ಕೇರಳದ ಮಹಿಳೆ ಪ್ರಭಾವತಿ ಅವರಿಗೆ ಅಭಿನಂದಿಸಿದ MVD ಅಧಿಕಾರಿಗಳು (ಚಿತ್ರ X)
- ಪಾದಚಾರಿ ಮಾರ್ಗದಲ್ಲಿ ಬೈಕ್ ಚಲಾಯಿಸಿದ ಸವಾರರೊಬ್ಬರನ್ನು ಧೈರ್ಯದಿಂದ ಅಡ್ಡಗಟ್ಟಿ ದೇಶಾದ್ಯಂತ ಸುದ್ದಿಯಾಗಿದ್ದ ಕೇರಳದ ಮಹಿಳೆ
- ಕೇರಳದ ಪ್ರಭಾವತಿ ಅವರ ಮನೆಗೆ ಮೋಟಾರು ವಾಹನ ಇಲಾಖೆ (MVD) ಅಧಿಕಾರಿಗಳು ಭೇಟಿ
- ಘಟನೆಗೆ ಸಂಬಂಧಪಟ್ಟಂತೆ ಬೈಕ್ ಸವಾರನ ಲೈಸೆನ್ಸ್ ಅಮಾನತುಗೊಳಿಸಿರುವ ಅಧಿಕಾರಿಗಳು
ತಿರುವನಂತಪುರಂ: ಪಾದಚಾರಿ ಮಾರ್ಗದಲ್ಲಿ ಬೈಕ್ ಚಲಾಯಿಸಿದ ಸವಾರರೊಬ್ಬರನ್ನು (Scooty rider) ಧೈರ್ಯದಿಂದ ಅಡ್ಡಗಟ್ಟಿ ದೇಶಾದ್ಯಂತ ಸುದ್ದಿಯಾಗಿದ್ದ ಕೇರಳದ ಮಹಿಳೆ ಪ್ರಭಾವತಿ ಅವರ ಮನೆಗೆ ಮೋಟಾರು ವಾಹನ ಇಲಾಖೆ (MVD) ಅಧಿಕಾರಿಗಳು ಭೇಟಿ ನೀಡಿ ಅವರನ್ನು ಶ್ಲಾಘಿಸಿದ್ದಾರೆ.
ಟ್ರಾಫಿಕ್ ಸಮಸ್ಯೆಯ ಹಿನ್ನಲೆಯಲ್ಲಿ ಸಮಯ ಉಳಿಸಲು ಯೋಚಿಸಿದ ಸವಾರ ಪುಟ್ ಪಾತ್ನ್ನು ಶಾರ್ಟ್ ಕಟ್ ಮಾರ್ಗವಾಗಿ ಬಳಸಿದ್ದರು. ಸದ್ಯ ಈ ಘಟನೆಗೆ ಸಂಬಂಧಪಟ್ಟಂತೆ ಬೈಕ್ ಸವಾರನ ಲೈಸೆನ್ಸ್ ಅಮಾನತುಗೊಳಿಸಿರುವ ಅಧಿಕಾರಿಗಳು, ಒಂದು ವಾರ ಚಾಲನಾ ಜಾಗೃತಿ ತರಬೇತಿಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ಭಾರೀ ಟ್ರಾಫಿಕ್ ನಡುವೆ ಬೈಕ್ ಸವಾರನೊಬ್ಬ ಸಮಯ ಉಳಿಸುವ ಸಲುವಾಗಿ ಪಾದಚಾರಿ ಮಾರ್ಗವನ್ನು ಶಾರ್ಟ್ ಕಟ್ ಆಗಿ ಬಳಸಲು ಪ್ರಾರಂಭಿಸುತ್ತಾನೆ. ಈ ವೇಳೆ ಆ ದಾರಿಯಲ್ಲೇ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯೊಬ್ಬರು ಸವಾರನ ಅಶಿಸ್ತನ್ನು ಗಮನಿಸಿ, ಪಕ್ಕಕ್ಕೆ ಸರಿಯುವ ಬದಲಿಗೆ ಆತನ ದಾರಿಗೆ ಅಡ್ಡಲಾಗಿ ನಿಂತು ಮುಂದೆ ಹೋಗದಂತೆ ತಡೆದಿದ್ದಾರೆ.
ಈ ವೇಳೆ ಮಹಿಳೆಯು ತನ್ನ ಮೊಬೈಲ್ ತೆಗೆದು ಅದರಲ್ಲಿ ವಿಡಿಯೋ ಮಾಡಲು ಪ್ರಾರಂಭಿಸುತ್ತಾರೆ. ಅವರ ದೃಢಸಂಕಲ್ಪವು ಅಂತಿಮವಾಗಿ ಫಲ ನೀಡುವುದರ ಜೊತೆಗೆ ಬೈಕ್ ಸವಾರ ಪಾದಚಾರಿ ರಸ್ತೆಯನ್ನು ತೆರವುಗೊಳಿಸಿ ಮುಖ್ಯ ರಸ್ತೆಗೆ ಹಿಂತಿರುಗುತ್ತಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಮಹಿಳೆಯ ಧೈರ್ಯ ಮತ್ತು ಸ್ಪಷ್ಟತೆಗೆ ಅನೇಕ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು ಶಿಕ್ಷಣ ಪದವಿಗಳು ಮತ್ತು ಉದ್ಯೋಗಗಳನ್ನು ಮೀರಿದ್ದಾಗಿದೆ. ಇದು ದೈನಂದಿನ ನಡವಳಿಕೆಯಲ್ಲಿ ಪ್ರತಿಬಿಂಬಿಸುವುದು ಮತ್ತು ಸಾರ್ವಜನಿಕ ಸ್ಥಳಗಳನ್ನು ಗೌರವಿಸಿ, ನಿಯಮಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ.
ಇನ್ನು ಕೆಲವರು ದ್ವಿಚಕ್ರ ವಾಹನಗಳು ಮತ್ತು ನಾಲ್ಕು ಚಕ್ರಗಳ ವಾಹನಗಳು ಪಾದಚಾರಿ ರಸ್ತೆಯನ್ನು ಆಕ್ರಮಿಸುವುದರಿಂದ ಅಲ್ಲಿ ಓಡಾಡುವ ಜನರಿಗೆ ಬಹಳ ತೊಂದರೆಯಾಗುತ್ತಿರುವುದನ್ನು ತಿಳಿಸಿದರು. ಆದಾಗ್ಯೂ, ಕಟ್ಟುನಿಟ್ಟಿನ ಜಾರಿ ಮತ್ತು ಸಿಸಿಟಿವಿ ಕ್ಯಾಮೆರಾಗಳ ವ್ಯಾಪಕ ಬಳಕೆಯು ಪಾದಚಾರಿಗಳಿಗೆ ರಸ್ತೆ ಸುರಕ್ಷತೆಯನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).