TVK Alliance | ಟಿವಿಕೆ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಅಧಿಕೃತ ಹೆಸರು ಘೋಷಣೆ  
ದೇಶ

ತಮಿಳುನಾಡಿನಲ್ಲಿ ಟಿವಿಕೆ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಅಧಿಕೃತ ಹೆಸರು ಘೋಷಣೆ | TVK Alliance

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಮೈತ್ರಿಕೂಟಕ್ಕೆ (TVK Alliance) ಕೊನೆಗೂ ಅಧಿಕೃತ ಹೆಸರು ಸಿಕ್ಕಿದ್ದು, ಚೆನ್ನೈನ ಪಣೈಯೂರ್‌ನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಹೈ-ವೋಲ್ಟೇಜ್ ಸಭೆಯ ಬಳಿಕ, ಈ ಮೈತ್ರಿಕೂಟಕ್ಕೆ ಸೆಕ್ಯುಲರ್ ಸೋಷಿಯಲ್ ಜಸ್ಟಿಸ್ ವಿಕ್ಟರಿ ಅಲಯನ್ಸ್ ಎಂದು ಅಧಿಕೃತವಾಗಿ ನಾಮಕರಣ ಮಾಡಲಾಗಿದೆ.
ಸರ್ಕಾರ ರಚನೆಯಾದ ಬಳಿಕ ನಡೆದ ಈ ಎರಡನೇ ಅತ್ಯಂತ ಪ್ರಮುಖ ಸಭೆಯಲ್ಲಿ, ಮೈತ್ರಿಕೂಟದ ಚೌಕಟ್ಟನ್ನು ಗಟ್ಟಿ ಮಾಡುವ ಬಹುದೊಡ್ಡ ತಂತ್ರಗಾರಿಕೆ ನಡೆದಿದೆ.
ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ. ಮಾಣಿಕ್ಕಂ ಟ್ಯಾಗೋರ್, ರಾಜ್ಯಸಭಾ ಸದಸ್ಯ ಪ್ರವೀಣ್ ಚಕ್ರವರ್ತಿ, ಶಾಸಕಾಂಗ ಪಕ್ಷದ ನಾಯಕಿ ತರಗೈ ಕತ್ಬರ್ಟ್, ವಿಸಿಕೆ ನಾಯಕರಾದ ತೋಳ್ ತಿರುಮಾವಳವನ್, ವನ್ನಿ ಅರಸು, ರವಿಕುಮಾರ್, ಸಿಂತನೈ ಸೆಲ್ವನ್, ಎಂಡಿಎಂಕೆ ನಾಯಕರಾದ ವೈಕೋ, ದುರೈ ವೈಕೋ ಹಾಗೂ ಐಯುಎಂಎಲ್ ನಾಯಕರಾದ ಕೆ.ಎಂ. ಖಾದರ್ ಮೊಹಿದ್ದೀನ್, ಎ.ಎಂ. ಶಹಜಹಾನ್ ಮತ್ತು ಸಯ್ಯದ್ ಫಾರೂಕ್ ಬಾಷಾ ಒಂದೇ ವೇದಿಕೆಯಲ್ಲಿ ಕೈಜೋಡಿಸಿ ಶಕ್ತಿ ಪ್ರದರ್ಶನ ಮಾಡಿದರು. ಆದರೆ, ಸರ್ಕಾರಕ್ಕೆ ಬೆಂಬಲ ನೀಡುತ್ತಿರುವ ಸಿಪಿಐ(ಎಮ್) ಮತ್ತು ಸಿಪಿಐ ಎಡಪಕ್ಷಗಳ ನಾಯಕರು ಈ ಸಭೆಯಿಂದ ದಿಢೀರ್ ದೂರವುಳಿದದ್ದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಆಡಳಿತಕ್ಕೆ ಹೊಸ ಮೆರುಗು ನೀಡುವ ಸಾಮಾನ್ಯ ಕನಿಷ್ಠ ಕಾರ್ಯಕ್ರಮ (Common Minimum Programme) ರೂಪಿಸುವುದು, ಇಡೀ ಮೈತ್ರಿಯನ್ನು ನಿಯಂತ್ರಿಸುವ ಸ್ಟೀರಿಂಗ್ ಸಮಿತಿ ರಚನೆ ಹಾಗೂ ಪ್ರಮುಖ ಸಂಚಾಲಕರನ್ನು ನೇಮಿಸುವ ವಿಷಯಗಳ ಕುರಿತು ಗಂಭೀರ ಚರ್ಚೆ ನಡೆಸಲಾಯಿತು. ಸಭೆಯ ಬೆನ್ನಲ್ಲೇ ಮುಖ್ಯಮಂತ್ರಿ ವಿಜಯ್ ಹಾಗೂ ಮಿತ್ರಪಕ್ಷಗಳ ನಾಯಕರಿದ್ದ ಪವರ್‌ಫುಲ್ ಭಾವಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ.
ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು ಎತ್ತಿಹಿಡಿಯುವ ಪ್ರಮುಖ ಪಕ್ಷಗಳನ್ನು ಒಂದೇ ವೇದಿಕೆಗೆ ತಂದಿರುವ ಈ ಮೈತ್ರಿಕೂಟವು, ತಮಿಳುನಾಡಿನ ರಾಜಕೀಯ ಸಮರದಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಿದೆ. ಮುಂಬರುವ ಚುನಾವಣಾ ಕದನಕ್ಕೆ ಮುನ್ನವೇ ಮೈತ್ರಿಕೂಟಕ್ಕೆ ಅಧಿಕೃತ ಹೆಸರನ್ನು ಆಖೈರುಗೊಳಿಸುವ ಮೂಲಕ, ಈ ಒಕ್ಕೂಟವು ತನ್ನ ರಾಜಕೀಯ ಬಲವರ್ಧನೆಯತ್ತ ಮತ್ತೊಂದು ಪ್ರಮುಖ ಹಾಗೂ ಗಟ್ಟಿಯಾದ ಹೆಜ್ಜೆಯನ್ನಿಟ್ಟಿದೆ.

ಕಾಂಗ್ರೆಸ್ ಜೊತೆ ಭಿನ್ನಾಭಿಪ್ರಾಯಕ್ಕೆ ತೆರೆಬಿತ್ತಾ..?

ಮುಂದಿನ ಸಾರ್ವತ್ರಿಕ ಚುನಾವಣೆಗೆ ವಿಜಯ್ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಲು ಟಿವಿಕೆ ಮುಂದಾಗಿರುವುದು ಕಾಂಗ್ರೆಸ್ ಹಾಗೂ ಟಿವಿಕೆ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ವಿಜಯ್​ ಪಕ್ಷವು ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳದಿದ್ದರೆ ಮೈತ್ರಿಕೂಟದಿಂದ ಹೊರಬರುವುದಾಗಿ ಕಾಂಗ್ರೆಸ್ ಎಚ್ಚರಿಕೆಯನ್ನು ಸಹ ನೀಡಿತ್ತು.
ಟಿವಿಕೆ ಪಕ್ಷದ ಈ ನಡೆಗೆ ತಮಿಳುನಾಡಿನ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಇದನ್ನು ಅಭಿಮಾನಿಗಳ ಮನಸ್ಥಿತಿ ಎಂದು ಟೀಕಿಸಿದ್ದರು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೇ 2029ರಲ್ಲಿ ಪ್ರಧಾನಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ. ತಮಿಳುನಾಡು ಸರ್ಕಾರದಲ್ಲಿ ಪಿ. ವಿಶ್ವನಾಥನ್ ಮತ್ತು ಎಸ್. ರಾಜೇಶ್ ಕುಮಾರ್ ಅವರು ಕಾಂಗ್ರೆಸ್‌ನಿಂದ ಸಚಿವರಾಗಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕಿ ತಾರಹೈ ಕತ್ಬರ್ಟ್, ಮೈತ್ರಿಕೂಟದ ನಿಲುವಿನಲ್ಲಿ ಯಾವುದೇ ಗೊಂದಲವಿಲ್ಲ. ಸಿಎಂ ವಿಜಯ್ ಅವರೇ ಹಿಂದೆ ರಾಹುಲ್ ಗಾಂಧಿ ಅವರನ್ನು ಮೈತ್ರಿಕೂಟದ ನಾಯಕ ಎಂದು ಒಪ್ಪಿಕೊಂಡಿದ್ದರು, ಶಾಸಕರ ವೈಯಕ್ತಿಕ ಹೇಳಿಕೆಗಳು ಪಕ್ಷದ ಅಧಿಕೃತ ನಿಲುವಾಗುವುದಿಲ್ಲ ಎಂದು ಹೇಳಿದ್ದರು(ಏಜೆನ್ಸೀಸ್​).