ದೇಶ

ಚಾ ಕುಡಿಯಲು ಮನೆಗೆ ಯಾವಾಗ ಕರೆಯುತ್ತೀರಿ ಎಂದು ಕೈ ಹಿಡಿದು ಎಳೆದ ಅಧಿಕಾರಿ: ಕಚೇರಿಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಮಹಿಳಾ ಉದ್ಯೋಗಿ | woman employee

ಉತ್ತರ ಪ್ರದೇಶದ ಹಮೀರ್​ಪುರದಲ್ಲಿ ವಿದ್ಯುತ್ ಇಲಾಖೆಯ ಮಹಿಳಾ ಉದ್ಯೋಗಿಯೊಬ್ಬರು ಶುಕ್ರವಾರ(ನ. 20) ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕಚೇರಿಯಲ್ಲಿಯೇ ಕಾರ್ಯನಿರ್ವಾಹಕ ಎಂಜಿನಿಯರ್ ಅನ್ನು ಥಳಿಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಲಖನೌ: ಉತ್ತರ ಪ್ರದೇಶದ ಹಮೀರ್​ಪುರದಲ್ಲಿ ವಿದ್ಯುತ್ ಇಲಾಖೆಯ ಮಹಿಳಾ ಉದ್ಯೋಗಿಯೊಬ್ಬರು ಶುಕ್ರವಾರ(ನ. 20) ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕಚೇರಿಯಲ್ಲಿಯೇ ಕಾರ್ಯನಿರ್ವಾಹಕ ಎಂಜಿನಿಯರ್ ಅನ್ನು ಥಳಿಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ವಿದ್ಯುತ್ ಪರೀಕ್ಷಾ ವಿಭಾಗದಲ್ಲಿ ನಿಯೋಜಿತರಾಗಿರುವ ಕಾರ್ಯನಿರ್ವಾಹಕ ಎಂಜಿನಿಯರ್, ವಿಧವೆಯಾಗಿರುವ ಮಹಿಳಾ ಉದ್ಯೋಗಿಯನ್ನು ಪದೇ ಪದೇ ತಮ್ಮ ಕಚೇರಿಯ ಕೊಠಡಿಗೆ ಕರೆಸಿಕೊಂಡು, ಅನುಚಿತವಾಗಿ ಮಾತನಾಡುತ್ತಾ, ಅವರನ್ನು ಮುಟ್ಟಲು ಪ್ರಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಘಟನೆ ಕುರಿತು ಮಾತನಾಡಿರುವ ಮಹಿಳೆ, ಕೆಲವು ಸಮಯದಿಂದ ತನ್ನನ್ನು ಅನುಚಿತವಾಗಿ ನೋಡುತ್ತಾ, ಯಾವುದೇ ಕೆಲಸವಿಲ್ಲದಿದ್ದರೂ ಕಾರಣವಿಲ್ಲದೆ ತನ್ನ ಕೊಠಡಿಗೆ ಕರೆದು ಕೆಟ್ಟದಾಗಿ ಮಾತನಾಡುತ್ತಿದ್ದರು. ಮತ್ತು ಮೊಬೈಲ್​ನಲ್ಲಿ ತನ್ನ ಬಾಡಿಗೆ ವಸತಿಯ ವಿಳಾಸವನ್ನ ಕೇಳಿದ್ದನು ಎಂದು ಹೇಳಿದ್ದಾರೆ.

ಇಂದು ಸಹ ಆ ಎಂಜಿನಿಯರ್ ತನ್ನನ್ನು ಕಾರಣವಿಲ್ಲದೇ ಕೊಠಡಿಗೆ ಕರೆದು, ಚಹಾ ಕುಡಿಯಲು ಯಾವಾಗ ಮನೆಗೆ ಕರೆಯುತ್ತೀರಿ ಎಂದು ಕೇಳಿದರು. ಚಹಾ ಬೇಕಾದರೆ ಇಲ್ಲೇ ಕಚೇರಿಯಲ್ಲಿಯೇ ಮಾಡಿಕೊಡುತ್ತೇನೆ ಎಂದೆ, ಮನೆಗೆ ಬರಲು ಹೇಳಲಿಲ್ಲ. ತಕ್ಷಣ ನನ್ನ ಕೈಯನ್ನು ಹಿಡಿದು ತನ್ನ ಕಡೆಗೆ ಎಳೆದನು, ಇದರಿಂದ ಕೋಪಗೊಂಡು ಅವನಿಗೆ ಹೊಡೆದಿದ್ದೇನೆ ಎಂದು ಮಹಿಳೆ ತಿಳಿಸಿದ್ದಾರೆ.

ಇನ್ನೂ ಆರೋಪವನ್ನು ನಿರಾಕರಿಸಿರುವ ಇಂಜಿನಿಯರ್, ತಾನು ಯಾವುದೇ ತಪ್ಪು ಮಾಡಿಲ್ಲ ಮತ್ತು ಅಧಿಕೃತ ಕೆಲಸ ಮಾಡಲು ಕೇಳಿದಾಗ ಮಹಿಳೆ ತನ್ನ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಹೇಳಿಕೊಂಡಿದ್ದಾನೆ. ತನಗೆ ಹೊಡೆಯುವಾಗ ಆಕೆ ವಿಡಿಯೋ ರೆಕಾರ್ಡ್ ಮಾಡಿದ್ದಾಳೆ ಎಂದೂ ಆರೋಪಿಸಿದ್ದಾನೆ.

ಇನ್ನೂ ಘಟನೆ ಕುರಿತು ಮಾತನಾಡಿರುವ ಹಮೀರ್‌ಪುರದ ಎಸ್‌ಪಿ ಮೃಗಾಂಕ್ ಶೇಖರ್ ಪಾಠಕ್, ಮಹಿಳೆ ಲಿಖಿತ ದೂರು ಸಲ್ಲಿಸಿದ್ದು, ಸ್ಥಳಕ್ಕೆ ತಂಡವನ್ನು ಕಳುಹಿಸಲಾಗಿದೆ. ಈ ವಿಷಯವನ್ನು ಪರಿಶೀಲಿಸಲಾಗುತ್ತಿದ್ದು, ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ (ಏಜೆನ್ಸೀಸ್).