡಾಲರ್ ಗರಿಷ್ಠ ಮಟ್ಟಕ್ಕೆ ತಲುಪಿತು. ಆದರೂ ಭಾರತದ ಜಿಡಿಪಿ 2023ರಲ್ಲಿ ಶೇ. 8ರಷ್ಟು ವೃದ್ಧಿಸಿತು. ಕರ್ನಾಟಕದ ಜಿಡಿಪಿ ಇದಕ್ಕಿಂತ ಇನ್ನೂ ಶೇ. 2ರಷ್ಟು ಹೆಚ್ಚಿತ್ತು. ಬಿಎಸ್​ಇ ಸೂಚ್ಯಂಕ ಶೇ. 18ಕ್ಕಿಂತ ಹೆಚ್ಚು ರಿಟರ್ನ್ ನೀಡಿತು. ಯಾವುದೇ ತೈಲ ಬಿಕ್ಕಟ್ಟು ಎದುರಾಗುವ ಲಕ್ಷಣಗಳಿಲ್ಲ. ಇಂದಿನ ಬೆಲೆಗಳನ್ನು ನೋಡಿ ಹೆದರುವ ಬದಲು, ಭವಿಷ್ಯದತ್ತ ಗಮನಹರಿಸಿ. ಶೀಘ್ರದಲ್ಲೇ ಬರಲಿರುವ ತೈಲ ಬೆಲೆಗಳ ಇಳಿಕೆಯನ್ನು ಅರ್ಥ ಮಾಡಿಕೊಳ್ಳಿ.